ADVERTISEMENT

ಪಿಡಿಒ ಅಸಭ್ಯ ವರ್ತನೆ: ಆರೋಪ

ಗಾಂಧಿನಗರ ಪಂಚಾಯಿತಿ ಕಚೇರಿ  ಮುಂದೆ ಆಡಳಿತ ಮಂಡಳಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 2:32 IST
Last Updated 7 ಸೆಪ್ಟೆಂಬರ್ 2022, 2:32 IST
ಗಾಂಧಿನಗರ ಗ್ರಾ. ಪಂ. ಕಚೇರಿಯ ಎದರು ಸದಸ್ಯರು ಪ್ರತಿಭಟನೆ ನಡೆಸಿದರು
ಗಾಂಧಿನಗರ ಗ್ರಾ. ಪಂ. ಕಚೇರಿಯ ಎದರು ಸದಸ್ಯರು ಪ್ರತಿಭಟನೆ ನಡೆಸಿದರು   

ಸಿಂಧನೂರು: ತಾಲ್ಲೂಕಿನ ಗಾಂಧಿನಗರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೋಭಾರಾಣಿ ಅವರು ಸದಸ್ಯರೊಂದಿಗೆ ಏಕವಚನದಲ್ಲಿ ಮಾತನಾಡುತ್ತಾ ಸರ್ವಾಧಿಕಾರಿಯಂತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಮಂಗಳವಾರ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಪ್ರತಿಭಟನಾ ಧರಣಿ ನಡೆಸಿತು.

ಬೆಳಿಗ್ಗೆ ಗ್ರಾಮ ಪಂಚಾಯಿತಿ ಕಾರ್ಯಾಲಯ ತೆರೆಯುತ್ತಿದ್ದಂತೆ 27 ಸದಸ್ಯರ ಪೈಕಿ ಅಧ್ಯಕ್ಷ ದುರಗಪ್ಪ ಮತ್ತು ಉಪಾಧ್ಯಕ್ಷೆ ಹೊನ್ನಮ್ಮ ಸೇರಿ 26 ಜನ ಸದಸ್ಯರು ಪ್ರತಿಭಟನೆ ನಡೆಸಿ ತಕ್ಷಣ ಅಭಿವೃದ್ಧಿ ಅಧಿಕಾರಿಯನ್ನು ವರ್ಗಾಯಿಸುವಂತೆ ಜಿಲ್ಲಾ ಪಂಚಾಯಿತಿ ಇಒ ಅವರನ್ನು ಒತ್ತಾಯಿಸಿದರು.

ಲಿಂಗಸುಗೂರಿನಲ್ಲಿ ಮನೆ ಮಾಡಿರುವ ಅಭಿವೃದ್ಧಿ ಅಧಿಕಾರಿ ಶೋಭಾರಾಣಿ ಪಂಚಾಯಿತಿಗೆ ಮಧ್ಯಾಹ್ನ 1 ಗಂಟೆಗೆ ಬರುತ್ತಾರೆ. ಪುನಃ 4 ಗಂಟೆಗೆ ನಿರ್ಗಮಿಸುತ್ತಾರೆ. ಸಾಮಾನ್ಯ ಸಭೆ ಕರೆಯುತ್ತಿಲ್ಲ. ಉದ್ಯೋಗ ಖಾತ್ರಿ ಕೆಲಸ ಸೇರಿದಂತೆ ಚರಂಡಿ ಸ್ವಚ್ಛತೆ ಮಾಡಿಸುತ್ತಿಲ್ಲ. ಜನರ ಸಮಸ್ಯೆಗಳಿಗೆ ಅವರು ಸ್ಪಂದಿಸುತ್ತಿಲ್ಲ ಎಂದು ಸದಸ್ಯರು ಆರೋಪಿಸಿದರು.

ADVERTISEMENT

ಗಡುವು: ಒಂದು ವಾರದೊಳಗೆ ಅವರನ್ನು ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ಸಾಮೂಹಿಕವಾಗಿ ಎಲ್ಲ ಸದಸ್ಯರು ರಾಜೀನಾಮೆ ನೀಡುವುದಾಗಿ ಸದಸ್ಯರು ತಿಳಿಸಿದರು.

ಸದಸ್ಯರಾದ ಗೋಪಿನೀಡಿಕೃಷ್ಣ, ಯಲ್ಲಪ್ಪ ತೆಲುಗರ, ಮಧು, ಕುರಿ ಪಾಮಯ್ಯ, ಕರಿಬಸಮ್ಮ, ಮಹಾದೇವಮ್ಮ, ಈರಮ್ಮ, ನಲ್ಲಾ ಅಪ್ಪಾಜಿ, ಹುಲಿಗೆಪ್ಪ ಕಟ್ಟಿಮನಿ, ಸರಸ್ವತಿ, ನಾಗಮಣಿ, ಶ್ರೀದೇವಿ ಇದ್ದರು.

ಸ್ಪಷ್ಟೀಕರಣ: ‘ಸರ್ಕಾರದ ನಿಯಮದಂತೆ ಕೆಲಸ ಮಾಡುತ್ತಿದ್ದೇನೆ. ಸದಸ್ಯರು ಆರೋಪ ಸತ್ಯಕ್ಕೆ ದೂರವಾಗಿದೆ’ ಎಂದು ಅಭಿವೃದ್ಧಿ ಅಧಿಕಾರಿ ಶೋಭಾರಾಣಿ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.