
ಲಿಂಗಸುಗೂರು: ತಾಲ್ಲೂಕಿನ ಹಟ್ಟಿ ಹಾಗೂ ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮದಲ್ಲಿ ಯುವತಿಯನ್ನು ಹತ್ಯೆಗೈದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ, ಮಾದಿಗ ಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಬಸವಸಾಗರ ವೃತ್ತದಿಂದ ಗಡಿಯಾರ ವೃತ್ತ, ಅಂಚೆ ಕಚೇರಿ ವೃತ್ತದ ಮೂಲಕ ಬಸ್ ನಿಲ್ದಾಣದ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಹನುಮಂತಪ್ಪ ವೆಂಕಟಾಪುರ,‘ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ದಲಿತ ಯುವಕನನ್ನು ಮದುವೆಯಾದ ಕಾರಣಕ್ಕೆ 7 ತಿಂಗಳು ಗರ್ಭಿಣಿ ಮಗಳನ್ನು ಸ್ವಂತ ತಂದೆಯೇ ಹತ್ಯೆ ಮಾಡಿರುವುದು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂಥ ಘಟನೆಯಾಗಿದೆ’ ಎಂದರು.
‘ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಪಟ್ಟಣದಲ್ಲಿ ಸ್ಟಾಫ್ ನರ್ಸ್ ಜ್ಯೋತಿಯನ್ನು ಕೊಲೆ ಮಾಡಿ ರಸ್ತೆಯಲ್ಲಿ ನಿಂತಿದ್ದ ರೋಡ್ ರೋಲರ್ ವಾಹನಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಹಾಕಲಾಗಿದೆ. ಈ ಬಗ್ಗೆ ಸರಿಯಾಗಿ ತನಿಖೆ ನಡೆಸದಿರುವ ಹಟ್ಟಿ ಪಿಐ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು. ಮಾನ್ಯಾ ಹತ್ಯೆ ಪ್ರಕರಣವನ್ನು ಸರ್ಕಾರ ತ್ವರಿತ ವಿಶೇಷ ನ್ಯಾಯಾಲಯಕ್ಕೆ ವಹಿಸಬೇಕು. ನ್ಯಾಯಾಂಗ ತನಿಖೆಗೆ ಆದೇಶಿಸಬೇಕು. ರಾಜ್ಯದಲ್ಲಿ ಮರ್ಯಾದೆಗೇಡು ಹತ್ಯೆ ವಿರೋಧಿ ಕಾನೂನು ಜಾರಿಗೆ ತರಬೇಕು. ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ರಕ್ಷಣೆ ಹಾಗೂ ತಲಾ ₹1 ಕೋಟಿ ಪರಿಹಾರ ನೀಡಬೇಕು. ಎರಡು ಕುಟಂಬಗಳಿಗೆ ಸರ್ಕಾರಿ ಉದ್ಯೋಗದ ಜೊತೆಗೆ ಐದು ಎಕರೆ ಸರ್ಕಾರಿ ಜಮೀನು ಮಂಜೂರು ಮಾಡಬೇಕು’ ಎಂದು ಆಗ್ರಹಿಸಿದರು.
ಮುಖಂಡರಾದ ಹನುಮಂತಪ್ಪ ಕುಣಿಕೆಲ್ಲೂರು, ಶರಣಪ್ಪ ಕಟ್ಟಿಮನಿ, ಮಲ್ಲಯ್ಯ ಬುಳ್ಳಾ, ಆಜಪ್ಪ ಕರಡಕಲ್, ಲಕ್ಕಪ್ಪ ನಾಗರಾಳ, ಬಸವರಾಜ ಮುದಗಲ್, ನಾಗರಾಜ ಯರಡೋಣ, ಹುಸೇನಪ್ಪ ದೊಡ್ಡಮನಿ, ಮೋಕ್ಷಮ್ಮ, ಗ್ಯಾನಪ್ಪ ಕಟ್ಟಿಮನಿ, ಬಸವರಾಜ ಕುಣಿಕೆಲ್ಲೂರು, ಮೌನೇಶ ಮಸ್ಕಿ, ನಾಗರಾಜ ಮುಂದಿನಮನಿ, ಯಂಕಪ್ಪ ಚಿತ್ತಾಪುರ, ಅಂಜನೇಯ ಭಂಡಾರಿ, ನಾಗರಾಜ ಹಾಲಭಾವಿ, ದುರಗಪ್ಪ ಯರಡೋಣ, ಮುತ್ತಣ್ಣ ಗುರುಗುಂಟಾ, ಬಾಲರಾಜ ಗೌಡೂರು, ಹುಲಗವ್ವ ಗುರುಗುಂಟಾ ಹಾಗೂ ಅಮರೇಶ ಗೌಡೂರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.