ADVERTISEMENT

ನಡುಗಡ್ಡೆ ಜನರಿಗೆ ನ್ಯಾಯ ಸಿಗದಿದ್ದರೆ ಹೋರಾಟ: ದಲಿತ ಸಂಘರ್ಷ ಸಮಿತಿ

ಶಾಶ್ವತ ಸ್ಥಳಾಂತರದ ವಿಫಲ: ತನಿಖೆಗೆ ದಸಂಸ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 14:01 IST
Last Updated 27 ಜುಲೈ 2021, 14:01 IST
ಲಿಂಗಸುಗೂರಲ್ಲಿ ಮಂಗಳವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಡುಗಡ್ಡೆ ಪರಿಶಿಷ್ಟರಿಗೆ ನ್ಯಾಯ ನೀಡಲು ಆಗ್ರಹಿಸಿ ರಾಜ್ಯಪಾಲರಿಗೆ ಬರೆದ ಮನವಿಯನ್ನು ಉಪ ವಿಭಾಗಾಧಿಕಾರಿ ರಾಹುಲ್ ಸಂಕನೂರ ಅವರಿಗೆ ಸಲ್ಲಿಸಿದರು
ಲಿಂಗಸುಗೂರಲ್ಲಿ ಮಂಗಳವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಡುಗಡ್ಡೆ ಪರಿಶಿಷ್ಟರಿಗೆ ನ್ಯಾಯ ನೀಡಲು ಆಗ್ರಹಿಸಿ ರಾಜ್ಯಪಾಲರಿಗೆ ಬರೆದ ಮನವಿಯನ್ನು ಉಪ ವಿಭಾಗಾಧಿಕಾರಿ ರಾಹುಲ್ ಸಂಕನೂರ ಅವರಿಗೆ ಸಲ್ಲಿಸಿದರು   

ಲಿಂಗಸುಗೂರು: ‘ಕೃಷ್ಣಾ ನದಿಯ ನಡುಗಡ್ಡೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಾಂಗಕ್ಕೆ ಸಾಮಾಜಿಕ ನ್ಯಾಯ ಒದಗಿಸದಿದ್ದರೆ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು‘ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ) ಕಾರ್ಯಕರ್ತರು ಎಚ್ಚರಿಸಿದರು.

ಉಪ ವಿಭಾಗಾಧಿಕಾರಿ ರಾಹುಲ್‍ ಸಂಕನೂರ ಮೂಲಕ ರಾಜ್ಯಪಾಲರಿಗೆಮಂಗಳವಾರ ಮನವಿ ಸಲ್ಲಿಸಿದ ಸಂಘಟಕರು, ಕಳೆದ ನಾಲ್ಕು ದಶಕಗಳಿಂದ ನಡುಗಡ್ಡೆ ಜನರ ರಕ್ಷಣೆ ಹೆಸರಲ್ಲಿ ಶಾಶ್ವತ ಸ್ಥಳಾಂತರದ ಭರವಸೆ ನೀಡುತ್ತ ಬಂದಿರುವ ತಾಲ್ಲೂಕು ಮತ್ತು ಜಿಲ್ಲಾ ಆಡಳಿತ ಯಾವುದೇ ನ್ಯಾಯ ನೀಡಿಲ್ಲ. ಪ್ರವಾಹ ಸಂದರ್ಭದಲ್ಲಿ ಮೋಜು ಮಸ್ತಿ ಮಾಡಿ ಹೋಗುವ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ವರ್ಷಗಟ್ಟಲೆ ನಡುಗಡ್ಡೆ ಪ್ರದೇಶಗಳತ್ತ ಮುಖ ಮಾಡುವುದಿಲ್ಲ ಎಂದು ಆರೋಪಿಸಿದರು.

ನಡುಗಡ್ಡೆ ಪ್ರದೇಶಗಳಾದ ಕರಡಕಲಗಡ್ಡಿ, ವಂಕಮ್ಮನಗಡ್ಡಿಯಲ್ಲಿ ಪರಿಶಿಷ್ಟ ಪಂಗಡದವರು, ಮ್ಯಾದರಗಡ್ಡಿ ಮತ್ತು ಕಡದರಗಡ್ಡಿ ಪ್ರದೇಶದಲ್ಲಿ ಪರಿಶಿಷ್ಟ ಜಾತಿಯವರೆ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಪ್ರವಾಹ ಸಂದರ್ಭದಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿ ಇಲ್ಲದ ತಂಡಗಳನ್ನು ಕರೆಯಿಸಿ ಖರ್ಚು ಮಾಡುವ ಅಧಿಕಾರಿಗಳು, ನಡುಗಡ್ಡೆಗಳಲ್ಲಿ ಇರಲು ಬಿಡದೆ, ಶಾಶ್ವತ ಸ್ಥಳಾಂತರವು ಮಾಡದೆ ನಿರ್ಲಕ್ಷ್ಯ ವಹಿಸುತ್ತ ಬಂದಿದ್ದಾರೆ. ನಾಲ್ಕು ದಶಕಗಳಲ್ಲಿ ಮಾಡಿರುವ ಖರ್ಚ ವೆಚ್ಚದ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ADVERTISEMENT

ಸುಸಜ್ಜಿತ ಬಡಾವಣೆ ನಿರ್ಮಿಸಿ ಅಗತ್ಯ ಸೌಲಭ್ಯ ಕಲ್ಪಿಸುವ ಜೊತೆಗೆ ಮನೆಗಳ ನಿರ್ಮಾಣ ಮಾಡಿಕೊಡಬೇಕು. ಜಮೀನುಗಳನ್ನು ಸ್ವಾಧೀನಪಡಿಸಿಕೊಂಡು ಭೂ ಪರಿಹಾರ ಅಥವಾ ಪರ್ಯಾಯ ಜಮೀನು ಕೊಡಿಸಲು ಮುಂದಾಗಬೇಕು. ಇದ್ಯಾವುದು ಆಗದಿದ್ದರೆ ನಡುಗಡ್ಡೆ ಪ್ರದೇಶಗಳಿಗೆ ಸಂಪರ್ಕಿಸಲು ತೂಗು ಸೇತುವೆ ನಿರ್ಮಿಸಬೇಕು. ವರ್ಷಕ್ಕೊಮ್ಮೆ ಅನಗತ್ಯ ಒಕ್ಕಲೆಬ್ಬಿಸುವ ಪರಿಪಾಠಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಪಡಿಸಿದರು.

ಈಚೆಗೆ ತವದ ಗಡ್ಡಿಯಲ್ಲಿ ಮೂವರು ಸಿಲುಕಿಕೊಂಡಿದ್ದರು ಕೂಡ ತಾಲ್ಲೂಕು ಮತ್ತು ಜಿಲ್ಲಾ ಆಡಳಿತ ಅವರ ರಕ್ಷಣೆಗೆ ತಕ್ಷಣವೆ ಮುಂದಾಗಿಲ್ಲ ಎಂದು ದೂರಿದರು.

ಕದಸಂಸ ಜಿಲ್ಲಾ ಸಂಚಾಲಕ ಪ್ರಭುಲಿಂಗ ಮೇಗಳಮನಿ. ತಾಲ್ಲೂಕು ಸಂಚಾಲಕ ನಾಗರಾಜ ಹಾಲಭಾವಿ. ಸಾಮಾಜಿಕ ಜಾಲತಾಣ ಅಧ್ಯಕ್ಷ ಅಕ್ರಂಪಾಷ. ಮುಖಂಡರಾದ ಹನುಮಂತಪ್ಪ ವೆಂಕಟಾಪುರ, ಯಲ್ಲಪ್ಪ ಹಾಲಭಾವಿ, ಪರಶುರಾಮ ಗುಡಿಜಾವೂರ, ಅಮರೇಶ ಹಟ್ಟಿ, ಬಸವರಾಜ ಮೈಸೂರು, ಹುಸೇನಪ್ಪ ತರಕೇರಿ, ಹನುಮೇಶ ಕುಪ್ಪಿಗುಡ್ಡ, ಷಣ್ಮುಖರೆಡ್ಡಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.