ಶಕ್ತಿನಗರ (ರಾಯಚೂರು ಜಿಲ್ಲೆ): ತಾಂತ್ರಿಕ ಸಮಸ್ಯೆಯಿಂದಾಗಿ ರಾಯಚೂರು ಶಾಖೋತ್ಪನ್ನ ವಿದ್ಯುತ್ (ಆರ್‌ಟಿಪಿಎಸ್) ಸ್ಥಾವರದ 4 ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ ಮಾಡಲಾಗಿದೆ.
ವಾರ್ಷಿಕ ನಿರ್ವಹಣೆಗಾಗಿ 210 ಮೆಗಾವಾಟ್ ಸಾಮರ್ಥ್ಯದ 4ನೇ ಘಟಕ ಮತ್ತು 250 ಮೆಗಾವಾಟ್ ಸಾಮರ್ಥ್ಯದ 8ನೇ ವಿದ್ಯುತ್ ಘಟಕದ ಉತ್ಪಾದನೆ ಬಂದ್ ಮಾಡಲಾಗಿದೆ.
ಬಾಯ್ಲರ್ ಟ್ಯೂಬ್ ಸೋರಿಕೆಯಿಂದಾಗಿ 210 ಮೆಗಾವಾಟ್ ಸಾಮರ್ಥ್ಯದ 2ನೇ ಘಟಕ ಮತ್ತು 6ನೇ ಘಟಕದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಒಂದನೇ ಘಟಕದ ಉತ್ಪಾದನೆ ಕಳೆದ ಎರಡು ವರ್ಷಗಳಿಂದ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
ಇಲ್ಲಿರುವ 8 ವಿದ್ಯುತ್ ಘಟಕಗಳ ಪೈಕಿ 1, 2, 4, 6 ಮತ್ತು 8ನೇ ವಿದ್ಯುತ್ ಘಟಕಗಳ ಉತ್ಪಾದನೆ ಸ್ಥಗಿತಗೊಂಡಿದ್ದರಿಂದ 1,720 ಮೆಗಾವಾಟ್ ಸಾಮರ್ಥ್ಯದ ಪೈಕಿ 550 ಮೆಗಾವಾಟ್ ಮಾತ್ರ ಉತ್ಪಾದನೆ ಆಗುತ್ತಿದೆ.
‘ಕಲ್ಲಿದ್ದಲು ವಿಭಾಗದ ಸಂಗ್ರಹದಲ್ಲಿ 4 ಲಕ್ಷ ಟನ್ ಕಲ್ಲಿದ್ದಲು ಸಂಗ್ರಹವಿದೆ. ಬಾಯ್ಲರ್ ಟ್ಯೂಬ್ ಸೋರಿಕೆಯಿಂದಾಗಿ 2ನೇ ಮತ್ತು 6ನೇ ಘಟಕ ಸ್ಥಗಿತವಾಗಿದ್ದು, ದುರಸ್ತಿ ಕಾರ್ಯ ನಡೆಯುತ್ತಿದೆ. ಇನ್ನೆರಡು ದಿನಗಳಲ್ಲಿ ಉತ್ಪಾದನೆ ಆರಂಭವಾಗಲಿದೆ’ ಎಂದು ಆರ್‌ಟಿಪಿಎಸ್ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ನಾರಾಯಣ ಗಜಕೋಶ ಹೇಳಿದರು.
ವಾರ್ಷಿಕ ನಿರ್ವಹಣೆಗಾಗಿ 4ನೇ ಘಟಕ ಮತ್ತು 8ನೇ ಘಟಕದ ಉತ್ಪಾದನೆ ಬಂದ್ ಮಾಡಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.