ADVERTISEMENT

ಜಿ.ಪಂ, ತಾ.ಪಂ ಚುನಾವಣೆಗೆ ತಯಾರಿ- ಪಕ್ಷ ಸಂಘಟಿಸಲು ಮುಂದಾದ ರಾಜಕೀಯ ಪಕ್ಷಗಳು

ನಾಗರಾಜ ಚಿನಗುಂಡಿ
Published 19 ಆಗಸ್ಟ್ 2021, 11:08 IST
Last Updated 19 ಆಗಸ್ಟ್ 2021, 11:08 IST
ರಮಾನಂದ ಯಾದವ್‌
ರಮಾನಂದ ಯಾದವ್‌   

ರಾಯಚೂರು: ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಎದುರಿಸಲು ಜಿಲ್ಲೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ತಯಾರಿ ಆರಂಭಿಸಿವೆ.

ಆಯಾ ಪಕ್ಷಗಳ ಮುಖಂಡರನ್ನು, ಜನಪ್ರತಿನಿಧಿಗಳನ್ನು ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷ ಬಲಪಡಿಸುವ ಬಗ್ಗೆ ಕಾರ್ಯತಂತ್ರ ರೂಪಿಸುವುದು ಈಗಾಗಲೇ ಶುರುವಾಗಿದೆ. ಜಿಲ್ಲಾ ಜೆಡಿಎಸ್‌ನಿಂದ ಈ ಸಂಬಂಧ ರಾಯಚೂರಿನ ಅತ್ತನೂರು ಪಂಕ್ಷನ್‌ ಹಾಲ್‌ನಲ್ಲಿ
ಈಚೆಗೆ ಕಾರ್ಯಕರ್ತರ ಸಭೆ ನಡೆಸಲಾಯಿತು.

ಕಾಂಗ್ರೆಸ್‌ ಪಕ್ಷವು ಸಂತೋಷ ಹಬ್‌ನಲ್ಲಿ ಆಗಸ್ಟ್‌ 17 ರಂದು ಕಲ್ಯಾಣ ಕರ್ನಾಟಕ ವಿಭಾಗೀಯ ಸಮಾವೇಶ ಆಯೋಜಿಸಿತ್ತು. ಇದೀಗ ಬಿಜೆಪಿಯಲ್ಲೂ ವಿವಿಧ ಹಂತಗಳಲ್ಲಿ ಸಭೆಗಳನ್ನು ಆಯೋಜಿಸಿ ಕಾರ್ಯಕರ್ತರನ್ನು ಸನ್ನದ್ಧಗೊಳಿಸುವ ಕೆಲಸ ನಡೆದಿದೆ.

ADVERTISEMENT

ಚುನಾವಣಾ ಆಯೋಗವು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಕರುಡು ಮೀಸಲಾತಿ ಪಟ್ಟಿಯನ್ನು ಈಗಾಗಲೇ ಪ್ರಕಟಿಸಿದೆ. ಆಕ್ಷೇಪಣೆ ಸಲ್ಲಿಕೆಯೂ ಮುಗಿದಿದೆ. ಶೀಘ್ರದಲ್ಲೇ ಚುನಾವಣೆ ದಿನಾಂಕ ಘೋಷಣೆ ಪ್ರಕಟಿಸಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಪಂಚಾಯಿತಿ ಚುನಾವಣೆ ಫಲಿತಾಂಶವು 2023 ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಹೀಗಾಗಿ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಬಲಾಬಲ ಪ್ರದರ್ಶಿಸುವುದಕ್ಕೆ ಪಂಚಾಯಿತಿ ಚುನಾವಣೆಯನ್ನು ವೇದಿಕೆ ಮಾಡಿಕೊಳ್ಳುತ್ತಿವೆ.

ಕರುಡು ಮೀಸಲಾತಿ ಪಟ್ಟಿ ಹೊರಬಿದ್ದಾಗಲೇ ಅನೇಕ ಮುಖಂಡರು ಪಂಚಾಯಿತಿ ಟಿಕಟ್ ಗಿಟ್ಟಿಸಿಕೊಳ್ಳುವುದಕ್ಕೆ ಪೈಪೋಟಿ ಆರಂಭಿಸಿದ್ದಾರೆ. ಮಸ್ಕಿ ತಾಲ್ಲೂಕಿನ ಮೆದಿಕಿನಾಳ ಜಿಲ್ಲಾ ಪಂಚಾಯಿತಿ ಕ್ಷೇತ್ರವು ಹಾಲಿ ಮತ್ತು ಮಾಜಿ ಶಾಸಕರಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಸಂತೆಕಲ್ಲೂರು ಸಾಮಾನ್ಯ ಮೀಸಲು ಕ್ಷೇತ್ರವಾಗಿರುವುದರಿಂದ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಮಾನ್ವಿ ತಾಲ್ಲೂಕಿನ ಪೋತ್ನಾಳ ಜಿಲ್ಲಾ ಪಂಚಾಯಿತಿ ಕ್ಷೇತ್ರವು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು ಘಟಾನುಘಟಿಗಳು ಸ್ಪರ್ಧಿಸುವ ನಿರೀಕ್ಷೆ ಇದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯಗಳನ್ನು ಪಟ್ಟಿ ಮಾಡಿರುವ ಕಾಂಗ್ರೆಸ್‌ ಪಕ್ಷವು ವಿವಿಧ ಕಾರ್ಯಕ್ರಮಗಳ ಮೂಲಕ ಜನರ ಬಳಿಗೆ ಹೋಗುವುದಕ್ಕೆ ಕಾರ್ಯಕರ್ತರನ್ನು ಸಿದ್ಧಪಡಿಸಿದೆ. ದರ ಏರಿಕೆ ಹಾಗೂ ಕೋವಿಡ್‌ ಮಹಾಮಾರಿ ನಿರ್ವಹಣೆ ವಿಷಯಗಳನ್ನು ಪ್ರಮುಖವಾಗಿ ತೆಗೆದುಕೊಳ್ಳಲಾಗಿದೆ. ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಪಕ್ಷ ಬಲಪಡಿಸುವ ಕಾರ್ಯತಂತ್ರವನ್ನು ಬಿಜೆಪಿ ರೂಪಿಸಿದೆ. ಇದರ ಭಾಗವಾಗಿಯೇ ಕೇಂದ್ರದ ನೂತನ ಸಚಿವರ ಮೂಲಕ ‘ಜನಾಶೀರ್ವಾದ’ ಕಾರ್ಯಕ್ರಮ ಮಾಡಲಾಗುತ್ತಿದೆ.

***

ಪ್ರತಿಯೊಂದು ಜಿಲ್ಲಾ ಪಂಚಾಯಿತಿ ಕ್ಷೇತ್ರ ಹಾಗೂ ಮಂಡಲ ಮಟ್ಟದಲ್ಲಿ ಕಾರ್ಯಕರ್ತರು ಸಭೆಗಳನ್ನು ಮಾಡಿಕೊಂಡು ಚುನಾವಣೆ ಎದುರಿಸುವುದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

- ರಮಾನಂದ ಯಾದವ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ

***

ಪಂಚಾಯಿತಿ ಚುನಾವಣೆ ಎದುರಿಸುವುದಕ್ಕೆ ಪ್ರತಿಯೊಂದು ಕ್ಷೇತ್ರವಾರು ಸಭೆಗಳನ್ನು ಮಾಡಲಾಗುತ್ತಿದೆ. ಆಯಾ ತಾಲ್ಲೂಕುಗಳಲ್ಲಿ ಕಾರ್ಯಕರ್ತರ ಸಭೆಗಳು ನಡೆದಿವೆ. ಟಿಕೆಟ್‌ ಆಕಾಂಕ್ಷಿಗಳು ಬರುತ್ತಿದ್ದಾರೆ.

- ಎಂ.ವಿರೂಪಾಕ್ಷಿ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.