
ಮೋಕ್ಷಮ್ಮ
ರಾಯಚೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡದಿದ್ದರೆ ಶಾಸಕರ ಮನೆಗಳ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಶಾಲಾ ಅಭಿವೃದ್ಧಿ ವೇದಿಕೆಯ ಸದಸ್ಯೆ ಮೋಕ್ಷಮ್ಮ ತಿಳಿಸಿದರು.
ಜಿಲ್ಲೆ ಸೇರಿ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ 3495 ಪ್ರೌಢಶಾಲೆ, 11666 ಪ್ರಾಥಮಿಕ ಹಾಗೂ 2645 ದೈಹಿಕ ಶಿಕ್ಷಣ ಹಾಗೂ 398 ವಿಶೇಷ ಶಿಕ್ಷಕರು ಸೇರಿ ಒಟ್ಟು 17 443 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಪ್ರತಿ ವರ್ಷ ಶಾಲೆಗಳು ಆರಂಭವಾಗುವ ವೇಳೆಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳದೇ ವಿಳಂಬ ಮಾಡುವುದರಿಂದ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ಆರೋಪಿಸಿದರು.
ಕಳೆದ ಜನವರಿ 25ರಂದು ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿದಾಗ ಶಿಕ್ಷಣ ಸಚಿವರು ಖಾಲಿ ಹುದ್ದೆ ಭರ್ತಿಯ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಶಿಕ್ಷಕರನ್ನು ಕಾಯಂಗೊಳಿಸಿಲ್ಲ ಹಾಗೂ ಅತಿಥಿ ಶಿಕ್ಷಕರಿಗೂ ಅವಕಾಶ ನೀಡಿಲ್ಲ. ಶಿಕ್ಷಕರ ಕೊರತೆಯಿಂದ ಸುಮಾರು 200 ಶಾಲೆಗಳು ಎಸ್ಎಸ್ಎಲ್‌ಸಿಯಲ್ಲಿ ಶೂನ್ಯ ಫಲಿತಾಂಶ ಪಡೆದಿವೆ. ಶಿಕ್ಷಕರ ಖಾಲಿ ಹುದ್ದೆ ಭರ್ತಿಗೆ ಆಯಾ ಸ್ಥಳೀಯ ಶಾಸಕರು ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದರು.
ಹೋರಾಟಗಾರ್ತಿ ವಿದ್ಯಾ ಪಾಟೀಲ ಮಾತನಾಡಿ,‘ಈಗಾಗಲೇ ವಿಷಯವಾರು ಶಿಕ್ಷಕರಿಲ್ಲದ ಕಾರಣ ವಿದ್ಯಾರ್ಥಿಗಳ ಕಲಿಕೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ. ಖಾಲಿ ಇರುವ ಶಿಕ್ಷಕರ ಹುದ್ದೆಯ ನೇಮಕಾತಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಿ 18 ಸಾವಿರ ಶಿಕ್ಷಕರ ಭರ್ತಿಗೆ ಮುಂದಾಗಬೇಕು’ ಎಂದು ಒತ್ತಾಯಿಸಿದರು.
ಮುಖಂಡರಾದ ಮಾರೆಪ್ಪ ಹಾಗೂ ಶಿವರಾಮರೆಡ್ಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.