ADVERTISEMENT

ರಾಯಚೂರು ಜಿಲ್ಲೆಲಿ ಪಡಿತರ ಪಡೆಯಲು ವೃದ್ಧರು, ಅಂಗವಿಕಲರಿಂದ ಹರಸಾಹಸ

ನಾಗರಾಜ ಚಿನಗುಂಡಿ
Published 7 ನವೆಂಬರ್ 2021, 13:28 IST
Last Updated 7 ನವೆಂಬರ್ 2021, 13:28 IST
ರಾಯಚೂರು ತಾಲ್ಲೂಕು ಶಕ್ತಿನಗರದ ಲೇಬರ್‌ ಕಾಲೋನಿ ನ್ಯಾಯಬೆಲೆ ಅಂಗಡಿ ಎದುರು ಪಡಿತರಕ್ಕಾಗಿ ಮುಗಿಬಿದ್ದ ಜನರು
ರಾಯಚೂರು ತಾಲ್ಲೂಕು ಶಕ್ತಿನಗರದ ಲೇಬರ್‌ ಕಾಲೋನಿ ನ್ಯಾಯಬೆಲೆ ಅಂಗಡಿ ಎದುರು ಪಡಿತರಕ್ಕಾಗಿ ಮುಗಿಬಿದ್ದ ಜನರು   

ರಾಯಚೂರು: ಪಡಿತರ ಹಂಚುವ‌ ನ್ಯಾಯಬೆಲೆ ಅಂಗಡಿಗಳಿಗೆ ಸರ್ಕಾರವು ಕೆಲಸದ ಸಮಯ ನಿಗದಿ ಮಾಡಿದ್ದರೂ ವಾಸ್ತವದಲ್ಲಿ ಬಹುತೇಕ ಅಂಗಡಿಗಳು ಪರಿಪಾಲನೆ ಮಾಡುತ್ತಿಲ್ಲ.

ತಿಂಗಳು ಆರಂಭದಲ್ಲಿ ಮಾತ್ರ ತೆರೆದುಕೊಳ್ಳುವ ನ್ಯಾಯಬೆಲೆ ಅಂಗಡಿಗಳ ಎದುರು ಜನದಟ್ಟಣೆ ಸಾಮಾನ್ಯವಾಗಿರುತ್ತದೆ. ಸರದಿಯಲ್ಲಿ ನಿಲ್ಲುವುದಕ್ಕೂ ಪೈಪೋಟಿ, ವಾಗ್ವಾದ ನಡೆಯುತ್ತವೆ. ಬೆಳಿಗ್ಗೆ 10 ಗಂಟೆ ನಂತರ ಅಂಗಡಿ ಎದುರು ಬಂದವರಿಗೆ ಪಡಿತರ ಸಿಗುವುದೇ ಇಲ್ಲ. ಬಯೋಮೆಟ್ರಿಕ್‌ ಕೊಟ್ಟು ಮೊದಲು ಚೀಟಿ ಪಡೆದುಕೊಳ್ಳಬೇಕು. ಮರುದಿನ ಬೇಗನೆ ನ್ಯಾಯಬೆಲೆ ಅಂಗಡಿ ಎದುರು ಚೀಲ ಹಿಡಿದು ನಿಂತುಕೊಳ್ಳಬೇಕು. ಒಟ್ಟಾರೆ, ಸಂಕಷ್ಟ ಅನುಭವಿಸದಿದ್ದರೆ ಪಡಿತರ ಸಿಗುವುದಿಲ್ಲ ಎನ್ನುವ ಸ್ಥಿತಿ ರಾಯಚೂರು ಜಿಲ್ಲೆಯಲ್ಲಿದೆ.

ಇಂತಹ ವ್ಯಾಪಕವಾದ ಸಮಸ್ಯೆಗೂ ಪರಿಹಾರ ಕಲ್ಪಿಸುವ ಕಾರ್ಯವನ್ನು ಆಹಾರ ಸರಬರಾಜ ಇಲಾಖೆಯ ಅಧಿಕಾರಿಗಳು ಮಾಡುತ್ತಿಲ್ಲ. ಇಂತಹದ್ದೇ ಮಳಿಗೆ ತೆರೆಯುತ್ತಿಲ್ಲ ಎಂದು ದೂರು ಕೊಟ್ಟರೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸಮಜಾಯಿಷಿ ಹೇಳುತ್ತಿದ್ದಾರೆ. ಬಹುತೇಕ ನ್ಯಾಯಬೆಲೆ ಅಂಗಡಿಗಳು ತಿಂಗಳಲ್ಲಿ ಮೂರರಿಂದ ನಾಲ್ಕು ದಿನಗಳು ಮಾತ್ರ ತೆರೆದುಕೊಳ್ಳುತ್ತವೆ. ಬೆಳಿಗ್ಗೆ ಕೆಲವೇ ಗಂಟೆಗಳು ಮಾತ್ರ ತೆರೆದುಕೊಳ್ಳತ್ತವೆ.

ADVERTISEMENT

‘ನಿಯಮಾನುಸಾರ ಯಾವುದೇ ನ್ಯಾಯಬೆಲೆ ಅಂಗಡಿಗಳು ತೆರೆದುಕೊಳ್ಳುವುದಿಲ್ಲ. ಇದು ಎಲ್ಲ ಕಡೆಗೂ ಇರುವ ಸಮಸ್ಯೆಯಾಗಿದ್ದರೂ ರಾಜಕಾರಣಿಗಳು ಮತ್ತು ಅಧಿಕಾರಿಗಳು ಜಾಣ ಕುರುಡತನ ಪ್ರದರ್ಶಿಸುತ್ತಿದ್ದಾರೆ. ತಿಂಗಳಾರಂಭ ಪಡಿತರವು ಬಂದಾಗ ಪ್ರತಿದಿನ ಬೆಳಿಗ್ಗೆ ಜನರು ಮುಗಿಬೀಳುತ್ತಿದ್ದಾರೆ. ಸಿಗುತ್ತದೆಯೋ ಇಲ್ಲವೋ ಎನ್ನುವ ಆತಂಕ ಸೃಷ್ಟಿಯಾಗಿರುತ್ತದೆ. ವಯೋವೃದ್ಧರು, ಅಂಗವಿಕಲರು ಅಸಹಾಯಕರಾಗಿ ಪಡಿತರವನ್ನೇ ಪಡೆದುಕೊಳ್ಳುವುದಿಲ್ಲ. ಜನದಟ್ಟಣೆಗೆ ಸಿಲುಕಿ ಕೆಲವರು ಕಾಲುಮೂಳೆ ಮುರಿದುಕೊಂಡಿದ್ದಾರೆ’ ಎನ್ನುತ್ತಾರೆ ಕರ್ನಾಟಕ ವಿದ್ಯಾರ್ಥಿ ಕ್ಷೇಮಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಶಕುಮಾರ್‌ ಅವರು.

ಯಾವುದೇ ನ್ಯಾಯಬೆಲೆ ಅಂಗಡಿಗಳ ಎದುರು ಕೆಲಸದ ಸಮಯ ಬರೆದಿಲ್ಲ. ಹೀಗಾಗಿ ಅಂಗಡಿ ತೆರೆಯುವುದು ಅನಿಶ್ಚಿತ. ಪಡಿತರ ಪೂರೈಕೆ ಆಗಿದೆಯೇ ಎಂಬುದನ್ನು ಜನರೇ ನಿಗಾ ವಹಿಸುತ್ತಿರಬೇಕು. ಸ್ವಲ್ಪ ಮೈಮರೆತರೂ ಪಡಿತರವೆಲ್ಲ ಖಾಲಿಯಾಗಿರುತ್ತದೆ. ಇಲ್ಲವೇ ಅಂಗಡಿಯವರು ಹಂಚುವುದನ್ನು ಮುಕ್ತಾಯ ಮಾಡಿಕೊಂಡಿರುತ್ತಾರೆ.


ಪಡಿತರ ಹಂಚಿಕೆಯಲ್ಲಿ ತಾರತಮ್ಯ

ಲಿಂಗಸುಗೂರು: ತಾಲ್ಲೂಕಿನಾದ್ಯಂತ ಪಡಿತರ ಹಂಚಿಕೆ ಮಾಡುವ ನ್ಯಾಯಬೆಲೆ ಅಂಗಡಿಗಳು ಸರ್ಕಾರದ ನಿಯಮಾವಳಿ ಆಧರಿಸಿ ಕೆಲಸ ನಿರ್ವಹಿಸುತ್ತಿಲ್ಲ. ಪಡಿತರ ಬಂದಾಗೊಮ್ಮೆ ಮನಸೋ ಇಚ್ಛೆ ಒಂದೆರಡು ಹಂಚಿಕೆ ಮಾಡಿ ತಾರತಮ್ಯ ನೀತಿ ಅನುಸರಿಸುತ್ತಿವೆ ಎಂದು ಜನರು ಹೇಳುತ್ತಿದ್ದಾರೆ.

ತಾಲ್ಲೂಕಿನ 192 ಗ್ರಾಮಗಳು, 110ಕ್ಕೂ ಹೆಚ್ಚು ತಾಂಡಾಗಳನ್ನು ಹೊಂದಿದ್ದು ಲಕ್ಷಾಂತರ ಜನಸಂಖ್ಯೆ ಇದೆ. ಆದರೆ, ಕೇವಲ 150 ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಅಂಗಡಿಗಳು ಬಹುತೇಕ ದಿನ ಬಂದ್‍ ಮಾಡಿಕೊಂಡಿರುತ್ತವೆ. ಪಡಿತರ ಹಂಚಿಕೆ ಮಾಡುವುದನ್ನು ಕೆಲ ಮಾಲೀಕರು ತಿಳಿಸದೆ ಹೋಗಿದ್ದು ಗ್ರಾಹಕರನ್ನು ಪರದಾಡುವಂತೆ ಮಾಡಿದೆ.

ಇ-ಕೆವೈಸಿ ಆಧಾರ್‌ ಸಂಖ್ಯೆ ಹೊಂದಿರುವವರು ಬಯೋ ಮೆಟ್ರಿಕ್‍ ಮೂಲಕ ಕುಟುಂಬದ ಪ್ರತಿಯೊಬ್ಬರು ಹೆಬ್ಬೆರಳು ಗುರುತು ನೀಡಿ ಓಟಿಪಿ ಎಂಟ್ರಿ ಮಾಡಿಸುವುದು ಕಡ್ಡಾಯ. ಬಯೋ ಮೆಟ್ರಿಕ್‍ ಕೊಡಲು ಹೋದಾಗ ಆನಲೈನ್‍ ಸಮಸ್ಯೆ ಮುಂದಿಟ್ಟು ಪಡಿತರ ಹಂಚಿಕೆ ಮಾಡುತ್ತಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ.

ಆಹಾರ ಇಲಾಖೆ ಶಿರಸ್ತೆದಾರ ಬಸವಂತಸಿಂಗ್‍ ಮಾತನಾಡಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ‘ಇ-ಕೆವೈಸಿ ಪದ್ದತಿಯಡಿ ಪ್ರತಿ ತಿಂಗಳು 10ನೇ ತಾರೀಖಿನವರೆಗೆ ಕುಟುಂಬಸ್ಥರ ಬಯೋ ಮೆಟ್ರಿಕ್‍ ಪದ್ಧತಿಯಡಿ ಹೆಬ್ಬೆರಳು ಗುರುತು ಪಡೆಯಲಾಗುತ್ತದೆ. ಉಳಿದ 20 ದಿನ ಪಡಿತರ ಹಂಚಿಕೆ ಮಾಡಲಾಗುತ್ತಿದೆ. ತಿಂಗಳುಪೂರ್ತಿ ತೆರೆದಿರಲು ಸೂಚಿಸಲಾಗಿದೆ’ ಎಂದರು.

ಪಡಿತರ ವಿತರಣೆಗೆ ಸೂಚನೆ

ಮಾನ್ವಿ: ತಾಲ್ಲೂಕು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಚೇರಿ ವ್ಯಾಪ್ತಿಗೆ ಸಿರವಾರ ತಾಲ್ಲೂಕು ಸೇರಿ ಒಟ್ಟು 135 ನ್ಯಾಯಬೆಲೆ ಅಂಗಡಿಗಳು ಒಳಪಟ್ಟಿವೆ.

ಪ್ರತಿತಿಂಗಳು ಇಲಾಖೆ ವತಿಯಿಂದ ಪಡಿತರ ಸಾಮಾಗ್ರಿಗಳು ಸರಬರಾಜು ಮಾಡಿದಾಗ ಮಾತ್ರ ಬಾಗಿಲು ತೆರೆಯುವ ಅಂಗಡಿಗಳೇ ಹೆಚ್ಚು ಎಂಬುದು ಗ್ರಾಹಕರ ದೂರು. ಪಡಿತರ ಸರಬರಾಜು ಆದ ಸುಮಾರು 8 ದಿನಗಳವರೆಗೆ ಅಂಗಡಿಗಳು ತೆರೆಯುತ್ತವೆ. ಪಡಿತರ ವಿತರಿಸಿದ ನಂತರದ ದಿನಗಳಲ್ಲಿ ಬಹುತೇಕ ಬಂದ್ ಆಗಿರುತ್ತವೆ.

ಕೂಲಿಕಾರ್ಮಿಕರು ಪಡಿತರ ವಸ್ತುಗಳನ್ನು ಪಡೆಯುವುದಕ್ಕಾಗಿಯೇ ಒಂದು ದಿನ ಮೀಸಲಿಡಬೇಕಾದ ಅನಿವಾರ್ಯತೆ ಇದೆ.
ತಿಂಗಳು ಪೂರ್ತಿ ತೆರೆದಿದ್ದರೆ ಕೂಲಿಕೆಲಸ ಇಲ್ಲದಾಗ ಮತ್ತು ರಜಾ ದಿನಗಳಲ್ಲಿ ಪಡಿತರ ವಸ್ತುಗಳನ್ನು ಪಡೆಯಲು ಸಾಧ್ಯ ಎಂಬುದು ಸ್ಥಳೀಯರ ಅಭಿಪ್ರಾಯ.

ಪಡಿತರಕ್ಕಾಗಿ ತಪ್ಪದ ಗೋಳಾಟ

ಸಿರವಾರ: ತಾಲ್ಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ತಿಂಗಳಿಗೆ ಹಂಚಲು ಬರುವ ಪಡಿತರ ಧಾನ್ಯ ಪದಾರ್ಥಗಳನ್ನು ಪಡೆಯಲು ಕನಿಷ್ಠ ಎರಡು ದಿನವಾದರೂ ಕೂಲಿ ಕೆಲಸ ಬಿಡುವ ಪರಿಸ್ಥಿತಿ ಇದೆ.

ಪಡಿತರ ವಿತರಣೆಗೆ ತಿಂಗಳ ಇಪ್ಪತ್ತು ದಿನ ಸಮಯವಕಾಶ ಇದ್ದರೂ ವಿತರಕರು ಮಾತ್ರ ಕೇವಲ ಎರಡೋ ಮೂರು ದಿನ ವಿತರಣೆ ಮಾಡಿ ಕೈತೊಳೆದು ಕೊಳ್ಳುತ್ತಾರೆ‌. ಈ ಸಮಯದಲ್ಲಿ ಬಂದರೆ ಮಾತ್ರ ಆಹಾರ ಧಾನ್ಯ ಸಿಗುತ್ತದೆ ಇಲ್ಲವಾದರೆ ಇಲ್ಲ ಎಂದು ಕೂಲಿ ಕಾರ್ಮಿಕರು ಅಳಲನ್ನು ತೋಡಿಕೊಳ್ಳುತ್ತಾರೆ.

‘ವಿತರಣೆ ಪ್ರಾರಂಭದ ದಿನದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಾರೆ. ಜನ ಸಂದಣಿ ಕಡಿಮೆಯಾದ ನಂತರ ಬಾರದ ಜನರನ್ನು ಪೋನ್ ಮಾಡಿ ಪಡಿತರ ಪಡೆಯಲು ಅಂಗಡಿಗೆ ಬನ್ನಿ ಎನ್ನುತ್ತಾರೆ’ ಎಂದು ಪಡಿತರ ಹಂಚುವ ಕಾಳಪ್ಪ ಕಮ್ಮಾರ ಹೇಳಿದರು.

ಅಂಗಡಿಗಾಗಿ ಕಾಯುವ ಸ್ಥಿತಿ

ದೇವದುರ್ಗ: ನ್ಯಾಯಬೆಲೆ ಅಂಗಡಿ ಮಾಲೀಕರು ತಮ್ಮ ಇಚ್ಚಾನುಸಾರ ತೆರೆದಿರುತ್ತಾರೆ. ಕೆಲವೊಮ್ಮೆ ಪಡಿತರ ಬಂದ ಎರಡು ಮೂರು ದಿನ ವಿತರಿಸಿ ಮುಚ್ಚುತ್ತಾರೆ. ಇದರಿಂದ ಗ್ರಾಹಕರು ಅಂಗಡಿ ತೆಗೆಯುವವರೆಗೆ ಕಾಯಬೇಕಾದ ಪರಿಸ್ಥಿತಿ ಬಹುತೇಕ ಹಳ್ಳಿಗಳಲ್ಲಿ ಇದೆ ಎನ್ನುವುದು ಸಾರ್ವಜನಿಕರ ಆರೋಪ.

ಪಡಿತರ ದಾರರಿಗೆ ನೀಡುವ ಪಡಿತರಗಳು ಸರಿಯಾಗಿ ಜನತೆ ತಲುಪಿಸುವ ಉದ್ದೇಶದಿಂದ ಸರ್ಕಾರವು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಹಾರ ಖಾತರಿ ಸಮಿತಿ ಹಾಗೂ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ ಆಹಾರ ಜಾಗತಿ ಸಮಿತಿಗಳನ್ನು ರಚಿಸಬೇಕು. ಕೆಲವೆಡೆ ಸಮಿತಿಗಳು ರಚನೆಯಾಗಿವೆ ಎಂದು ಅಕಾರಿಗಳು ಹೇಳುತ್ತಾರೆ.

‘ಆಹಾರ ಖಾತರಿ ಸಮಿತಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರೆ ಅಧ್ಯಕ್ಷರಾಗಿರುತ್ತಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಇಬ್ಬರು ಸದಸ್ಯರು, ಹಿಂದುಳಿದ ವರ್ಗಕ್ಕೆ ಸೇರಿದ ಒಬ್ಬರು, ಮಹಿಳಾ ಸದಸ್ಯರು ಹಾಗೂ ಪಂಚಾಯಿತಿ ಕಾರ್ಯದರ್ಶಿ ಸಮಿತಿಗೆ ಕಾರ್ಯದರ್ಶಿಯಾಗಿರುತ್ತಾರೆ. ಗ್ರಾಮ ಪಂಚಾಯಿತಿ ಸಭೆಗಳನ್ನೇ ಸರಿಯಾಗಿ ಮಾಡದೆ ಇರುವವರು ಇನ್ನು ಆಹಾರ ಖಾತರಿ ಸಮಿತಿ ಸಭೆಯನ್ನು ಎಷ್ಟು ಮಾತ್ರ ಮಾಡುತ್ತಾರೆ’ ಎಂದು ಜನ ಪ್ರಶ್ನಿಸುತ್ತಿದ್ದಾರೆ.

- ಪೂರಕ ವರದಿಗಳು: ಬಿ.ಎ.ನಂದಿಕೋಲಮಠ, ಕೃಷ್ಣ ಪಿ., ಬಸವರಾಜ ಭೋಗಾವತಿ, ಯಮನೇಶ ಗೌಡಗೇರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.