ADVERTISEMENT

ಪುನರ್‌ವಸತಿ ಕೇಂದ್ರದತ್ತ ಹೋಗದ ನಡುಗಡ್ಡೆ ಜನರು

2011 ರಲ್ಲಿ ನಿರ್ಮಾಣವಾಗಿರುವ ಮನೆಗಳು ಈಗ ಶಿಥಿಲಾವಸ್ಥೆ ತಲುಪಿವೆ

ನಾಗರಾಜ ಚಿನಗುಂಡಿ
Published 6 ಆಗಸ್ಟ್ 2019, 19:45 IST
Last Updated 6 ಆಗಸ್ಟ್ 2019, 19:45 IST
ರಾಯಚೂರು ತಾಲ್ಲೂಕಿನ ಕೃಷ್ಣಾನದಿ ನಡುಗಡ್ಡೆ ಕುರ್ವಕಲಾ ಜನರಿಗಾಗಿ ನಿರ್ಮಿಸಿದ್ದ ಪುನರ್‌ವಸತಿ ಕೇಂದ್ರದ ಮನೆಗಳು ಶಿಥಿಲಾವಸ್ಥೆಗೆ ತಲುಪಿವೆ
ರಾಯಚೂರು ತಾಲ್ಲೂಕಿನ ಕೃಷ್ಣಾನದಿ ನಡುಗಡ್ಡೆ ಕುರ್ವಕಲಾ ಜನರಿಗಾಗಿ ನಿರ್ಮಿಸಿದ್ದ ಪುನರ್‌ವಸತಿ ಕೇಂದ್ರದ ಮನೆಗಳು ಶಿಥಿಲಾವಸ್ಥೆಗೆ ತಲುಪಿವೆ   

ರಾಯಚೂರು: ಜಿಲ್ಲೆಯಲ್ಲಿ 2009ರಲ್ಲಿ ಉಂಟಾಗಿದ್ದ ಪ್ರವಾಹದಿಂದ ಸಂಕಷ್ಟಕ್ಕೀಡಾಗಿದ್ದ ರಾಯಚೂರು ತಾಲ್ಲೂಕಿನ ನಡುಗಡ್ಡೆ ಕುರ್ವಕಲಾ ಜನರಿಗೆ ಪುನರ್‌ವಸತಿ ಕಲ್ಪಿಸಲು ಮನೆಗಳನ್ನು ನಿರ್ಮಿಸಿದ್ದರೂ, ಅಲ್ಲಿಗೆ ಯಾರೂ ಹೋಗುತ್ತಿಲ್ಲ!

ಕೃಷ್ಣಾನದಿಯಿಂದ ಸುಮಾರು ಎರಡು ಕಿಲೋ ಮೀಟರ್‌ ದೂರದಲ್ಲಿ 180 ಕ್ಕೂ ಹೆಚ್ಚು ಮನೆಗಳನ್ನು ಮಾತಾ ಅಮೃತಾನಂದಮಯೀ ಟ್ರಸ್ಟ್‌ನಿಂದ ಕಟ್ಟಿಸಲಾಗಿದೆ. ಈ ಪುನರ್‌ವಸತಿ ಕೇಂದ್ರದಲ್ಲಿ ನೆಟ್ಟಿರುವ ಗಿಡಗಳು ದೊಡ್ಡದಾಗಿದ್ದು, ದೂರದಿಂದ ಸುಂದರ ಬಡಾವಣೆಯಂತೆ ಗೋಚರವಾಗುತ್ತದೆ. ಆದರೆ, ಹತ್ತಿರಕ್ಕೆ ಹೋಗಿ ನೋಡಿದರೆ ಅರ್ಧದಷ್ಟು ಮನೆಗಳು ಖಾಲಿ ಬಿದ್ದಿದ್ದು, ಶಿಥಿಲಾವಸ್ಥೆಗೆ ತಲುಪಿವೆ.

2011 ರಲ್ಲಿಯೇ ಮನೆಗಳನ್ನು ಕಟ್ಟಿಸಿ ಹಸ್ತಾಂತರ ಮಾಡಲಾಗಿದೆ. ಅನೇಕ ಮನೆಗಳಿಗೆ ಬೀಗ ಜಡಿಯಲಾಗಿದೆ. ಕೆಲವು ಮನೆಗಳ ಬಾಗಿಲು ಶಿಥಿಲಗೊಂಡು ಮುರಿದುಬಿದ್ದಿವೆ. ಕಿಟಕಿ ಗಾಜುಗಳು ಪುಡಿಪುಡಿಯಾಗಿದ್ದು, ಪ್ರತಿ ಮನೆಗಳ ಪಕ್ಕದಲ್ಲಿ ನಿರ್ಮಿಸಿರುವ ಶೌಚಾಲಯಗಳು ಹಾಳು ಸುರಿಯುತ್ತಿವೆ. ಬೆರಳಣಿಕೆಯಷ್ಟು ಮನೆಗಳಲ್ಲಿ ಜನರು ವಾಸವಾಗಿದ್ದಾರೆ. ಆದರೆ, ಕುರ್ವಕಲಾ ನಡುಗಡ್ಡೆಯಿಂದ ಯಾವುದೇ ಕುಟುಂಬ ಸ್ಥಳಾಂತರವಾಗಿ ಬಂದು ನೆಲೆಸಿಲ್ಲ. ಅಕ್ಕಪಕ್ಕದ ಗ್ರಾಮಗಳ ಜನರು ಮನೆಗಳಿಗೆ ಸೇರಿಕೊಂಡಿದ್ದಾರೆ.

ADVERTISEMENT

ಮನೆಗಳನ್ನು ನಿರ್ಮಿಸಿದ ಮೂಲ ಉದ್ದೇಶ ಈಡೇರಿಲ್ಲ. 2009ರಲ್ಲಿ ನಿರಂತರವಾಗಿ ಸುರಿದ ಮಳೆ ಮತ್ತು ಕೃಷ್ಣಾನದಿ ಪ್ರವಾಹದಿಂದ ನಡುಗಡ್ಡೆಯ ಜನರು ತತ್ತರಿಸಿದ್ದರು. ಈಗ ನದಿಗೆ ಪ್ರವಾಹ ಇದೆ. ಸತತ ಮಳೆ ಸುರಿಯುತ್ತಿಲ್ಲ. ಹೀಗಾಗಿ ನಡುಗಡ್ಡೆಯಿಂದ ಸ್ಥಳಾಂತರಗೊಳ್ಳುವ ಅನಿವಾರ್ಯತೆ ಕಂಡು ಬರುತ್ತಿಲ್ಲ. ಇದಲ್ಲದೆ, ಪುನರ್‌ವಸತಿ ಕೇಂದ್ರದಲ್ಲಿ ಮೂಲ ಸೌಕರ್ಯಗಳ ಕೊರತೆ ಕೂಡಾ ಜನರು ವಾಸ ಆಗದೆ ಇರುವುದಕ್ಕೆ ಅಡ್ಡಿಯಾಗಿದೆ.

ಆತ್ಕೂರ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕುರ್ವಕಲಾ ನಡುಗಡ್ಡೆಯಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಮಾಡಿಕೊಡಲಾಗಿದೆ. ಆದರೆ, ಪುನರ್‌ವಸತಿ ಕೇಂದ್ರಕ್ಕೆ ಬಂದರೆ, ನೀರಿಗಾಗಿ ಅಲೆದಾಡಬೇಕು. ಶುದ್ಧ ನೀರಿನ ಘಟಕವಾಗಲಿ, ನಳಗಳ ಸಂಪರ್ಕ ಕಲ್ಪಿಸಿಲ್ಲ. ಮನೆಗಳು ತುಂಬಾ ಚಿಕ್ಕದಾಗಿವೆ ಎಂಬುದು ಕುರ್ವಕಲಾ ಜನರಲ್ಲಿ ಅಸಮಾಧಾನವಿದೆ.

‘ಕುರ್ವಕಲಾದಲ್ಲಿರುವ ಪ್ರತಿ ಕುಟುಂಬದಲ್ಲೂ ಕನಿಷ್ಠ ಐದು ಅಥವಾ ಅದಕ್ಕಿಂತ ಹೆಚ್ಚು ಜನರಿದ್ದಾರೆ. ಹೊಸದಾಗಿ ಕಟ್ಟಿಸಿದ ಮನೆಗಳಲ್ಲಿ ಕುಟುಂಬದವರೆಲ್ಲರೂ ಮಲಗಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಗ್ರಾಮ ಪಂಚಾಯಿತಿಯಿಂದ ಹಕ್ಕುಪತ್ರಗಳನ್ನು ಕೊಡುತ್ತಿಲ್ಲ. ಹಕ್ಕು ಇಲ್ಲ ಎನ್ನುವುದಾದರೆ, ಅಲ್ಲಿಗೆ ಏಕೆ ಹೋಗಬೇಕು ಎಂದುಕೊಂಡು ಯಾರೂ ಹೋಗುತ್ತಿಲ್ಲ. ಮಳೆಗಾಲದಲ್ಲಿ ಮಾತ್ರ ಕೆಲವು ದಿನಗಳಮಟ್ಟಿಗೆ ಜನರು ಅತ್ತಿಂದಿತ್ತ ಓಡಾಡುವುದಿಲ್ಲ. ಕಾಲೇಜು ವಿದ್ಯಾರ್ಥಿಗಳು ರಾಯಚೂರಿನಲ್ಲಿಯೇ ಉಳಿದುಕೊಳ್ಳುತ್ತಾರೆ. ಅನಿವಾರ್ಯವಾದರೆ ತೆಪ್ಪದಲ್ಲಿ ಜನರನ್ನು ದಾಟಿಸಲಾಗುತ್ತದೆ’ ಎಂದು ಕುರ್ವಕಲಾ ಗ್ರಾಮದ ನಿವಾಸಿ ಕುರ್ಮಣ್ಣ ಹೇಳುವ ಮಾತಿದು.

ಕುರ್ವಕಲಾ ಸಮೀಪ ನದಿತೀರದಲ್ಲಿರುವ ಆತ್ಕೂರ್‌ ಮತ್ತು ಡಿ.ರಾಂಪೂರ ಗ್ರಾಮಗಳಿಗೂ ಮಾತಾ ಅಮೃತಾನಂದಮಯೀ ಟ್ರಸ್ಟ್‌ನವರು ಪುನರ್‌ವಸತಿ ಕಲ್ಪಿಸಿದ್ದಾರೆ. ನೂರಾರು ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದು, ಆ ಮನೆಗಳಿಗೆ ಜನರು ಹೋಗಿದ್ದಾರೆ. ಕೆಲವರು ಚಿಕ್ಕ ಮನೆಗೆ ಹೊಂದಿಕೊಂಡು ಇನ್ನೊಂದು ಕೋಣೆ ಕಟ್ಟಿಸಿಕೊಂಡು ವಾಸಿಸುತ್ತಿದ್ದಾರೆ. ಅಲ್ಲಿ ಮೂಲ ಸೌಕರ್ಯಗಳ ಕೊರತೆ ಇದ್ದರೂ, ಹೆಚ್ಚುವರಿ ಮನೆಯಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

*
ಬಹಳ ಚಿಕ್ಕದಾಗಿ ಮನೆಗಳನ್ನು ಕಟ್ಟಿದ್ದರಿಂದ ಅದರಲ್ಲಿ ಕುಟುಂಬದವರೆಲ್ಲ ವಾಸಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಮನೆಗಳಿಗೆ ಹಕ್ಕುಪತ್ರ ಕೊಡುತ್ತಿಲ್ಲ.
-ಹಂಪಣ್ಣ, ಕುರ್ವಕಲಾ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.