ADVERTISEMENT

ರಾಯಚೂರು: ಹಾಳಾದ ರಸ್ತೆಯಲ್ಲಿ ಲಾರಿಗಳ ಕಿರಿಕಿರಿ

ಆಶಾಪುರ ಮಾರ್ಗದಲ್ಲಿ ಮನೆಮಾಡಿರುವ ಆತಂಕ

ನಾಗರಾಜ ಚಿನಗುಂಡಿ
Published 24 ಆಗಸ್ಟ್ 2020, 14:23 IST
Last Updated 24 ಆಗಸ್ಟ್ 2020, 14:23 IST
ರಾಯಚೂರಿನ ಆಶಾಪುರ ಮಾರ್ಗದ ಇಕ್ಕಿಟ್ಟಿನ ರಸ್ತೆಯಲ್ಲಿ ಜನಸಂಚಾರಕ್ಕೆ ಸಂಕಷ್ಟ ನಿರ್ಮಿಸಿರುವ ಲಾರಿಗಳು
ರಾಯಚೂರಿನ ಆಶಾಪುರ ಮಾರ್ಗದ ಇಕ್ಕಿಟ್ಟಿನ ರಸ್ತೆಯಲ್ಲಿ ಜನಸಂಚಾರಕ್ಕೆ ಸಂಕಷ್ಟ ನಿರ್ಮಿಸಿರುವ ಲಾರಿಗಳು   

ರಾಯಚೂರು: ನಗರದ ಆಶಾಪುರ ಮಾರ್ಗದ ರಸ್ತೆಯು ಹೊಸ ಹೊಸ ಸಮಸ್ಯೆಗಳಿಂದ ಸುದ್ದಿ ಆಗುತ್ತಲೇ ಇದೆ. ಆದರೆ, ಜನರ ಸಮಸ್ಯೆಗೆ ಸ್ಪಂದಿಸಲು ಆಯ್ಕೆಯಾಗಿರುವ ಜನಪ್ರತಿನಿಧಿಗಳು ಸಮಸ್ಯೆಗೆ ಪರಿಹಾರ ಕಲ್ಪಿಸುತ್ತಿಲ್ಲ!

ಪ್ರತಿದಿನವೂ ಬೈಕ್‌ ಸವಾರರು ಮಗುಚಿ ಬೀಳುವ ಪ್ರಕರಣಗಳು ನಡೆಯುತ್ತಿವೆ. ರಸ್ತೆ ಗುಂಡಿಗಳನ್ನು ತಪ್ಪಿಸುವ ಪ್ರಯತ್ನದಲ್ಲಿ ವಾಹನಗಳು ಪರಸ್ಪರ ಡಿಕ್ಕಿ ಆಗುತ್ತಿವೆ. ಕಿರಿದಾದ ರಸ್ತೆಯಲ್ಲಿ ವಾಹನಗಳ ದಟ್ಟಣೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಸಂಚಾರಕ್ಕೆ ಪೂರಕವಾಗಿ ಸುಗಮವಾಗಿ ಇರಬೇಕಾಗಿದ್ದ ರಸ್ತೆಯು ಮತ್ತಷ್ಟು ಹದಗೆಡುತ್ತಿದೆ. ಜಿಲ್ಲಾಡಳಿತ ಅಥವಾ ನಗರಸಭೆಯಿಂದ ಸಮಸ್ಯೆ ಪರಿಹಾರ ಮಾಡಬಹುದು ಎಂದು ಜನರು ವರ್ಷಗಳಿಂದ ಕಾಯುತ್ತಿದ್ದು, ಇದೀಗ ಅಸಹಾಯಕರಾಗಿ ಸಮಸ್ಯೆ ಅನುಭವಿಸುತ್ತಿದ್ದಾರೆ.

ಸಂಪೂರ್ಣ ಹಾಳಾಗಿರುವ ಸಿಸಿ ರಸ್ತೆ, ಬಿಟಿ ರಸ್ತೆಗಳಿಂದ ಅಕ್ಕಪಕ್ಕದ ಬಡಾವಣೆಗಳ ಜನರು ರೋಸಿ ಹೋಗಿದ್ದು, ಆತಂಕದಲ್ಲಿಯೇ ಓಡಾಡುತ್ತಿದ್ದಾರೆ. ಸಾರ್ವಜನಿಕರ ವಾಹನಗಳ ಓಡಾಟಕ್ಕೆ ತೊಂದರೆ ಇರುವ ರಸ್ತೆಯಲ್ಲೇ ಭಾರತ ಆಹಾರ ನಿಗಮ (ಎಫ್‌ಸಿಐ)ದ ಗೋದಾಮಿಗೆ ಆಹಾರಧಾನ್ಯ ತಲುಪಿಸಲು ಹತ್ತಾರು ಲಾರಿಗಳು ಏಕಕಾಲಕ್ಕೆ ನುಗ್ಗುತ್ತಿವೆ. ರೈಲ್ವೆ ಸ್ಟೇಷನ್‌ನಿಂದ ಆಶಾಪುರ ಮಾರ್ಗದಲ್ಲಿರುವ ಗೋದಾಮಿಗೆ ಲಾರಿಗಳು ಓಡಾಟ ಶುರುವಾದರೆ, ಜನರು ಮನೆಗಳಿಂದ ಹೊರಬರುವುದಕ್ಕೆ ಹೆದರುತ್ತಾರೆ.

ADVERTISEMENT

ಮಕ್ಕಳು, ಮಹಿಳೆಯರು ಹಾಗೂ ವಯೋವೃದ್ಧರು ಮನೆಗಳಿಂದ ಹೊರಗಡೆ ಬರಲು ಸಾಧ್ಯವಾಗುವುದಿಲ್ಲ. ರಸ್ತೆ ದೂಳು, ಕಿರಿದಾದ ರಸ್ತೆಯಲ್ಲಿ ವೇಗವಾಗಿ ಸಂಚರಿಸುವ ಲಾರಿಗಳು, ಇದರ ಮಧ್ಯೆ ಬೇರೆ ವಾಹನಗಳು ಸಂಚರಿಸುವುದಕ್ಕೆ ಮಾರ್ಗವೇ ಸಿಗುವುದಿಲ್ಲ. ಹೀಗಾಗಿ ಆಶಾಪುರ ಮಾರ್ಗದಲ್ಲಿ ಎಫ್‌ಸಿಐ ಲಾರಿಗಳಿಂದ ವಾಹನ ದಟ್ಟಣೆ ಏರ್ಪಡುತ್ತದೆ. ಲಾರಿಗಳ ಓಡಾಟದಿಂದ ಸಿಸಿ ರಸ್ತೆಯು ಸಂಪೂರ್ಣ ಹಾಳಾಗಿದೆ.

ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಸಲು ಸಿಸಿ ರಸ್ತೆಯನ್ನು ಅಗೆದುಹಾಕಲಾಗುತ್ತಿದೆ. ಆದರೆ, ರಸ್ತೆ ಮರುನಿರ್ಮಾಣ ಸಮರ್ಪಕವಾಗಿ ಮಾಡುತ್ತಿಲ್ಲ. ಹೀಗಾಗಿ ಲಾರಿ ಹಾಗೂ ಬೇರೆಬೇರೆ ವಾಹನಗಳ ಚಕ್ರಗಳು ಸಿಕ್ಕಿಬೀಳುವ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿವೆ. ಮಂತ್ರಾಲಯ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಶಾಪುರ ಕ್ರಾಸ್‌ನಿಂದ ಎಫ್‌ಸಿಐ ಗೋದಾಮುವರೆಗಿನ ಒಂದು ಕಿಲೋ ಮೀಟರ್‌ ಇರುವ ಸಿಸಿ ರಸ್ತೆಯು ಅದ್ವಾನ್‌ಗೊಂಡಿದೆ. ಅಲ್ಲಿಂದ ಮುಂದಿನ ಬಿಟಿ ರಸ್ತೆಯು ಹಾಳಾಗಿ ಕಚ್ಚಾ ರಸ್ತೆಯಾಗಿ ಬದಲಾಗಿದೆ. ಪ್ರತಿವರ್ಷ ರಸ್ತೆ ದುರಸ್ತಿಗೆ ಲಕ್ಷಾಂತರ ಮೊತ್ತ ವ್ಯಯಿಸಲಾಗುತ್ತಿದೆ. ಆದರೆ, ರಸ್ತೆ ವ್ಯವಸ್ಥಿತ ಆಗುತ್ತಿಲ್ಲ. ತಗ್ಗುದಿನ್ನೆಗಳಲ್ಲಿ ರಸ್ತೆ ಹುಡುಕಿಕೊಂಡು ಸಂಚರಿಸುವ ಅನಿವಾರ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.