ADVERTISEMENT

ದಿನಸಿ, ತರಕಾರಿ ಖರೀದಿಗೆ ಮುಗಿಬಿದ್ದ ಜನ

ದಟ್ಟಣೆ ನಿಯಂತ್ರಿಸಲು ಪೂರ್ವ ತಯಾರಿ ಮಾಡದ ಆಡಳಿತ

​ಪ್ರಜಾವಾಣಿ ವಾರ್ತೆ
Published 19 ಮೇ 2021, 14:14 IST
Last Updated 19 ಮೇ 2021, 14:14 IST
ರಾಯಚೂರಿನ ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ವೃತ್ತ ಮಾರ್ಗದಲ್ಲಿ ಬುಧವಾರ ಕಂಡುಬಂದ ನೋಟ
ರಾಯಚೂರಿನ ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ವೃತ್ತ ಮಾರ್ಗದಲ್ಲಿ ಬುಧವಾರ ಕಂಡುಬಂದ ನೋಟ   

ರಾಯಚೂರು: ಮೂರು ದಿನಗಳಿಂದ ಬಿಗಿಯಾಗಿದ್ದ ಲಾಕ್‌ಡೌನ್ ಬುಧವಾರ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೂ ಸಡಿಲಿಕೆಗೊಳಿಸಿ, ತರಕಾರಿ ಹಾಗೂ ದಿನಸಿ ಖರೀದಿಗೆ ಅವಕಾಶ ನೀಡಲಾಗಿತ್ತು. ಕೋವಿಡ್‌ ನಿಯಮಪಾಲನೆ ಮರೆತು ಜನರು ಖರೀದಿಗಾಗಿ ಮುಗಿಬಿದ್ದಿದ್ದರು.

ರಾಯಚೂರು ನಗರದಲ್ಲಿ ತರಕಾರಿ ಮಾರುಕಟ್ಟೆಯನ್ನು ವಿಕೇಂದ್ರೀಕರಣಗೊಳಿಸಿ 18 ಸ್ಥಳಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಿದ್ದರೂ ಜನದಟ್ಟಣೆ ಆಗುವುದು ತಪ್ಪಿಸಲಾಗಲಿಲ್ಲ.

ಮಾರುಕಟ್ಟೆಯ ಮಾರ್ಗದಲ್ಲಿ ಎಲ್ಲಿ ನೋಡಿದರೂ ಜನರು ಕೈ ಚೀಲ ಹಿಡಿದು ಧಾವಂತದಿಂದ ಸಂತೆಗೆ ಹೋಗುತ್ತಿರುವುದು ಕಂಡುಬಂತು. ದಿನಸಿ ಮಾರಾಟದ ಕಿರಾಣಿ ಅಂಗಡಿಗಳ ಎದುರು ಜನರ ಸರದಿ ಎದ್ದು ಕಾಣುತ್ತಿತ್ತು. ಸಾಮಾನ್ಯ ದಿನಗಳಲ್ಲಿ ಗಿರಾಕಿಗಳು ಇಲ್ಲದ ಕಿರಾಣಿ ಅಂಗಡಿಗಳ ಎದುರಿನಲ್ಲಿಯೂ ದಟ್ಟಣೆ ಏರ್ಪಟ್ಟಿತ್ತು.

ADVERTISEMENT

ಜನರನ್ನು ನಿಯಂತ್ರಿಸಲು ಮಾರುಕಟ್ಟೆಯಲ್ಲಿ ಹೋಂಗಾರ್ಡ್ ಅಥವಾ ಪೋಲಿಸರನ್ನು ಸಾಕಷ್ಟು ಸಂಖ್ಯೆಯಲ್ಲಿ ನಿಯೋಜನೆ ಮಾಡಿರಲಿಲ್ಲ. ಕೆಲವೇ ಸ್ಥಳಗಳಲ್ಲಿ ನಗರಸಭೆ ಸಿಬ್ಬಂದಿಯು ತರಕಾರಿ ಮಾರಾಟಗಾರರನ್ನು ಚದುರಿಸುವ ಪ್ರಯತ್ನ ಮಾಡಿದರೂ ಪ್ರಯೋಜನ ಆಗಲಿಲ್ಲ.

ಮಹಿಳಾ ಸಮಾಜ ಮೈದಾನ, ಮಾವಿನಕೆರೆ ಸ್ಟೇಷನ್ ಸರ್ಕಲ್, ಚಂದ್ರಬಂಡಾ ರಸ್ತೆ, ವೀರಣ್ಣ ಸರ್ಕಲ್ ಪಟೇಲ್ ಚೌಕ್, ವಾಸವಿ ನಗರ ಸೇರಿದಂತೆ ಹಲವು ಕಡೆಗಳಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ಮಾಡಲಾಗಿತ್ತು.

ಪಾಲನೆಯಾಗದ ನಿಯಮ: ಕೋವಿಡ್ ಎರಡನೆಯ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಲಾಕ್ಡೌನ್ ಬಿಗಿಗೊಳಿಸಲಾಗಿದೆ. ಆದರೆ ಜನರು ನಿಯಮ ಪಾಲನೆಗೆ ಮಹತ್ವ ನೀಡದೆ ಸೇರಿದ್ದರು. ಜೀವ ಉಳಿಸಿಕೊಳ್ಳುವ ಆತಂಕಕ್ಕಿಂತ ಜೀವನ ನಡೆಸುವ ಧಾವಂತಕ್ಕೆ ಒಳಗಾಗಿರುವುದು ಕಂಡುಬಂತು. ಮಾರುಕಟ್ಟೆಯಲ್ಲಿ ಅಂತರ ಕಾಪಾಡದೆ ವ್ಯವಹರಿಸುವುದು ಸಾಮಾನ್ಯವಾಗುತ್ತಿದೆ. ವ್ಯಾಪಾರಿಯೊಂದಿಗೆ ಮಾಸ್ಕ್ ತೆರೆದು ಸಂಭಾಷಣೆ ಮಾಡುವುದು, ವ್ಯಾಪಾರಿಗಳು ಮಾಸ್ಕ್ ಅನ್ನು ಮೂಗು ಬಾಯಿಗೆ ಧರಿಸದೆ, ಗಲ್ಲಕ್ಕೆ ನೇತು ಬಿಟ್ಟುಕೊಂಡು ವ್ಯವಹರಿಸುವುದು ಕಾಣುತ್ತಿದೆ.

ಮದ್ಯ ಮಾರಾಟವಿಲ್ಲ: ಮೂರು ದಿನಗಳ ನಂತರ ಲಾಕ್‌ಡೌನ್ ಸಡಿಲಿಕೆ ಮಾಡಿದ್ದರೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿರಲಿಲ್ಲ.

ಮತ್ತೆ ಲಾಕ್ ಡೌನ್:ಜಿಲ್ಲೆಯಲ್ಲಿ ಮೇ 19 ಮಧ್ಯಾಹ್ನ 12 ಗಂಟೆಯಿಂದ ಮತ್ತೆ ಮೇ 22 ರವರೆಗೂ ಬಿಗಿ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಮದ್ಯಾಹ್ನ 12 ರಿಂದ ತುರ್ತು ಅಗತ್ಯಗಳನ್ನು ಹೊರತುಪಡಿಸಿ ಎಲ್ಲವನ್ನುಬಂದ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.