ADVERTISEMENT

ಉದ್ಯೋಗ ಬಿಟ್ಟು ವಯೋವೃದ್ಧರ ಸೇವೆಗೆ ನಿಂತ ರತೀಶ್‌

ಡಿ.ಎಚ್.ಕಂಬಳಿ
Published 31 ಆಗಸ್ಟ್ 2019, 19:30 IST
Last Updated 31 ಆಗಸ್ಟ್ 2019, 19:30 IST
ಸಿಂಧನೂರಿನ ಪಿಡಬ್ಲ್ಯೂಡಿ ಕ್ಯಾಂಪ್‌ನಲ್ಲಿರುವ ‘ಮಧುಮತಿ ಸಾಯಿರಾಮ’ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದ ವೃದ್ದರೊಂದಿಗೆ ರತೀಶ ದಿವಾನ್
ಸಿಂಧನೂರಿನ ಪಿಡಬ್ಲ್ಯೂಡಿ ಕ್ಯಾಂಪ್‌ನಲ್ಲಿರುವ ‘ಮಧುಮತಿ ಸಾಯಿರಾಮ’ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದ ವೃದ್ದರೊಂದಿಗೆ ರತೀಶ ದಿವಾನ್   

ಸಿಂಧನೂರು:ನಗರದ ಪಿಡಬ್ಲ್ಯೂಡಿ ಕ್ಯಾಂಪ್‌ನಲ್ಲಿರುವ ರತೀಶ್ ದಿವಾನ್ ಅವರು ಸದ್ದಿಲ್ಲದೆ ವಯೋವೃದ್ಧರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಡಿಪ್ಲೊಮಾ ಸಿವಿಲ್ ಎಂಜಿನಿಯರಿಂಗ್ ಓದಿ ಅರಬ್ ದೇಶದ ಕತಾರ್‌ನಲ್ಲಿಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಉದ್ಯೋಗ ಕೈಬಿಟ್ಟು ವಾಪಸ್‌ ಬಂದು 2017ರಲ್ಲಿ ತಂದೆ ಮತ್ತು ತಾಯಿ ಹೆಸರು ಒಂದುಗೂಡಿಸಿ ‘ಮಧುಮತಿ ಸಾಯಿರಾಮ’ ವೃದ್ಧಾಶ್ರಮ ಪ್ರಾರಂಭಿಸಿದ್ದಾರೆ. ಇದು ಆರ್.ಎಚ್.ನಂ.3 ಕ್ಯಾಂಪ್‌ ಮಾರ್ಗದಲ್ಲಿದೆ.

‘ವಿದೇಶದಲ್ಲಿ ಸಂಪಾದಿಸಿದ ಹಣದಿಂದ 7 ಎಕರೆ ಜಮೀನು ಖರೀದಿಸಿದ್ದಾರೆ. 10 ಕೊಠಡಿಗಳಿರುವ ಆಶ್ರಮ ನಿರ್ಮಿಸಿದ್ದು, 50 ಜನರಿಗೆ ವಸತಿ ಕಲ್ಪಿಸುವ ಗುರಿ ಇದೆ. ಅಪ್ಪಟ ದೈವಭಕ್ತರಾಗಿ ವೃದ್ಧರ ಆರೈಕೆಯನ್ನೇ ದೇವರ ಪ್ರಾರ್ಥನೆ ಎಂದು ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದಾರೆ’ ಎಂದು ರತೀಶ್‌ ಅವರ ಸಹಪಾಠಿಗಳಾದ ಡಾ.ಚೆನ್ನನಗೌಡ ಮತ್ತು ಎಂ.ಅಮರೇಗೌಡ ವಕೀಲ ವಿವರಿಸಿದರು.

ADVERTISEMENT

ವೃದ್ದರ ಆರೈಕೆಗೆ ನೌಕರರಿಲ್ಲ, ದಾರಿಯರಿಲ್ಲ. ಅಡುಗೆ ಮಹಿಳೆಯನ್ನು ಹೊರತು ಪಡಿಸಿದರೆ ಎಲ್ಲ ಆರೈಕೆಯನ್ನು ರತೀಶ್ ದಿವಾನ್ ಅವರೇ ನೋಡಿಕೊಳ್ಳುತ್ತಿದ್ದಾರೆ.ಪಕ್ಕದಲ್ಲಿಯೇ ಜಮೀನಿದೆ. ಅದರಲ್ಲಿ ಸುಂದರವಾದ ಕೈ ತೋಟವಿದೆ.

ಪಿಡಬ್ಲ್ಯೂಡಿ ಕ್ಯಾಂಪ್‌ನಲ್ಲಿ ಪ್ರತ್ಯೇಕ ವಾಸದ ಮನೆ ಇದೆ. ರತೀಶ್ ಅವರಿಗೆ ಇಬ್ಬರು ಮಕ್ಕಳಿದ್ದು, ಮಗ ಸಿದ್ಧಉಡುಪು ಮಾರಾಟ ಮಳಿಗೆ ನಡೆಸುತ್ತಿದ್ದರೆ, ಮಗಳು ಸಾಫ್ಟ್‌ವೇರ್‌ ಎಂಜಿನಿಯರ್. ವೃದ್ಧಾಶ್ರಮ ನಡೆಸಲು ಇಡೀ ಕುಟುಂಬದ ಸದಸ್ಯರು ಸಹಕಾರ ನೀಡುತ್ತಿದ್ದಾರೆ.

ಪ್ರತಿನಿತ್ಯ ಬೆಳಿಗ್ಗೆ 3 ಗಂಟೆಗೆ ಎದ್ದು ಶೌಚಾಲಯ ಸ್ವಚ್ಛಗೊಳಿಸುವುದು, ಬೆಡ್‍ಶೀಟ್ ತೊಳೆಯುವುದು, ಅಡುಗೆ ತಯಾರಿಗೆ ನೆರವಾಗುವುದು, ಆಶ್ರಮ ವಾಸಿಗಳಿಗೆ ಯೋಗ, ಧ್ಯಾನ ಮಾಡಿಸುವುದು ರತೀಶ್‌ ಅವರ ದಿನಚರಿ.

‘ವೆಂಕಟರಾವ್ ನಾಡಗೌಡರು ಸಚಿವರಾಗಿದ್ದಾಗ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗೆ ವೃದ್ಧಾಶ್ರಮಕ್ಕೆ ನೆರವು ಒದಗಿಸುವಂತೆ ಹೇಳಿದ್ದರು. ಹಲವು ಬಾರಿ ಅಲೆದು ಸಾಕಾಗಿ ಸುಮ್ಮನಿದ್ದೇನೆ. ಸರ್ಕಾರದಿಂದ ನಯಾಪೈಸೆ ನೆರವು ಸಿಕ್ಕಿಲ್ಲ. ಸಿಂಧನೂರಿನ ನೇತ್ರ ತಜ್ಞ ಡಾ.ಚೆನ್ನನಗೌಡ ಪಾಟೀಲ ಮತ್ತು ಅವರ ಸ್ನೇಹಿತರು ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಸರ್ಕಾರದಿಂದ ಯಾವುದೇ ನೆರವು ಸಿಗುತ್ತಿಲ್ಲ’ ಎಂದು ರತೀಶ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.