ADVERTISEMENT

ಒಂದೇ ದಿನ 61 ಪಾಸಿಟಿವ್‌ ವರದಿ

ನೆಗೆಟಿವ್‌ ವರದಿ ಬಂದವರಿಗೆ ಕ್ವಾರಂಟೈನ್‌ ಕೇಂದ್ರದಿಂದ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 29 ಮೇ 2020, 14:20 IST
Last Updated 29 ಮೇ 2020, 14:20 IST
ಆರ್‌.ವೆಂಕಟೇಶಕುಮಾರ್‌
ಆರ್‌.ವೆಂಕಟೇಶಕುಮಾರ್‌   

ರಾಯಚೂರು: ಜಿಲ್ಲೆಯಲ್ಲಿ ಒಂದೇ ದಿನ 61 ಕೊರೊನಾ ಸೋಂಕಿನ ಪಾಸಿಟಿವ್ ವರದಿಗಳು ದೃಢಪಟ್ಟಿದ್ದು, ಒಟ್ಟಾರೆ ಪ್ರಕರಣಗಳ ಸಂಖ್ಯೆಯು 133 ಕ್ಕೆ ಏರಿಕೆಯಾಗಿದೆಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಇಲಾಖೆಯಿಂದ ಬಿಡುಗಡೆ ಮಾಡಿದ ವರದಿಯಲ್ಲಿ 62 ಎಂದಾಗಿದೆ. ಈ ಹಿಂದೆ ವರದಿ ಬಂದಿರುವುದು ಪುನರಾವರ್ತನೆಯಾಗಿದೆ. 61 ಪ್ರಕರಣಗಳ ಪೈಕಿ ದೇವದುರ್ಗ ತಾಲ್ಲೂಕಿನಲ್ಲಿ ಅತೀ ಹೆಚ್ಚು 56 ಪ್ರಕರಣ, ರಾಯಚೂರು ತಾಲ್ಲೂಕಿನಲ್ಲಿ 5 ಪ್ರಕರಣಗಳು ದೃಢಪಟ್ಟಿವೆ. ದೇವದುರ್ಗದ ಬಿಸಿಎಂ ಹಾಸ್ಟೇಲ್‌ ಮತ್ತು ರಾಯಚೂರು ತಾಲ್ಲೂಕಿನ ತುರುಕುಣಡೋಣಿ ಗ್ರಾಮದ ಕ್ವಾರಂಟೈನ್‌ ಕೇಂದ್ರಗಳಲ್ಲಿ ಇವರೆಲ್ಲರೂ ಇದ್ದರು. ಈಗ ಒಪೆಕ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿ ಇರುವವರನ್ನು ಪತ್ತೆಹಚ್ಚಲು ಐದು ತಂಡಗಳನ್ನು ಮಾಡಲಾಗಿದೆ ಎಂದು ಹೇಳಿದರು.

ದೇವದುರ್ಗ ಕ್ವಾರೆಂಟೈನ್‌ನಲ್ಲಿ ಮೇ 22 ರಂದು ಬಂದು ದಾಖಲಾಗಿದ್ದ ಕಮಲದಿನ್ನಿ, ಕೊತ್ತದೊಡ್ಡಿ, ಬಾಗೂರು, ಕರಡಿಗುಡ್ಡ, ಕೆ.ಇರಬಗೇರಾ, ಗಬ್ಬೂರಿನ ಬಸವನಗರ, ಬೊಮ್ಮನಾಳ, ಇಂಗದಾಳ ಗ್ರಾಮದವರಲ್ಲಿ ಪಾಸಿಟಿವ್‌ ವರದಿ ಬಂದಿದೆ. ಜಿಲ್ಲೆಯಿಂದ ಶಂಕಿತ 3,980 ಜನರ ಮಾದರಿ ಪರೀಕ್ಷಾ ವರದಿಗಳು ಬರುವುದು ಬಾಕಿಯಿದೆ ಎಂದರು.

ADVERTISEMENT

ಮಹಾರಾಷ್ಟ್ರ ರಾಜ್ಯದಿಂದ ಬಂದಿರುವ 1,800 ಜನರ ವರದಿ ಇನ್ನೂ ಬಾಕಿಯಿದೆ. ಪ್ರತಿದಿನ ಸುಮಾರು 1,500 ಜನರ ಮಾದರಿ ಸಂಗ್ರಹಿಸಿ ರವಾನಿಸಲಾಗುತ್ತದೆ. ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷಾ ಪ್ರಯೋಗಾಲಯ ಸಿದ್ದಗೊಂಡಿದೆ. ಆದರೆ ಪ್ರಯೋಗಾಲಯದ ಪರೀಕ್ಷೆಗೆ ಐಸಿಎಂಆರ್ ಕೇಂದ್ರದಿಂದ ಅನುಮೋದನೆ ಪಡೆಯಬೇಕಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆ ರೋಗಿಗಳನ್ನು ರಿಮ್ಸ್‌ಗೆ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಪ್ರಕರಣಗಳು ಇನ್ನೂ ಹೆಚ್ಚಾದಲ್ಲಿ ನವೋದಯ ಆಸ್ಪತ್ರೆಯನ್ನು ಬಳಸಿಕೊಳ್ಳಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮಹಾರಾಷ್ಟ್ರ, ಗುಜರಾತ್, ದೆಹಲಿ ಮತ್ತು ತಮಿಳುನಾಡು ರಾಜ್ಯಗಳಿಂದ ಜಿಲ್ಲೆಯ ಒಳಗಡೆ ಬರುವವರನ್ನು ನಿಷೇಧಿಸಲಾಗಿದೆ ಎಂದವರು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.