ADVERTISEMENT

ರೋಗಿಗಳ ಪಾಲಿನ ಆಪತ್ಬಾಂಧವ ರಿಮ್ಸ್

ಸೇವೆ ವಿಸ್ತಾರವಾಗುತ್ತಿದೆ; ಮೂಲ ಸೌಕರ್ಯ, ಹುದ್ದೆಗಳು ಹೆಚ್ಚಾಗುತ್ತಿಲ್ಲ

ನಾಗರಾಜ ಚಿನಗುಂಡಿ
Published 9 ಜುಲೈ 2018, 17:23 IST
Last Updated 9 ಜುಲೈ 2018, 17:23 IST
ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್‌) ಬೋಧಕ ಆಸ್ಪತ್ರೆಯ ನೋಟ
ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್‌) ಬೋಧಕ ಆಸ್ಪತ್ರೆಯ ನೋಟ   

ರಾಯಚೂರು: ಜಿಲ್ಲೆಯ ವಿವಿಧ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ದೊರೆಯದ ಆರೋಗ್ಯ ಸೇವೆಯ ಕೊರತೆಯನ್ನು ರಾಯಚೂರು ವೈದ್ಯಕೀಯ ವಿಜ್ಞಾನ (ರಿಮ್ಸ್‌) ಬೋಧಕ ಆಸ್ಪತ್ರೆವೊಂದೇ ನಿಭಾಯಿಸುತ್ತಾ ಬರುತ್ತಿರುವುದರಿಂದ ಆಸ್ಪತ್ರೆಯಲ್ಲಿ ಲಭ್ಯವಿರುವ ಮೂಲ ಸೌಕರ್ಯಗಳು ಸಾಕಾಗುತ್ತಿಲ್ಲ!

ರಿಮ್ಸ್‌ ಆಸ್ಪತ್ರೆ 2014 ರಲ್ಲಿ ಆರಂಭವಾದ ವರ್ಷದಲ್ಲಿ ದಿನಕ್ಕೆ ಸರಾಸರಿ 700 ರೋಗಿಗಳ ನೋಂದಣಿ ಆಗುತ್ತಿತ್ತು. ಆನಂತರ ಪ್ರತಿ ವರ್ಷವೂ ಹೊರರೋಗಿಗಳು ಮತ್ತು ಒಳರೋಗಿಗಳ ನೋಂದಣಿ ಏರುತ್ತಲೇ ಬಂದಿದ್ದು, ಸದ್ಯಕ್ಕೆ ಪ್ರತಿನಿತ್ಯ ಸರಾಸರಿ 1,400 ಜನರು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಯು 2018 ರಿಂದ ಜಾರಿಗೆ ಬರುವಂತೆ 100 ರಿಂದ 150 ಕ್ಕೆ ಏರಿಕೆ ಮಾಡಿರುವುದರಿಂದ ಕಾಲೇಜು ಕೋಣೆಗಳು ಮತ್ತು ಆಸ್ಪತ್ರೆಯ ಸೇವಾ ಸೌಲಭ್ಯಗಳನ್ನು ವಿಸ್ತರಿಸುವ ಅನಿವಾರ್ಯತೆ ಈಗ ಎದುರಾಗಿದೆ.

ಸ್ತ್ರೀ ರೋಗ ವಿಭಾಗ, ನೇತ್ರ ಚಿಕಿತ್ಸಾ ವಿಭಾಗ, ಕಿವಿ, ಮೂಗು, ಗಂಟಲು ಚಿಕಿತ್ಸೆ ವಿಭಾಗ ಸೇರಿದಂತೆ ಆಸ್ಪತ್ರೆಯಲ್ಲಿ 11 ವಿಭಾಗಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಗಂಭೀರ ಕಾಯಿಲೆಯ ರೋಗಿಗಳನ್ನು ಸೂಪರ್‌ ಸ್ಪೆಷಾಲಿಟಿ ಸೌಲಭ್ಯವಿರುವ ಒಪೆಕ್‌ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ. ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ವೈದ್ಯಕೀಯ ಕಾಲೇಜಿಗಾಗಿ ಹಾಗೂ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಗೆ ಅನುಗುಣವಾಗಿ 26 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು, 16 ಸಹ ಪ್ರಾಧ್ಯಾಪಕರ ಹುದ್ದೆಗಳು ಹಾಗೂ ಸ್ಟಾಫ್‌ ನರ್ಸ್‌ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ.

ADVERTISEMENT

ಆಸ್ಪತ್ರೆಯ ನೋಂದಣಿ ವಿಭಾಗದ ದಾಖಲೆಗಳ ಪ್ರಕಾರ, ಪಕ್ಕದ ಯಾದಗಿರಿ ಜಿಲ್ಲೆಯ ತಾಲ್ಲೂಕುಗಳಿಂದ ಹೆರಿಗೆ ಮಾಡಿಸಿಕೊಳ್ಳಲು ಹಾಗೂ ಅನಾರೋಗ್ಯ ಪೀಡಿತರು ರಿಮ್ಸ್‌ ಆಸ್ಪತ್ರೆಗೆ ದಾಖಲಾಗುತ್ತಾರೆ. ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಗಡಿ ಭಾಗದ ಗ್ರಾಮೀಣ ಜನರು ಕೂಡಾ ರಿಮ್ಸ್‌ ಆಸ್ಪತ್ರೆಯಲ್ಲಿ ಸೇವೆ ಪಡೆಯುತ್ತಾರೆ. ‘ಸರ್ಕಾರಿ ನಿಯಮಾನುಸಾರ ಯಾರಿಗೂ ವೈದ್ಯಕೀಯ ಸೇವೆ ನಿರಾಕರಿಸಲು ಆಗುವುದಿಲ್ಲ. ಆಸ್ಪತ್ರೆಗೆ ಬರುವ ಎಲ್ಲ ರೋಗಿಗಳಿಗೆ ಲಭ್ಯವಿರುವ ಚಿಕಿತ್ಸೆ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ. ಒಳರೋಗಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ 520 ರಷ್ಟಿದ್ದ ಆಸ್ಪತ್ರೆಯ ಹಾಸಿಗೆಗಳ ಸಂಖ್ಯೆಯನ್ನು 640 ಕ್ಕೆ ಹೊಂದಿಸಿ ಏರಿಕೆ ಮಾಡಲಾಗಿದೆ ’ ಎಂದು ರಿಮ್ಸ್‌ ಆಡಳಿತ ನಿರ್ದೇಶಕಿ ಡಾ.ಕವಿತಾ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಭರ್ತಿಯಾಗದ ಹುದ್ದೆಗಳು: ಹೊಸದಾಗಿ ರಚನೆಯಾದ ಮಸ್ಕಿ ಮತ್ತು ಸಿರವಾರ ತಾಲ್ಲೂಕುಗಳಲ್ಲಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳನ್ನು ಸ್ಥಾಪಿಸಬೇಕಿದೆ. ದೇವದುರ್ಗ, ಮಾನ್ವಿ, ಲಿಂಗಸುಗೂರು ಹಾಗೂ ಸಿಂಧನೂರು ತಾಲ್ಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರನ್ನು ಮತ್ತು ವಿವಿಧ ಆಧುನಿಕ ಯಂತ್ರೋಪಕರಣಗಳನ್ನು ಒದಗಿಸಬೇಕಿದೆ. ಜನಸಂಖ್ಯೆಗೆ ಅನುಗುಣವಾಗಿ ಯಾವುದೇ ತಾಲ್ಲೂಕಿನಲ್ಲಿ ಆಸ್ಪತ್ರೆಗಳು ಮೇಲ್ದರ್ಜೆಗೆ ಏರಿಕೆಯಾಗಿಲ್ಲ. ಹೆಚ್ಚಿನ ಚಿಕಿತ್ಸೆಗಾಗಿ ಎಲ್ಲ ಕಡೆಗಳಿಂದಲೂ ಜನರು ರಿಮ್ಸ್‌ನತ್ತ ಧಾವಿಸುತ್ತಿದ್ದಾರೆ.

ರಾಯಚೂರು ತಾಲ್ಲೂಕು ಸಾಕಷ್ಟು ವಿಸ್ತಾರವಾಗಿದ್ದರೂ ಜೆ.ಮಲ್ಲಾಪುರದಲ್ಲಿ ಮಾತ್ರ ಒಂದು ಸಮುದಾಯ ಆರೋಗ್ಯ ಕೇಂದ್ರ ತೆರೆಯಲಾಗಿದೆ. ಆಸ್ಪತ್ರೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸೂಕ್ತ ರಸ್ತೆ ಸಂಪರ್ಕ ಇಲ್ಲ. ಇದರಿಂದ ರಾಯಚೂರು ತಾಲ್ಲೂಕಿನ ಜನರಿಗೆ ಆರೋಗ್ಯ ಸೇವೆಯು ಮರೀಚಿಕೆಯಾಗಿದೆ. ಬಹಳ ಜನರು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ.

ಇಡಪನೂರ, ಗಾಣಧಾಳ, ಮಟಮಾರಿ, ಗುಂಜಳ್ಳಿ, ಖಾನಪುರ, ಗಿಲ್ಲೇಸಗೂರು, ಚಂದ್ರಬಂಡಾ, ಯಾಪಲದಿನ್ನಿ ಹಾಗೂ ಕಲ್ಮಲಾದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ, ಎಲ್ಲ ಕಡೆಗಳಲ್ಲೂ ವೈದ್ಯರು ಹಾಗೂ ಇತರೆ ಹುದ್ದೆಗಳು ಭರ್ತಿಯಾಗಿಲ್ಲ. ಸದ್ಯಕ್ಕೆ ಆಯುಷ್‌ ವೈದ್ಯರಿಗೆ ತರಬೇತಿ ನೀಡಿ ನಿಯೋಜಿಸಲಾಗಿದೆ. ಅನುಮೋದನೆ ಕೊಟ್ಟು ರೋಗಿಗಳನ್ನು ರಿಮ್ಸ್‌ ಕಡೆಗೆ ರವಾನಿಸುವ ತಾಣಗಗಳಾಗಿ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು ಬದಲಾಗಿವೆ. ಜೆ.ಮಲ್ಲಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅರವಳಿಕೆ ವೈದ್ಯರಿಲ್ಲದ ಕಾರಣ, ಶಸ್ತ್ರಚಿಕಿತ್ಸೆ ಹೆರಿಗೆಗಳನ್ನು ಮಾಡಿಸುವ ವ್ಯವಸ್ಥೆ ಇಲ್ಲ. ಎಕ್ಸ್‌ ರೇ ಯಂತ್ರ ಕೆಟ್ಟು ನಿಂತಿದೆ.

ತಾಲ್ಲೂಕಿನಲ್ಲಿ ಜನರಿಗೆ ಆರೋಗ್ಯ ಸೇವೆ ನೀಡುವ ವ್ಯವಸ್ಥೆ ವಿಕೇಂದ್ರೀಕರಣವಾಗದ ಕಾರಣ ಸಣ್ಣ ಪ್ರಮಾಣದ ರೋಗಗಳಿಗೂ ರಿಮ್ಸ್‌ಗೆ ಹೋಗಬೇಕು ಎನ್ನುವಂತಾಗಿದೆ.

ರಿಮ್ಸ್‌ ಜನರಿಗೆ ದೂರವಾಗುವುದರಿಂದ ಪ್ರತ್ಯೇಕ ಜಿಲ್ಲಾಸ್ಪತ್ರೆ ಆರಂಭಿಸಲು ಪ್ರಸ್ತಾವನೆ ಹೋಗಿದೆ. ಸದ್ಯ ಯಾವ ಹಂತದಲ್ಲಿದೆ ಎಂಬುದು ಗೊತ್ತಾಗಿಲ್ಲ. ವೈದ್ಯರ ನೇಮಕಾತಿ ಹಾಗೂ ಇನ್ನಷ್ಟು ಸೌಲಭ್ಯಗಳನ್ನು ಒದಗಿಸುವ ಅಗತ್ಯವಿದೆ.
- ಡಾ. ಲಕ್ಷ್ಮೀಬಾಯಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಆಸ್ಪತ್ರೆ ಹಾಗೂ ಕಾಲೇಜಿನಲ್ಲಿ ಮೂಲ ಸೌಕರ್ಯ ವಿಸ್ತರಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಆಸ್ಪತ್ರೆಯಲ್ಲಿಯೂ ಹೊಸ ಉಪಕರಣಗಳನ್ನು ಅಳವಡಿಸಿ, ಅತ್ಯಾಧುನಿಕ ಸೌಲಭ್ಯದ ಚಿಕಿತ್ಸೆ ನೀಡುತ್ತಿದ್ದೇವೆ. ಸರ್ಕಾರವು ಅಗತ್ಯಕ್ಕೆ ತಕ್ಕಂತೆ ಅನುದಾನ ಒದಗಿಸಿದೆ.
- ಡಾ.ಕವಿತಾ ಪಾಟೀಲ, ರಿಮ್ಸ್‌ ಆಡಳಿತ ನಿರ್ದೇಶಕಿ

ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೆಲವೇ ಗ್ರಾಮಗಳ ಜನರು ಬರುತ್ತಿದ್ದಾರೆ. ಕೆಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಸಮಸ್ಯೆ ಇದೆ. ದೂರ ಇರುವ ಗ್ರಾಮಗಳ ಜನರು ರಿಮ್ಸ್‌ಗೆ ಹೋಗುತ್ತಾರೆ. ಅರವಳಿಕೆ ತಜ್ಞರನ್ನು ಒದಗಿಸುವಂತೆ ಬೇಡಿಕೆ ಇಟ್ಟಿದ್ದೇವೆ.
- ಡಾ.ಶಾರದಾ, ಜೆ.ಮಲ್ಲಾಪುರ ಸಿಎಚ್‌ಸಿ ಆಡಳಿತ ವೈದ್ಯಾಧಿಕಾರಿ

ರಿಮ್ಸ್‌ನಲ್ಲಿ ಮೊದಲಿಗಿಂತಲೂ ವ್ಯವಸ್ಥೆ ಸುಧಾರಿಸಿದೆ. ಆಸ್ಪತ್ರೆಗೆ ಬರುವ ಜನರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವು ಸೌಲಭ್ಯಗಳು ಈ ವರ್ಷದಿಂದ ಶುರುವಾಗಿವೆ.
- ಡಾ. ಬಿ. ರಮೇಶ, ರಿಮ್ಸ್‌ ಆಸ್ಪತ್ರೆಯ ಅಧೀಕ್ಷಕ

ಜೆ.ಮಲ್ಲಾಪುರ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಕೊಡುತ್ತಾರೆ. ಆಸ್ಪತ್ರೆಯಲ್ಲಿ ಏನೂ ತೊಂದರೆಯಿಲ್ಲ. ಆದರೆ, ನಮ್ಮ ಊರಿನಿಂದ ಆಸ್ಪತ್ರೆಗೆ ಬರುವುದಕ್ಕೆ ತುಂಬಾ ಸಮಸ್ಯೆ ಇದೆ. ಬಸ್‌ ಸೌಕರ್ಯವಿಲ್ಲ.
- ಹನುಮಂತ, ಕಾರ್ಮಿಕ, ಜಿ.ತಿಮ್ಮಾಪುರ ಗ್ರಾಮ

ಸರ್ಕಾರದ ಎಲ್ಲ ಆಸ್ಪತ್ರೆಗಳಲ್ಲಿ ಸಾರ್ವಜನಿಕರು ವೈದ್ಯರಿಗಾಗಿ ಕಾಯುತ್ತಾ ಕುಳಿತುಕೊಳ್ಳುವ ಪರಿಸ್ಥಿತಿ ಇದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸರಿಯಾದ ಚಿಕಿತ್ಸೆಯ ವ್ಯವಸ್ಥೆ ಮಾಡಿದರೆ, ಗ್ರಾಮೀಣ ಜನರಿಗೆ ಅನುಕೂಲವಾಗುತ್ತದೆ.
- ಚನ್ನಬಸವ ಜಾನೇಕಲ್‌, ಹೋರಾಟಗಾರ

ಏನಿದೆ?
ರೋಗಿಗಳಿಗೆ ಊಟ
ಸಿಟಿ ಸ್ಕ್ಯಾನ್‌
ರಕ್ತ ಸಂಗ್ರಹ ವಿಭಾಗ
ಎಂಆರ್‌ಐ ಶೀಘ್ರ
ಸೂಪರ್‌ ಸ್ಪೆಷಾಲಿಟಿ


ಏನಿಲ್ಲ?
ಅರವಳಿಕೆ ತಜ್ಞರು
ಸಾಕಷ್ಟು ಮೂಲ ಸೌಕರ್ಯ
ಜನಸಂಖ್ಯೆಗೆ ತಕ್ಕಂತೆ ಸಿಎಚ್‌ಸಿ
ಜನರಿಕ್‌ ಔಷಧಿ ಮಳಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.