ADVERTISEMENT

ರಾಯಚೂರು | ಮಡಕೆ ವ್ಯಾಪಾರ: ₹ 80 ಲಕ್ಷದ ವಹಿವಾಟು

ಚಂದ್ರಕಾಂತ ಮಸಾನಿ
Published 30 ಏಪ್ರಿಲ್ 2025, 6:04 IST
Last Updated 30 ಏಪ್ರಿಲ್ 2025, 6:04 IST
ರಾಯಚೂರಿನ ಬಸವೇಶ್ವರ ವೃತ್ತದ ಬಳಿ ಮಣ್ಣಿನ ಮಡಿಕೆಗಳನ್ನು ಮಾರಾಟ ಮಾಡುವ ಮಾನ್ವಿಯ ವ್ಯಾಪಾರಿ ವೀರೇಶ ಅವರು ಗುಜರಾತ ಮಡಿಕೆ ಪ್ರದರ್ಶಿಸುತ್ತಿರುವುದು
ರಾಯಚೂರಿನ ಬಸವೇಶ್ವರ ವೃತ್ತದ ಬಳಿ ಮಣ್ಣಿನ ಮಡಿಕೆಗಳನ್ನು ಮಾರಾಟ ಮಾಡುವ ಮಾನ್ವಿಯ ವ್ಯಾಪಾರಿ ವೀರೇಶ ಅವರು ಗುಜರಾತ ಮಡಿಕೆ ಪ್ರದರ್ಶಿಸುತ್ತಿರುವುದು   

ರಾಯಚೂರು: ಗುಜರಾತ್‌, ರಾಜಸ್ಥಾನ, ತೆಲಂಗಾಣದಿಂದ ರಾಜ್ಯದ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ಮಣ್ಣಿನ ಮಡಕೆಗಳ ಮಾರಾಟ ಬಿಸಿಲೂರಲ್ಲಿ ಭರ್ಜರಿಯಾಗಿ ನಡೆದಿದೆ. ಬಿಸಿಲೂರಲ್ಲಿ ಬೇಸಿಗೆಯಲ್ಲೇ ಪ್ರತಿ ವರ್ಷ ₹ 75 ಲಕ್ಷದಿಂದ ₹ 80 ಲಕ್ಷದವರೆಗೂ ವಹಿವಾಟು ನಡೆಯುತ್ತಿದೆ.

ಜಿಲ್ಲೆಯಲ್ಲಿ ನಾಲ್ಕು ತಿಂಗಳು ಬಿಸಿಲ ಧಗೆ ಹಾಗೂ ಸಕೆ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ರಾಯಚೂರು ನಗರದಲ್ಲೇ 20 ಕುಂಬಾರರು ದೊಡ್ಡಮಟ್ಟದಲ್ಲಿ ವ್ಯಾಪಾರು ವಹಿವಾಟು ನಡೆಸಿದ್ದು, ಜಿಲ್ಲೆಯ ಜನರಿಗೆ ಎಲ್ಲ ಬಗೆಯ ಮಣ್ಣಿನ ಮಡಕೆಗಳನ್ನು ತಂದು ಪೂರೈಸುತ್ತಿದ್ದಾರೆ.

ವಿದ್ಯುತ್ ಕೈಗೊಟ್ಟಾಗ ರೆಫ್ರಿಜಿರೇಟರ್‌ನಲ್ಲೂ ತಣ್ಣನೆ ನೀರು ಸಿಗುವುದಿಲ್ಲ. ಮನೆ ಮಂದಿಗೆಲ್ಲ ಅಧಿಕ ಪ್ರಮಾಣದಲ್ಲಿ ಕುಡಿಯುವ ನೀರು ಸಂಗ್ರಹಿಸಿಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಶ್ರೀಮಂತರು ನೋಡಲು ಚೆಂದ ಇರುವ ಹಾಗೂ ಆಕರ್ಷಕ ಮಣ್ಣಿನ ಮಡಕೆಗಳನ್ನೇ ಕೊಂಡುಕೊಳ್ಳುತ್ತಾರೆ. ಬಡವರು ಸಹ ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಮಡಕೆಗಳನ್ನು ಖರೀದಿಸುತ್ತಿದ್ದಾರೆ.

ADVERTISEMENT

ರಾಯಚೂರಲ್ಲಿ ಏಪ್ರಿಲ್‌ ಮುಗಿತು ಇನ್ನೇನು ಬಿಸಿಲು ಕಡಿಮೆ ಆಯಿತು ಎನ್ನುವ ಹಾಗೆಯೇ ಇಲ್ಲ. ಮೇ ಹಾಗೂ ಜೂನ್‌ ಅಂತ್ಯದವರೆಗೂ ಜಿಲ್ಲೆಯಲ್ಲಿ ಬಿಸಿಲ ಧಗೆ ಇರುತ್ತದೆ. ವ್ಯಾಪಾರ ಸ್ವಲ್ಪ ಕಡಿಮೆಯಾದರೂ ಮಣ್ಣಿನ ಗಡಿಗೆಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ. ಜನ ಈಗಲೂ ಮಡಕೆಗಳನ್ನು ಕೊಂಡೊಯ್ಯುತ್ತಿದ್ದಾರೆ.

ಗುಜರಾತಿನ ಮಣ್ಣಿನ ಮಡಕೆಗಳು ನೋಡಲು ಹೆಚ್ಚು ಆಕರ್ಷಕವಾಗಿರುವ ಕಾರಣ ₹ 300ರಿಂದ 350ರ ವರೆಗೆ ಮಾರಾಟವಾಗುತ್ತಿವೆ. ತೆಲಂಗಾಣದ ನಾರಾಯಣಪೇಟೆಯ ಮಡಿಕೆಗಳು ಈ ಭಾಗದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿವೆ. ಅವು ₹200ರಿಂದ ₹ 250ಕ್ಕೆ ಹಾಗೂ ಕಲರಗಿಯ ಮಡಕೆಗಳು ₹200ರಿಂದ 250ಕ್ಕೆ ಮಾರಾಟವಾಗುತ್ತಿವೆ. ಕಲಬುರಗಿಯ ಮಡಿಕೆಗಳು ಕಪ್ಪು ಬಣ್ಣದ್ದಾಗಿವೆ. ಸ್ವಲ್ಪ ಬೇಡಿಕೆ ಕಡಿಮೆ.

ಯಾದಗಿರಿ ಜಿಲ್ಲೆಯಲ್ಲಿ ಮಾಡಿದ ಮಣ್ಣಿನ ಮಡಕೆಗಳು ಪೂರ್ಣ ಮಾನವ ನಿರ್ಮಿತವಾಗಿವೆ. ಇವುಗಳಲ್ಲಿ ನೀರು ಹೆಚ್ಚು ತಂಪಾಗಿರುತ್ತದೆ. ಜನ ಇವುಗಳನ್ನು ಕೇಳಿ ಖರೀದಿಸುತ್ತಾರೆ. ಈ ವರ್ಷ ವ್ಯಾಪಾರವೂ ಚೆನ್ನಾಗಿ ಆಗಿದೆ ಎಂದು ಮಾರಾಟಗಾರರು ಹೇಳುತ್ತಾರೆ.

ರಾಯಚೂರಿನ ಬಸವೇಶ್ವರ ವೃತ್ತದ ಬಳಿ ಮಾರಾಟಕ್ಕೆ ಇಡಲಾದ ಮಣ್ಣಿನ ಮಡಿಕೆಗಳು ಹಾಗೂ ಮಣ್ಣಿನ ಬಾಟಲಿಗಳು / ಚಿತ್ರ: ಶ್ರೀನಿವಾಸ ಇನಾಂದಾರ್

‘ಪ್ರತಿ ವರ್ಷ ಗುಜರಾತಿನಿಂದ 2,500 ಮಣ್ಣಿನ ಮಡಿಕೆಗಳನ್ನು ಕಂಟೇರ್‌ನಲ್ಲಿ ತರುತ್ತೇನೆ. ವಾಹನ ಬಾಡಿಗೆಯೇ ₹ 1 ಲಕ್ಷ ಆಗುತ್ತದೆ. ನಾನೇ 3500ರಿಂದ 4 ಸಾವಿರ ಮಡಕೆಗಳನ್ನು ಮಾರಾಟ ಮಾಡಿರುವೆ. ಜಿಲ್ಲೆಯಲ್ಲಿ ಮಣ್ಣಿನ ಮಡಕೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆಧುನಿಕ ಉಪಕರಣ ಬಳಿಸಿ ಜಿಲ್ಲೆಯಲ್ಲೇ ತಯಾರು ಮಾಡಿದರೆ ಕುಂಬಾರರಿಗೆ ಹೆಚ್ಚು ಅನುಕೂಲವಾಗಲಿದೆ‘ ಎಂದು ಮಾನ್ವಿಯ ಮಣ್ಣಿನ ಗಡಿಗೆಗಳ ವ್ಯಾಪಾರಿ ವೀರೇಶ ತಿಳಿಸಿದರು.

‘ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಕುಂಬಾರರಿಗೆ ಆಧುನಿಕ ಉಪಕರಣಗಳನ್ನು ಬಳಸಿ ಮಡಿಕೆಗಳನ್ನು ತಯಾರಿಸುವ ತರಬೇತಿ ನೀಡಲಾಗುತ್ತಿದೆ. ಜಿಲ್ಲೆಯ ಕುಂಬಾರರಿಗೂ ತರಬೇತಿ ಕೊಟ್ಟರೆ ಅವರ ಬದುಕಿಗೆ ಅನುಕೂಲವಾಗಲಿದೆ. ಸಂಬಂಧಪಟ್ಟ ಇಲಾಖೆಯವರು ವ್ಯವಸ್ಥೆ ಮಾಡಬೇಕು‘ ಎಂದು ಹೇಳಿದರು.

ಯಾದಗಿರಿ ಹಾಗೂ ಕಲಬುರ್ಗಿಯ ಮಣ್ಣಿನ ಮಡಿಕೆಗಳು
- ಜಿಲ್ಲೆಯಲ್ಲಿ ಅತಿ ಹೆಚ್ಚು ರೋಡ್‌ ಹಂಪ್ಸ್‌ ಇವೆ. ಗುಜರಾತಿನಿಂದ ನಾಚೂಕಾಗಿ ತಂದರೂ ಜಿಲ್ಲೆಗೆ ಬರುವಷ್ಟರಲ್ಲಿ ಕೆಲ ಗಡಿಗೆ ಒಡೆಯುತ್ತವೆ
ವೀರೇಶ ಮಣ್ಣಿನ ಗಡಿಗೆ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.