ADVERTISEMENT

ರಾಯಚೂರು: ವಿದ್ಯುತ್ ಪರಿವರ್ತಕ ಬದಲಾವಣೆಗೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2024, 15:41 IST
Last Updated 27 ಆಗಸ್ಟ್ 2024, 15:41 IST
ರಾಯಚೂರಿನ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಎಐಡಿವೈಒ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ರಾಯಚೂರಿನ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಎಐಡಿವೈಒ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ರಾಯಚೂರು: ತಾಲ್ಲೂಕಿನ ಮಮದಾಪುರ ಗ್ರಾಮದಲ್ಲಿ ಸುಟ್ಟುಹೋದ ವಿದ್ಯುತ್ ಪರಿವರ್ತಕ(ಟಿ.ಸಿ)ವನ್ನು ಬದಲಿಸಿ ಕೂಡಲೇ ಹೊಸ ಪರಿವರ್ತಕವನ್ನು ಅಳವಡಿಸಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಜೇಶನ್ (ಎಐಡಿವೈಒ) ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು

ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಎಐಡಿವೈಒ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಮಮದಾಪುರ ಗ್ರಾಮದಲ್ಲಿ ಸುಟ್ಟು ಹೋಗಿರುವ ವಿದ್ಯುತ್ ಪರಿವರ್ತಕವನ್ನು ಬದಲಿಸಿ ಕೂಡಲೇ 100 ಕೆ.ವಿ ಸಾಮರ್ಥ್ಯದ ಹೊಸ ವಿದ್ಯುತ್ ಪರಿವರ್ತಕವನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು.

ಮಾರ್ಚ್ ನಲ್ಲಿ ವಿದ್ಯುತ್ ಸಮಸ್ಯೆಯ ಬಗ್ಗೆ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಇರುವ ವಿದ್ಯುತ್ ಪರಿವರ್ತಕ ಸಾಮರ್ಥ್ಯ ಊರಿನ ವಿದ್ಯುತ್ ಬಳಕೆ ಅವಶ್ಯಕತೆಗೆ ಸಾಕಾಗುತ್ತಿಲ್ಲ. ಗ್ರಾಮದಲ್ಲಿ ಬಲ್ಬ್ ಗಳು ಉರಿಯುತ್ತಿಲ್ಲ. ಸರಿಯಾಗಿ ವೋಲ್ಟೇಜ್ ಇರದೇ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮದಲ್ಲಿ ವಿದ್ಯುತ್ ಕಂಬಗಳು ಹಾಳಾಗಿದ್ದು, ವಿದ್ಯುತ್ ವೈರುಗಳು ಜೋತು ಬಿದ್ದಿವೆ. ಇದರಿಂದ  ವಿದ್ಯುತ್ ಅವಘಡ ಸಂಭವಿಸುವ ಅಪಾಯವಿದೆ ಎಂದು ಎಐಡಿವೈಒ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವ ಜಾನೇಕಲ್ ಆತಂಕ ವ್ಯಕ್ತಪಡಿಸಿದರು.

ADVERTISEMENT

ಈಗಾಗಲೇ ವಿದ್ಯುತ್ ಅವಘಡ ಸಂಭವಿಸಿ ಒಂದು ಜಾನುವಾರು ಸತ್ತು ಹೋಗಿವೆ. ಈ ನಡುವೆ ವಿದ್ಯುತ್ ಪರಿವರ್ತಕವೇ ಸುಟ್ಟು ಹೋಗಿ ನಾಲ್ಕೈದು ದಿನಗಳು ಕಳೆದು ಊರು ಕತ್ತಲಲ್ಲಿ ಮುಳುಗಿದೆ ಎಂದು ಆರೋಪಿಸಿದರು.

ಕೂಡಲೇ ತುರ್ತಾಗಿ ಹೆಚ್ಚು ಸಾಮರ್ಥ್ಯವಿರುವ ಅಂದರೆ  100ಕೆ.ವಿ.ಎ ಸಾಮರ್ಥ್ಯದ ಹೊಸ ವಿದ್ಯುತ್ ಪರಿವರ್ತಕವನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ  ಎಂಜಿನಿಯರ್ ಎಂ.ಡಿ ಶಫಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಕಿರಿಯ ಎಂಜಿನಿಯರ್  ಪ್ರಕಾಶ ಇದ್ದರು. 24 ಗಂಟೆಯೊಳಗೆ ಸಮಸ್ಯೆ ಇತ್ಯರ್ಥ ಮಾಡಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಸುಗ್ರೀವ, ಮಾರೆಪ್ಪ, ಯಂಕೋಬ, ನಾಗಪ್ಪ, ಗುರುಮಾರಾಜ, ರಾಮು, ಮುನಿಸ್ವಾಮಿ, ಲಕ್ಷ್ಮಣ್ಣ, ಶುಭಕುಮಾರ, ವೀರೇಶ, ಜಮಲಮ್ಮ, ಶಾರದಮ್ಮ,ರೋಜಮ್ಮ,ವಿಮಲಮ್ಮ, ಯಮುನಪ್ಪ, ಆಂಜನೇಯ, ವಿನೋದಕುಮಾರ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.