ADVERTISEMENT

ನೀರಿನ ಸಮಸ್ಯೆಯ ವಸ್ತುಸ್ಥಿತಿ ವರದಿಯಿಲ್ಲ; ಅಧಿಕಾರಿಗಳಿಗೆ ತರಾಟೆ

​ಪ್ರಜಾವಾಣಿ ವಾರ್ತೆ
Published 10 ಮೇ 2019, 13:54 IST
Last Updated 10 ಮೇ 2019, 13:54 IST
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರನಾಯಕ ಅಧ್ಯಕ್ಷತೆಯಲ್ಲಿ ಶುಕ್ರವಾರ ಬರ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಯಿತು
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರನಾಯಕ ಅಧ್ಯಕ್ಷತೆಯಲ್ಲಿ ಶುಕ್ರವಾರ ಬರ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಯಿತು   

ರಾಯಚೂರು: ಬೇಸಿಗೆ ಹಾಗೂ ಬರಗಾಲದಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿರುವ ಕುಡಿಯುವ ನೀರಿನ ಸಮಸ್ಯೆಯ ಚಿತ್ರಣ ನೀಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕುಮಾರನಾಯಕ ಅಸಮಾಧಾನ ವ್ಯಕ್ತಪಡಿಸಿ, ಜಿಲ್ಲಾಮಟ್ಟದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಬರ ಪರಿಹಾರ ಕಾಮಗಾರಿಗಳ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಸಮಸ್ಯೆಗಳ ಚಿತ್ರಣ ನೀಡಲು ಅಧಿಕಾರಿಗಳಿಂದ ಆಗದಿರುವುದು ಸಮಂಜಸವಲ್ಲ. ಅಕ್ಕಪಕ್ಕದಲ್ಲಿ ಕುಳಿತು ಒಬ್ಬರಿಗೊಬ್ಬರು ಮಾಹಿತಿ ವಿನಿಮಯ ಮಾಡಿಕೊಂಡರೆ ಹೇಗೆ?’ ಎಂದು ಜಿಲ್ಲಾಧಿಕಾರಿ ಬಿ.ಶರತ್ ಹಾಗೂ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮೊಹ್ಮದ್‌ ಯೂಸೂಫ್‌ ಅವರನ್ನು ಪ್ರಶ್ನಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಲಾಗಿದ್ದು, ಎಲ್ಲ ತಾಲ್ಲೂಕುಗಳಲ್ಲಿ ಕಂಟ್ರೋಲ್‌ ರೂಮ್ ತೆರೆಯಲಾಗಿದೆ’ ಎಂದರು.

ಗ್ರಾಮೀಣ ಕುಡಿಯುವ ನೀರು ವಿಭಾಗದ ಎಂಜಿನಿಯರುಗಳನ್ನು ಪ್ರಶ್ನಿಸಿದ ಕುಮಾರನಾಯಕ ಅವರು, ‘ಸಿಆರ್‌ಎಫ್‌ ಯೋಜನೆಯಡಿ ತಾಲ್ಲೂಕು ಮಟ್ಟದ ಟಾಸ್ಕ್‌ ಫೋರ್ಸ್‌ ಸಮಿತಿಯಿಂದ ಅನುಮೋದನೆಗೊಂಡ ಕುಡಿಯುವ ನೀರಿನ ಕಾಮಗಾರಿಗಳ ಪರಿಶೀಲನೆ ಕೈಗೆತ್ತಿಕೊಂಡಾಗ, ಮೂರನೇ ಹಂತದ ಕಾಮಗಾರಿಗಳು ಬೇರೆ ತಾಲ್ಲೂಕುಗಳಲ್ಲಿ ಕೆಲವು ಪೂರ್ಣಗೊಂಡಿವೆ. ಅನುದಾನವೂ ಖರ್ಚು ಮಾಡಲಾಗಿದೆ. ಮಸ್ಕಿ ಮತ್ತು ಸಿಂಧನೂರಿನಲ್ಲಿ ಪ್ರಗತಿಯಲ್ಲಿವೆ ಎಂದು ನಮೂದು ಮಾಡಲಾಗಿದೆ. ಅನುದಾನವೂ ಖರ್ಚಾಗದಿರುವ ಬಗ್ಗೆ ವಿವರ ಕೊಡಿ’ ಎಂದರು.

ಎಂಜಿನಿಯರುಗಳು ಅಸಮರ್ಪಕವಾದ ಮಾಹಿತಿ ನೀಡಿದ್ದಕ್ಕೆ ಕೋಪಗೊಂಡ ವ್ಯಕ್ತಿಪಡಿಸಿ, ‘ಬೇಜವಾಬ್ದಾರಿ ವರ್ತನೆ ಕಾಣುತ್ತಿದೆ. ಇದ್ದೂ ಇಲ್ಲದಂತಿರುವ ಇಂತಹವರು ಬೇಕಾಗಿಲ್ಲ. ಬೇರೆಯವರಿಗೆ ಚಾರ್ಜ್‌ ನೀಡಿ’ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಮಾಹಿತಿ ನೀಡಲು ಎಂಜಿನಿಯರುಗಳು ತಡವರಿಸಿದರು. ‘ಕೆಲಸ ಮಾಡಲು ಇಷ್ಟವಿಲ್ಲ. ಆದ್ದರಿಂದ ಸಮಸ್ಯೆಯಿಲ್ಲವೆಂದರೆ ಕೆಲಸ ಮಾಡುವ ಅಗತ್ಯವಿಲ್ಲ ಎಂದು ತಿಳಿದುಕೊಂಡಂತಿದೆ. ತಕ್ಷಣಕ್ಕೆ ಕ್ರಮ ಕೈಗೊಂಡರೆ ಜನರಿಗೆ ತೊಂದರೆಯಾಗಲಿದೆ ಎಂಬ ಕ್ರಮ ಕೈಗೊಳ್ಳುತ್ತಿಲ್ಲ. ಜಿಲ್ಲಾಧಿಕಾರಿಯವರು ಎಂಜಿನಿಯರಿಂದ ವಿವರಣೆ ಪಡೆದುಕೊಂಡು ಮುಂದಿನ ಕ್ರಮ ಜರುಗಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಇಲ್ಲಿನ ಸಮಸ್ಯೆಗಳನ್ನು ನೋಡಿದರೆ ಆಫ್ರಿಕಾದಂತಹ ದೇಶದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದಂತಿದೆ. ಬೇರೆ ದೇಶದ ಹೆಸರೇಕೆ, 20 ವರ್ಷದ ಹಿಂದಿನ ಪರಿಸ್ಥಿತಿಯೇ ರಾಯಚೂರಿನಲ್ಲಿದೆ. ಅಧಿಕಾರಿಗಳ ಮಾಹಿತಿಯೂ ಅಪೂರ್ಣವಾಗಿದ್ದು, ತೃಪ್ತಿದಾಯಕವಾಗಿಲ್ಲ’ ಎಂದರು.

‘ಚುನಾವಣೆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹೇಳಿದ್ದು, ವೇದವಾಕ್ಯವಿದ್ದಂತೆ. ಕೆಲಸ ಮಾಡದ ಅಧಿಕಾರಿಗಳನ್ನು ತೆಗೆದು ಹಾಕಬೇಕಿತ್ತು.ಕುಡಿಯುವ ನೀರಿನ ಕಾಮಗಾರಿಗಳ ಬಿಲ್‌ಗಳ ವಿವರವನ್ನು ಸರಿಯಾಗಿ ನೀಡದ ಎಂಜಿನಿಯರುಗಳ ಧೋರಣೆ ಸರಿಯಿಲ್ಲ. ಸಭೆ ಮುಗಿದ ನಂತರ ಜಿಲ್ಲಾಧಿಕಾರಿ ಹಾಗೂ ಉಪ ಕಾರ್ಯದರ್ಶಿಯವರಲ್ಲಿ ಬಿಲ್‌ಗಳನ್ನು ತಂದು ತೋರಿಸಬೇಕು’ ಎಂದು ಸೂಚಿಸಿದರು.

ನೀರಿನ ಸಮಸ್ಯೆ:

ಜಿಲ್ಲೆಯಲ್ಲಿ ಒಟ್ಟು 1,363 ಜನವಸತಿಗಳಿದ್ದು, 30 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ರಾಯಚೂರು ತಾಲ್ಲೂಕಿನಲ್ಲಿ ಅತಿಹೆಚ್ಚು 21 ಗ್ರಾಮಗಳಲ್ಲಿ ಸಮಸ್ಯೆ ಇದೆ. ಇವರೆಗೂ 418 ಗ್ರಾಮಗಳಲ್ಲಿ 457 ಕೊಳವೆಬಾವಿಗಳನ್ನು ಕೊರೆಯಲಾಗಿದೆ. 318 ಕೊಳವೆಬಾವಿಗಳಿಗೆ ಮಾತ್ರ ನೀರು ಸಿಕ್ಕಿದೆ. ಕುಡಿಯುವ ನೀರು ಒದಗಿಸುವುದಕ್ಕೆ ಸಂಬಂಧಿಸಿದಂತೆ 60,177 ಮೀಟರ್‌ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ಬಾಕಿ ಇದೆ. 38 ಕಡೆಗಳಲ್ಲಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕಿದೆ. ಇದರಲ್ಲೂ ಅತಿಹೆಚ್ಚು ರಾಯಚೂರು ತಾಲ್ಲೂಕಿನಲ್ಲಿ 17 ಕಡೆ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕಿದೆ.

ಲಿಂಗಸುಗೂರು ತಾಲ್ಲೂಕಿನ ನಾಲ್ಕು ಗ್ರಾಮಗಳಿಗೆ ಆರು ಟ್ಯಾಂಕರ್‌ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಒಂದು ದಿನಕ್ಕೆ ಒಟ್ಟು 12 ಟ್ರಿಪ್‌ ನೀರು ಪೂರೈಕೆಯಾಗುತ್ತಿದೆ. 87 ಗ್ರಾಮಗಳಲ್ಲಿ ಒಟ್ಟು 98 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ರೂಪದಲ್ಲಿ ಪಡೆದುಕೊಂಡು, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಒಟ್ಟು 175 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದು ಎನ್ನುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.