ಸಿರವಾರ: ಪರಿಸರದಲ್ಲಿ ಮತ್ತು ಮನೆಗಳ ಸುತ್ತಲೂ ನೀರು ಸಂಗ್ರಹವಾಗದಂತೆ ತಡೆಯುವುದು ಮತ್ತು ಮನೆಯಲ್ಲಿನ ನೀರನ್ನು ಪ್ರತಿನಿತ್ಯ ಬದಲಾವಣೆ ಮಾಡುವುದು ಸೇರಿದಂತೆ ಹಲವು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದರಿಂದ ಡೆಂಗಿ ನಿಯಂತ್ರಿಸಲು ಸಾಧ್ಯ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರ ಆಯುಷ್ ವೈದ್ಯಾಧಿಕಾರಿ ಸುನೀಲ ಸರೋದೆ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮಾನ್ವಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಎನ್ಎಸ್ಎಸ್ ವಿದ್ಯಾರ್ಥಿಗಳಿಂದ ಮಂಗಳವಾರ ನಡೆದ ಡೆಂಗಿ ವಿರೋಧಿ ಮಾಸಾಚರಣೆ ಮತ್ತು ವಾಂತಿ ಭೇದಿ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಡೆಂಗಿ ಜ್ವರವು ನಿಂತ ನೀರಿನಲ್ಲಿ ಹುಟ್ಟುತ್ತದೆ. ನಮ್ಮ ಮನೆಗಳಲ್ಲಿ ನೀರು ಶೇಖರಿಸುವ ಪಾತ್ರೆಗಳನ್ನು ಮುಚ್ಚಿಡಬೇಕು. ಪ್ರತಿನಿತ್ಯ ನೀರು ಬದಲಾಯಿಸಬೇಕು. ಸೊಳ್ಳೆ ಪರದೆಗಳ ಬಳಕೆ, ಜ್ವರ ಬಂದರೂ ರಕ್ತ ಪರೀಕ್ಷೆ ಮಾಡಿಸುವುದು ಸೇರಿದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು.
ಆರೋಗ್ಯ ನಿರೀಕ್ಷಣಾಧಿಕಾರಿ ಯಲ್ಲಾಲಿಂಗ ಪೂಜಾರಿ, ಆರೋಗ್ಯ ಸುರಕ್ಷಾಧಿಕಾರಿ ನೀಲಮ್ಮ, ಎನ್ಎಸ್ಎಸ್ ಅಧಿಕಾರಿ ಲಕ್ಷ್ಮಣ ಯಾದವ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.