
ಸಿಂಧನೂರು: ನಗರದಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಸದನದಲ್ಲಿ ಚರ್ಚೆಯಾಗಿದೆ. ಅವುಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಕಠಿಣಕ್ರಮ ಕೈಗೊಂಡಿದೆ. ಸಾರ್ವಜನಿಕರು ಅಪರಾಧ ತಡೆಗೆ ಸಹಕಾರ ನೀಡಬೇಕು’ ಎಂದು ಡಿವೈಎಸ್‍ಪಿ ಚಂದ್ರಶೇಖರ ನಾಯಕ ಮನವಿ ಮಾಡಿದರು.
ನಗರದ ಸರ್ಕಿಟ್ ಹೌಸ್‍ನಲ್ಲಿ ಪೊಲೀಸ್ ಇಲಾಖೆಯಿಂದ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಜನಪ್ರತಿನಿಧಿಗಳ, ವರ್ತಕರು, ಸಂಘ-ಸಂಸ್ಥೆಗಳ ಮತ್ತು ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದರು.
‘ಅಪರಾಧ ಕೃತ್ಯ ಹೆಚ್ಚುತ್ತಿದ್ದು, ಕಡಿಮೆಗೊಳಿಸಲು ಸಾರ್ವಜನಿಕರು ತಮಗೆ ಗೊತ್ತಿರುವ ವಿಷಯವನ್ನು ಪೊಲೀಸರಿಗೆ ತಿಳಿಸಿಬೇಕು. ಮಾಹಿತಿದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು’ ಎಂದರು.
ಮಾಜಿ ಸಚಿವ ವೆಂಕಟರಾವ ನಾಡಗೌಡ ಮಾತನಾಡಿ, ‘ಜವಳಗೇರಾ ಗ್ರಾಮದಲ್ಲಿ ಅತಿ ಹೆಚ್ಚು ಡ್ರಗ್ಸ್ ಹಾವಳಿಯಿದೆ. ಗ್ರಾಮದ ಗುರುಭವನ ಕುಡಕರ ತಾಣವಾಗಿದೆ. ಕಟ್ಟಡ ಕೆಡವಲು ಅಧಿಕಾರಿಗಳಿಗೆ ಹೇಳಿದರೂ ಕೇಳುತ್ತಿಲ್ಲ. ಗಾಂಜಾ ಸೇವನೆಯಿಂದ ಯುವಕರ ಜೀವನ ಹಾಳಾಗುತ್ತಿದೆ. ಅವರು ರಾತ್ರಿ ಕಳ್ಳತನ ಮಾಡುತ್ತಿದ್ದಾರೆ. ಗ್ರಾಮದ ಜನರು ಭಯಭೀತರಾಗಿದ್ದಾರೆ. ಇಂತಹ ಅಪರಾಧಗಳ ತಡೆಗೆ ಪೊಲೀಸರು ರಾತ್ರಿ 10.30 ರ ನಂತರ ಅಂಗಡಿ ಮುಂಗಟ್ಟುಗಳನ್ಗು ಬಂದ್ ಮಾಡುವುದು ಸೂಕ್ತ’ ಎಂದು ಸಲಹೆ ನೀಡಿದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ‘ನಮ್ಮ ಮನೆ ಸುತ್ತಮುತ್ತ ಗಾಂಜಾ ಮಾರಾಟ, ಸೇವನೆ ಮಾಡುವವರ ಹೆಸರುಗಳನ್ನು ಈ ಹಿಂದಿನ ಡಿವೈಎಸ್‍ಪಿಗೆ ಹೇಳಿದರೂ ಕ್ರಮ ಕೈಗೊಳ್ಳಲಿಲ್ಲ. ಅಪರಾಧ ಚಟುವಟಿಕೆಗಳನ್ನು ಯಾರೇ ಮಾಡಲಿ, ಪೊಲೀಸರು ಕ್ರಮ ಕೈಗೊಳ್ಳಬೇಕು. ಅಪರಾಧಿಗಳ ರಕ್ಷಣೆಗೆ ಯಾರೂ ಬರುವುದಿಲ್ಲ’ ಎಂದರು.
ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಮಾತನಾಡಿ, ‘ಅಕ್ರಮ ಎಸಗುವವರ ವಿರುದ್ಧ ಪೊಲೀಸರು ಕಠಿಣ ಕ್ರಮಕೈಗೊಳ್ಳಬೇಕು. ಅದಕ್ಕೆ ಜನಪ್ರತಿನಿಧಿಗಳು, ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುತ್ತೇವೆ’ ಎಂದು ಭರವಸೆ ನೀಡಿದರು.
‘ಗಾಂಜಾ, ಜೂಜಾಟ, ಇಸ್ಪೀಟ್, ಅಕ್ರಮಮರಳು ಸಾಗಾಟ, ಸೇರಿದಂತೆ ಅನೇಕ ಅಕ್ರಮಗಳು ತಾಲ್ಲೂಕಿನಾದ್ಯಂತ ಹೆಚ್ಚಾಗಿದ್ದು, ಯುವಕರು ಬಲಿಯಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವಂತೆ ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿ ಸದನದಲ್ಲಿ ಚರ್ಚೆಯಾಗಿದೆ. ಈಗಲಾದರೂ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ಹೇಳಿದರು.
ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಪನಗೌಡ ಬಾದರ್ಲಿ, ವಕೀಲರ ಸಂಘದ ಅಧ್ಯಕ್ಷ ಕೆ.ಭೀಮನಗೌಡ, ನಗರ ಪೊಲೀಸ್ ಠಾಣೆ ಪಿ.ಐ. ವೀರಾರೆಡ್ಡಿ ಪಾಲ್ಗೊಂಡಿದ್ದರು.