
ಮಸ್ಕಿ: ‘ಅಧ್ಯಕ್ಷ ಸ್ಥಾನದಲ್ಲಿ ಕುಳಿತವರು ಅಧಿಕಾರವನ್ನು ಪ್ರಭುತ್ವವಾಗಿ ಅಲ್ಲ, ಜನರ ಸೇವೆಯಾಗಿ ಭಾವಿಸಿ, ಕೆಲಸ ಮಾಡಬೇಕು’ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.
ಪಟ್ಟಣದ ಪುರಸಭೆಯಲ್ಲಿ ಗುರುವಾರ ನಡೆದ ನೂತನ ಅಧ್ಯಕ್ಷ ಸುರೇಶ ಹರಸೂರು ಅವರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಪುರಸಭೆಗೆ ಬರುವ ಸಾರ್ವಜನಿಕರ ಕೆಲಸಗಳನ್ನು ವಿಳಂಬವಿಲ್ಲದೆ, ತೊಂದರೆ ಆಗದಂತೆ ಮಾಡಿಕೊಡುವ ಮೂಲಕ ಜನಮೆಚ್ಚುವ ಆಡಳಿತ ನೀಡಬೇಕು. ಜನರ ಪ್ರೀತಿ ಮತ್ತು ವಿಶ್ವಾಸ ಗಳಿಸಿದರೆ ಮಾತ್ರ ಮುಖಂಡರು ಹಾಗೂ ಪಕ್ಷಕ್ಕೆ ಒಳ್ಳೆಯ ಹೆಸರು ಬರುತ್ತದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವವೇ ಉತ್ತಮ ಆಡಳಿತದ ಗುರುತು’ ಎಂದು ಹೇಳಿದರು.
ನೂತನ ಅಧ್ಯಕ್ಷ ಸುರೇಶ ಹರಸೂರು ಮಾತನಾಡಿ, ‘ಮುಖಂಡರು ಹಾಗೂ ಸದಸ್ಯರ ಸಲಹೆ–ಸೂಚನೆ ಪಡೆದು ಪುರಸಭೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಮೂಲಸೌಕರ್ಯಗಳ ಸುಧಾರಣೆ, ಸ್ವಚ್ಛತೆ ಹಾಗೂ ಜನಸಂಪರ್ಕಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು’ ಎಂದು ಹೇಳಿದರು.
ಮುಖಂಡ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ, ಅಪ್ಪಾಜಿಗೌಡ ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷ ಶರಣಯ್ಯ ಸೊಪ್ಪಿಮಠ ಮಾತನಾಡಿ, ‘ಎಲ್ಲರನ್ನು ಒಗ್ಗೂಡಿಸಿಕೊಂಡು ಪಟ್ಟಣದ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದರು.
ಉಪಾಧ್ಯಕ್ಷೆ ಗೀತಾ ಶಿವರಾಜ ಬುಕ್ಕಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಚೇತನ ಪಾಟೀಲ, ಮುಖ್ಯಾಧಿಕಾರಿ ನರಸರೆಡ್ಡಿ ಸೇರಿದಂತೆ ಪುರಸಭೆ ಸದಸ್ಯರು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು. ಪುರಸಭೆ ಸಿಬ್ಬಂದಿ, ಪೌರ ಕಾರ್ಮಿಕರು, ಸಂಘ ಸಂಸ್ಥೆಗಳ ಮುಖಂಡರು ಸೇರಿದಂತೆ ಅನೇಕರು ನೂತನ ಅಧ್ಯಕ್ಷರನ್ನು ಸನ್ಮಾನಿಸಿ ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.