ADVERTISEMENT

ಮನುವಾದಿ ಚಿಂತನೆಯಿಂದ ಅಪಾಯ: ಶಂಕರ ವಾಲಿಕಾರ್ ಕಳವಳ

ಸಿಂಧನೂರು: ಮಿನಿವಿಧಾನಸೌಧ ಕಚೇರಿ ಮುಂದೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 31 ಮೇ 2022, 4:20 IST
Last Updated 31 ಮೇ 2022, 4:20 IST
ಸಿಂಧನೂರಿನ ಮಿನಿವಿಧಾನಸೌಧ ಕಚೇರಿಯ ಮುಂದೆ ಜನತಾಂತ್ರಿಕ ಶಿಕ್ಷಣಕ್ಕಾಗಿ ಜಾಗೃತ ನಾಗರಿಕರು ವೇದಿಕೆ ಹಾಗೂ ಮನುಜಮತ ಬಳಗದ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು
ಸಿಂಧನೂರಿನ ಮಿನಿವಿಧಾನಸೌಧ ಕಚೇರಿಯ ಮುಂದೆ ಜನತಾಂತ್ರಿಕ ಶಿಕ್ಷಣಕ್ಕಾಗಿ ಜಾಗೃತ ನಾಗರಿಕರು ವೇದಿಕೆ ಹಾಗೂ ಮನುಜಮತ ಬಳಗದ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು   

ಸಿಂಧನೂರು: ‘ಪಠ್ಯಪುಸ್ತಕಗಳಲ್ಲಿ ಮನುವಾದಿ ಚಿಂತನೆಗಳ ಪಾಠಗಳನ್ನು ಸೇರಿಸುವ ಮೂಲಕ ಶಿಕ್ಷಣವನ್ನು ಕೇಸರಿಣಗೊಳಿಸಿ ಮಕ್ಕಳ ಭವಿಷ್ಯವನ್ನು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಹಾಳುಗೆಡುವಲು ಹೊರಟಿದೆ. ಇದು ಶಿಕ್ಷಣ ಕ್ಷೇತ್ರಕ್ಕಷ್ಟೇ ಅಲ್ಲದೇ ನಾಡಿಗೆ ದೊಡ್ಡ ಆಪತ್ತು ತರಲಿದೆ’ ಎಂದು ಉಪನ್ಯಾಸಕ ಶಂಕರ ವಾಲಿಕಾರ್ ಕಳವಳ ವ್ಯಕ್ತಪಡಿಸಿದರು.

ಜನತಾಂತ್ರಿಕ ಶಿಕ್ಷಣಕ್ಕಾಗಿ ಜಾಗೃತ ನಾಗರಿಕರ ವೇದಿಕೆ ಹಾಗೂ ಮನುಜಮತ ಬಳಗದ ವತಿಯಿಂದ ಸೋಮವಾರ ಸ್ಥಳೀಯ ಮಿನಿವಿಧಾನಸೌಧ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಕುವೆಂಪು ಅವರು ರಚಿಸಿದ ನಾಡಗೀತೆಯನ್ನು ಅಪಮಾನಿಸಿದ ರೋಹಿತ್ ಚಕ್ರತೀರ್ಥನನ್ನು ಪಠ್ಯ ಪರಿಶೀಲನಾ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ತಜ್ಞರಲ್ಲದವರ ಕೈಗೆ ಪ್ರಮುಖ ಜವಾಬ್ದಾರಿ ನೀಡಲಾಗಿದೆ’ ಎಂದರು.

ADVERTISEMENT

‘ಸಮಿತಿಯ ಒಂಬತ್ತು ಜನರಲ್ಲಿ 8 ಜನರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು, ಬಹುತ್ವ ಭಾರತದ ಆಶಯ, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಗಾಳಿಗೆ ತೂರಲಾಗಿದೆ. ಭಗತ್‍ಸಿಂಗ್, ಸಾರಾಅಬೂಬಕರ್, ಪಿ.ಲಂಕೇಶ್ ಸೇರಿದಂತೆ ಸಮಾಜದ ಸ್ವಾಸ್ಥ್ಯಕ್ಕೆ ಪೂರಕವಾದ ಪಾಠಗಳನ್ನು ಕೈಬಿಟ್ಟಿರುವುದು ಖಂಡನೀಯ’ ಎಂದು ದೂರಿದರು.

ರೋಹಿತ್‍ ಚಕ್ರತೀರ್ಥ ನೇತೃತ್ವದ ಪಠ್ಯಪರಿಶೀಲನಾ ಸಮಿತಿಯನ್ನು ವಜಾಗೊಳಿಸಿ, ಅವರ ಶಿಫಾರಸುಗಳನ್ನು ಅಮಾನ್ಯಗೊಳಿಸಬೇಕು. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ರಾಜೀನಾಮೆ ನೀಡಬೇಕು. ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಸಮಿತಿ ನಿರ್ಧರಿಸಿದ ಪಠ್ಯವನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಎಐಸಿಸಿಟಿಯು ಸಂಚಾಲಕ ನಾಗರಾಜ್ ಪೂಜಾರ್, ಎಸ್‍ಐಒ ತಾಲ್ಲೂಕು ಘಟಕದ ಅಧ್ಯಕ್ಷ ಇಮ್ತಿಯಾಜ್,
ಮನುಜಮತ ಬಳಗದ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾದರ್ಲಿ ಮಾತನಾಡಿದರು.

ಮುಖಂಡರಾದ ಚಂದ್ರಶೇಖರ ಗೊರಬಾಳ, ಶೇಕ್ಷಾಖಾದ್ರಿ, ಎಸ್.ದೇವೇಂದ್ರಗೌಡ, ಡಿ.ಎಚ್.ಕಂಬಳಿ, ಅಬ್ದುಲ್ ಸಮ್ಮದ್‍ಚೌದ್ರಿ, ನಾರಾಯಣ ಬೆಳಗುರ್ಕಿ, ಬಸವರಾಜ ಹಸಮಕಲ್, ಚಿದಾನಂದ, ಮಲ್ಲಿಕಾರ್ಜುನ ಕುರುಗೋಡು, ಡಾ.ವಸೀಮ್, ಆರ್.ಎಚ್.ಕಲಮಂಗಿ, ನೂರ್ ಮಹ್ಮದ್, ಚಂದ್ರಪ್ಪ, ಚಾಂದ್‍ಪಾಷಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.