
ಮಾನ್ವಿ: ಬಾಕಿ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ತಾ.ಪಂ ಇಒ ಖಾಲೀದ್ ಅಹ್ಮದ್ ಅವರಿಗೆ ಮಂಗಳವಾರ ಪಟ್ಟಣದಲ್ಲಿ ಮನವಿ ಸಲ್ಲಿಸಿದರು.
‘ಗ್ರಾಮ ಪಂಚಾಯತಿ ನೌಕರರ ಸುಮಾರು 40 ತಿಂಗಳ ಬಾಕಿ ವೇತನ ಹಾಗೂ ಸರ್ಕಾರದ ಆದೇಶದಂತೆ ಸಿಬ್ಬಂದಿಗೆ 15ನೇ ಹಣಕಾಸು ಅನುದಾನ ವೇತನ ಪಾವತಿಸಬೇಕು. ಸರ್ಕಾರದ ಆದೇಶದಂತೆ ಪ್ರತಿ ತಿಂಗಳ 5 ದಿನಾಂಕದೊಳಗೆ ವೇತನ ಪಾವತಿಸಬೇಕು. ಸರ್ಕಾರದ ಆದೇಶದನ್ವಯ ಸೇವಾ ಅವಧಿಯಲ್ಲಿ ಮರಣ ಹೊಂದಿದ ಸಿಬ್ಬಂದಿಯ ಕುಟುಂಬಸ್ಥರಲ್ಲಿ ನಿಯಮ ಅನುಸಾರವಾಗಿ ಒಬ್ಬರನ್ನು ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಆಯಾ ಪಂಚಾಯತಿಗಳು ಸಿಬ್ಬಂದಿಗೆ ಜೀವವಿಮೆ ಸೌಲಭ್ಯ ಮಾಡಿಕೊಡಬೇಕು. ನಿವೃತ್ತ ಸಿಬ್ಬಂದಿಗೆ ಉಪಧನ ನೀಡಬೇಕು. ಪ್ರತಿನಿತ್ಯ ಧ್ವಜಾರೋಹಣ ಮಾಡುತ್ತಿರುವ ಸಿಬ್ಬಂದಿಗೆ ಸರಿಯಾಗಿ ಭತ್ಯೆ ನೀಡಬೇಕು. ಸಿಬ್ಬಂದಿ ಮೇಲಿನ ದೂರುಗಳಿಗೆ ವೇತನ ನಿಲ್ಲಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.
ಸಂಘದ ಗೌರವಾಧ್ಯಕ್ಷ ಎಚ್.ಶರ್ಪುದ್ದೀನ್ ಪೋತ್ನಾಳ, ಅಧ್ಯಕ್ಷ ಅಂಬಣ್ಣ ನಾಯಕ ಬ್ಯಾಗವಾಟ, ಇತರ ಪದಾಧಿಕಾರಿಗಳಾದ ಮಹ್ಮದ್ ನೀರಮಾನ್ವಿ, ಸುಭಾನ್, ಚಂದ್ರಶೇಖರ ಕಪಗಲ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.