ADVERTISEMENT

ತುಂಗಭದ್ರಾ ನದಿಯ ಜೀವ ಉಳಿಸಲು ಹೋರಾಟ: ರಾಘವೇಂದ್ರ ಕುಷ್ಟಗಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 13:51 IST
Last Updated 7 ಡಿಸೆಂಬರ್ 2019, 13:51 IST

ರಾಯಚೂರು: ಅಕ್ರಮ ಮರಳುಗಾರಿಕೆ ಹಾಗೂ ಅಭಿವೃದ್ಧಿ ನೆಪದಲ್ಲಿ ಮರಗಳನ್ನು ಕಡಿಯುವುದರಿಂದ ತುಂಗಭದ್ರಾ ನದಿ ಜೀವ ಕಳೆದುಕೊಳ್ಳುತ್ತಿದೆ ಎಂದು ಜನ ಸಂಗ್ರಾಮ ಪರಿಷತ್ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಹುಟ್ಟುವ ವರದಾ, ಭದ್ರಾ ಮತ್ತು ತುಂಗಾ ನದಿಗಳು ಸೇರಿ ತುಂಗಭದ್ರ ಜೀವನದಿ ಸೃಷ್ಟಿಯಾಗಿದೆ. 25 ವರ್ಷಗಳ ಹಿಂದೆ ತುಂಗಭದ್ರ ವರ್ಷಪೂರ್ತಿ ಹರಿಯುತ್ತಿತ್ತು. ಈಗ ಕೇವಲ ನಾಲ್ಕು ತಿಂಗಳು ಮಾತ್ರ ಹರಿಯುತ್ತಿರುವುದು ದುರದೃಷ್ಟಕರ ಎಂದರು.

ಅವೈಜ್ಞಾನಿಕವಾದ ರಸ್ತೆಗಳ ನಿರ್ಮಾಣ, ರೈಲು ಮಾರ್ಗ ನಿರ್ಮಾಣ, ವಿದ್ಯುತ್ ಯೋಜನೆ ರೂಪಿಸುವುದರಿಂದ ನೀರು ಚದುರಿ ಹೋಗಿದೆ. ತುಂಗಭದ್ರ ನದಿ ನಾಶವನ್ನು ತಡೆಗಟ್ಟದೇ ಇದ್ದರೆ, ಭದ್ರಾ ಜಲಾಶಯ, ತುಂಗಭದ್ರಾ, ಭದ್ರ ಮೇಲ್ದಂಡೆ ಯೋಜನೆಯ ಡ್ಯಾಮುಗಳಿಂದ 50 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶ ಬೆಳೆ ಬೆಳೆಯಲಾಗದೇ ರೈತಾಪಿ ಜನ ತತ್ತರಿಸಿ ಹೋಗುವ ಅಪಾಯವಿದೆ. ಮುಂದೆ ರಾಯಚೂರಿಗೆ ಕುಡಿಯಲು ನೀರು ಸಹ ಸಿಗುವುದಿಲ್ಲ ಎಂದು ತಿಳಿಸಿದರು.

ADVERTISEMENT

ಈ ಭಾಗದ ಆರ್ಥಿಕ ಜೀವನಾಡಿಯಾದ ತುಂಗಭದ್ರಾ ಜಲಾಶಯದಿಂದ ನೀರಾವರಿ ಸೌಲಭ್ಯ ಪಡೆದ ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ 25 ಲಕ್ಷಕ್ಕೂ ಹೆಚ್ಚು ಎಕರೆ ಅಚ್ಚುಕಟ್ಟು ಪ್ರದೇಶ ಖಂಡಿತ ಸಂಕಷ್ಟಕ್ಕೆ ಸಿಲುಕಲಿದೆ ಅದಕ್ಕೆ ಪಶ್ಚಿಮ ಘಟ್ಟಗಳ ರಕ್ಷಣೆಗೆ ಕಸ್ತೂರಿ ರಂಗನ್ ಸಮಿತಿ ಜಾರಿಗೆ ಮಾಡುವಂತೆ ಹೋರಾಟ ಮಾಡುವ ಅವಶ್ಯಕತೆ ಇದೆ ಎಂದರು.

ಜನಸಂಗ್ರಾಮ ಪರಿಷತ್ತಿನ ರಾಜ್ಯ ಅಧ್ಯಕ್ಷ ಜಾನ್ ವೇಸ್ಲಿ ಟಿ.ಕಾತ್ರಿಕಿ, ಜಿಲ್ಲಾಧ್ಯಕ್ಷ ಭಂಡಾರಿ ವೀರಣ್ಣ ಶೆಟ್ಟಿ, ಖಾಜಾ ಅಸ್ಲಮ್ ಅಹ್ಮದ್, ಮಾರೆಪ್ಪ ಗಂಟಿ, ಪರಪ್ಪ ನಾಗೋಲಿ, ಸಾಹಿತಿ ಪ್ರಸನ್ನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.