ADVERTISEMENT

ಮುದಗಲ್‌ ಪ್ರಾಚೀನ ಚರ್ಚ್‌ನಲ್ಲಿ ಕ್ರಿಸ್ಮಸ್‌ ಸಂಭ್ರಮ

ಶರಣ ಪ್ಪ ಆನೆಹೊಸೂರು
Published 22 ಡಿಸೆಂಬರ್ 2021, 19:30 IST
Last Updated 22 ಡಿಸೆಂಬರ್ 2021, 19:30 IST
ಮುದಗಲ್ ಪಟ್ಟಣದಲ್ಲಿರುವ ಪ್ರಾಚೀನ ರೋಮನ್ ಕ್ಯಾಥೋಲಿಕ್ ಚರ್ಚ್ ಜೀರ್ಣೋದ್ಧಾರ ಮಾಡಲಾಗುತ್ತಿದೆ
ಮುದಗಲ್ ಪಟ್ಟಣದಲ್ಲಿರುವ ಪ್ರಾಚೀನ ರೋಮನ್ ಕ್ಯಾಥೋಲಿಕ್ ಚರ್ಚ್ ಜೀರ್ಣೋದ್ಧಾರ ಮಾಡಲಾಗುತ್ತಿದೆ   

ಮುದಗಲ್: ಪಟ್ಟಣದ ರೋಮನ್ ಕ್ಯಾಥೋಲಿಕ್ ಚರ್ಚ್ ಕ್ರಿ.ಶ. 1438 ರಲ್ಲಿ ನಿರ್ಮಾಣಗೊಂಡು ದಕ್ಷಿಣ ಭಾರತದಲ್ಲಿಯೇ ಅತ್ಯಂತ ಪ್ರಾಚೀನ ಚರ್ಚ್ ಆಗಿದ್ದು, ಇದು ಏಸುಕ್ರುಸ್ತನ ಸ್ಮಾರಕ ಭವನವೆಂದು ಕರೆಯುಲಾಗುತ್ತಿದೆ. ಇದೀಗ ಕ್ರಿಸ್ಮಸ್‌ ಹಬ್ಬವನ್ನು ಸಂಭ್ರಮದಿಂದ ಆಚರಿಸ ಸಿದ್ಧತೆ ಮಾಡಲಾಗುತ್ತಿದೆ.

ಡಿಸೆಂಬರ್‌ 24 ರಂದು ಕ್ರಿಸ್ಮಸ್‌ ಆಚರಣೆ ನಿಮಿತ್ತ ಪವಿತ್ರ ಹೃದಯ ದೇವಾಲಯ(ಚರ್ಚ್)ದಲ್ಲಿ ರಾತ್ರಿ ಪ್ರಾರ್ಥನೆಗೆ ಚಾಲನೆ ನೀಡಲಾಗುತ್ತದೆ. ಗುಚ್ಚ ಕ್ಯಾರಿಲ್ ಹಾಡುವ ಮೂಲಕ ಬಲಿ ಪೂಜೆ ಪ್ರಾರ್ಥನೆ ನಡೆಯಲಿವೆ. ಮಧ್ಯೆರಾತ್ರಿ 12 ಗಂಟೆಗೆ ಏಸುಕ್ರಿಸ್ತನ ನೆನಪಿಗಾಗಿ ಗೋದಲೆ(ಕ್ರಿಬ್)ಯಲ್ಲಿರುವ ಬಾಲ ಏಸುವಿನ ಸ್ವರೂಪದ ಮೂರ್ತಿ ಅನಾವರಣ ಮಾಡುತ್ತಾರೆ.

‘ಕ್ರೈಸ್ತರ ಶಾಂತಿ ಸಂದೇಶವನ್ನು ಸಾರಿ, ಎಲ್ಲಾ ವರ್ಗದ ಜನರಿಗಾಗಿ ಸಾರ್ವತ್ರಿಕ ಪ್ರಾರ್ಥನೆ ಮಾಡುತ್ತೇವೆ’ ಎಂದು ಚರ್ಚ್‌ ಧರ್ಮಗುರು ಫಾಧರ್ ಮಾಕ್ಸಿಮ್ ಡಾಯಾಸ್ ತಿಳಿಸಿದರು.

ADVERTISEMENT

‘ಡಿಸೆಂಬರ್‌ 25 ರಂದು ಕ್ರಿಸ್ಮಸ್‌ ದಿನವಾಗಿದ್ದು, ಪ್ರಾರ್ಥನೆ ಸಮಯದಲ್ಲಿ ಸರ್ವರಿಗೆ ಪ್ರಾರ್ಥಿಸುವುದರ ಜತೆಗೆ ನವಜಾತ ಶಿಶುಗಳು, ಜನ್ಮ ನೀಡಿದ ತಾಯಿಂದಿರ ಪರವಾಗಿ ಪ್ರಾರ್ಥನೆ ಮಾಡುತ್ತಾರೆ. ಆನಂತರ ಭಕ್ತರು ಮನೆ ಮನೆಗೆ ಹೋಗಿ ಕ್ರಿಸ್ಮಸ್ ಶುಭಾಶಯವನ್ನು ವಿನಮಯ ಮಾಡಿತ್ತಾರೆ’ ಎಂದು ವಿಚಾರಣೆ ಗುರು ಫಾಧರ್ ಸುನೀಲ್ ಕುಮಾರ ತಿಳಿಸಿದರು.

ಚರ್ಚ್‌ ಇತಿಹಾಸ: ಆಂಗ್ಲರು ಮುದಗಲ್‌ಗೆ ಕಾಲು ಇಡುವುದಕ್ಕೆ ಪೂರ್ವದಲ್ಲಿ ಇಲ್ಲಿ ಕ್ರೈಸ್ತ ಧರ್ಮವು ಭಾರತಕ್ಕೆ ಪ್ರವೇಶಿಸಿತ್ತು. ವಿಜಯನಗರ ಅರಸರ ಕಾಲದಲ್ಲಿ ಪೋರ್ಚುಗೀಸರ ಆಗಮನದೊಂದಿಗೆ ಪಟ್ಟಣಕ್ಕೆ ರೋಮನ್ ಕ್ಯಾಥೋಲಿಕ್ ಕ್ರೈಸ್ತರು ಕಾಲಿಟ್ಟರು. ಕ್ರೈಸ್ತ ಧರ್ಮವು ಬೆಳೆದು ಬಾಳಿ ಬೆಳಗಿ ಇಲ್ಲಿನ ಜನರ ಜನಜೀವನಕ್ಕೆ ಶೈಕ್ಷಣಿಕ, ಸಂಸ್ಕೃತಿಗಳಿಗೆ ತನ್ನದೇ ಆದ ವಿಶಿಷ್ಟ ಕೊಡುಗೆ ಸಲ್ಲಿಸಿ ಮುದಗಲ್ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಲು ಶ್ರಮಿಸಿದೆ ಎನ್ನುವುದು ಸುನೀಲ್‌ಕುಮಾರ್‌ ಅವರ ವಿವರಣೆ.

ವಿಜಯನಗರದ ಅರಸರು, ವಿಜಯಪುರದ ಸುಲ್ತಾನರು ನೀಡಿದ ಪ್ರೋತ್ಸಾಹ ಪೋಷಣೆಗಳ ಪರಿಣಾಮವಾಗಿ ಕ್ರೈಸ್ತ ಧರ್ಮವು ಮುದಗಲ್‌ನಲ್ಲಿ ವ್ಯಾಪಿಸಿತು. ಇದರಿಂದ ಪಟ್ಟಣದಲ್ಲಿ ಕ್ರೈಸ್ತ ಧರ್ಮ ಭದ್ರವಾಗಿ ಅಡಿಯಿಡುವುದಕ್ಕೆ ಕಾರಣವಾಯಿತು. ಧರ್ಮಬೋಧನೆಯ ಜತೆಗೆ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ವೈದ್ಯಕೀಯ ಹೀಗೆ ಇನ್ನಿತರ ಕ್ಷೇತ್ರದಲ್ಲಿ ಪಟ್ಟಣದ ಭವಿಷ್ಯವನ್ನು ಭವ್ಯವಾಗಿ ರೂಪಿಸಲು ನೆರವಾಯಿತು.

ಕ್ರಿ.ಶ. 1557ರಲ್ಲಿ ವಿಜಯಪುರದ ಇಬ್ರಾಹಿಂ ಆದಿಲ್ ಶಾಹಿ ಮುದಗಲ್ ಚರ್ಚ್ ಅಭಿವೃದ್ಧಿಗಾಗಿ ಇನಾಂಭೂಮಿ ನೀಡಿದ್ದರು ಎಂದು ಡೆಪ್ಯೂಟಿ ಕಮೀಷನರ್ ಬಶೀರ್ ಅಹ್ಮದ್ ಅವರು ರಚಿಸಿದ ಬಿಜಾಪುರ ಇತಿಹಾಸ ಕೃತಿಯಲ್ಲಿ ತಿಳಿದು ಬರುತ್ತಿದೆ. 16ನೇ ಶತಮಾನದ ವೇಳೆಯಲ್ಲಿ ಪೋರ್ಚುಗೀಸರ ಪಾದ್ರಿಗಳಿಂದ ಫಾದರ್ ಜೋಸೆಫ್ ರಿಚರ್ಡ್, ಒವೆನ್ ಸೇರಿ ಇನ್ನಿತರು ಪಾದ್ರಿಗಳು ಗೋವಾಕ್ಕೆ ಭೇಟಿ ನೀಡುವ ವೇಳೆಯಲ್ಲಿ ಮುದಗಲ್ ಚರ್ಚ್ಗೆ ಭೇಟಿ ನೀಡಿದರು ಎಂದು ತಿಳಿದು ಬರುತ್ತಿದೆ.

ಆಸ್ಪತ್ರೆ: ಚರ್ಚ್ ಅಧೀನದಲ್ಲಿ ಇಟಲಿ ಮೂಲದ ಸಿಸ್ಟರ್ ಅಂಚೆಲ್ಲಾ ಅವರು ಸಂತ ಅನ್ನಮ್ಮ ಎಂಬ ಹೆಸರಿನ ಆಸ್ಪತ್ರೆ ತೆರೆಯಲಾಗಿದೆ. ಅಂದು ಈ ಆಸ್ಪತ್ರೆಯು ತಾಲ್ಲೂಕಿಗೆ ದೊಡ್ಡದಾಗಿತ್ತು. ಚರ್ಚ್ ಅಧೀನದಲ್ಲಿ ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ನಡೆಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.