ADVERTISEMENT

ರಾಯಚೂರು: ಕ್ವಾರಂಟೈನ್‌ ಕೇಂದ್ರಗಳಲ್ಲಿ ಅವ್ಯವಸ್ಥೆ

ಕ್ವಾರಂಟೈನ್‌ಗಾಗಿ ಪ್ರತಿ ಗ್ರಾಮ ಪಂಚಾಯಿತಿಯಡಿ ಒಂದು ಕಟ್ಟಡವಿದೆ

​ಪ್ರಜಾವಾಣಿ ವಾರ್ತೆ
Published 13 ಮೇ 2020, 15:52 IST
Last Updated 13 ಮೇ 2020, 15:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಯಚೂರು: ಜಿಲ್ಲೆಗೆ ಹೊರರಾಜ್ಯಗಳಿಂದ ಬಂದಿರುವವರನ್ನು ವಿವಿಧೆಡೆ ಸರ್ಕಾರಿ ಕಟ್ಟಡಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗಿದ್ದು, ಅಲ್ಲಿ ಸಮರ್ಪಕ ಮೂಲ ಸೌಕರ್ಯ ಮತ್ತು ಊಟ ದೊರೆಯದೆ ಅವ್ಯವಸ್ಥೆ ಕೇಂದ್ರಗಳಾಗಿ ಮಾರ್ಪಡುತ್ತಿವೆ.

‘ರಾಯಚೂರಿನ ಬೊಳಮಾನದೊಡ್ಡಿ ರಸ್ತೆಯ ಸರ್ಕಾರಿ ಹಾಸ್ಟೆಲ್‌ವೊಂದರಲ್ಲಿ ಕೆಲವರನ್ನು ಕ್ವಾರಂಟೈನ್‌ ಇರಿಸಲಾಗಿದ್ದು, ಕಟ್ಟಡದಲ್ಲಿ ವ್ಯವಸ್ಥೆಗಳಿಲ್ಲದೆ ಅನೇಕ ಜನರು ಬಯಲಿನಲ್ಲಿ ಬಹಿರ್ದೆಸೆ ಹೋಗುತ್ತಿದ್ದಾರೆ. ವಿವಿಧ ವಸ್ತುಗಳ ಖರೀದಿಗಾಗಿ ಕಟ್ಟಡದಿಂದ ಹೊರಗಡೆ ತಿರುಗಾಡುವುದು ಸಾಮಾನ್ಯವಾಗಿದೆ. ಇದರಿಂದ ಭೀತಿ ಆವರಿಸಿಕೊಂಡಿದೆ’ ಎಂದು ಕ್ವಾರಂಟೈನ್‌ ಕೇಂದ್ರವಿರುವ ಬಡಾವಣೆ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

‘ಕ್ವಾರಂಟೈನ್‌ ಕೇಂದ್ರದಲ್ಲಿ ಸರಿಯಾಗಿ ಊಟವಿಲ್ಲ. ಕುಡಿಯಲು ನೀರಿಲ್ಲ. ಮಕ್ಕಳನ್ನು ಸಮಾಧಾನ ಪಡಿಸಲು ಹೊರಬಂದಿದ್ದೇವೆ ಎಂದು ಕ್ವಾರಂಟೈನ್‌ನಿಂದ ಹೊರಬಂದವರು ಹೇಳುತ್ತಿದ್ದಾರೆ’ ಎಂದು ನೆರೆಹೊರೆಯ ಜನರು ತಿಳಿಸಿದರು.

ADVERTISEMENT

ಕಡಿಮೆ ಅನುದಾನ:ಕ್ವಾರಂಟೈನ್‌ ಕೇಂದ್ರಗಳಲ್ಲಿ ಉಳಿದುಕೊಂಡವರಿಗೆ ಪ್ರತಿದಿನ ತಲಾ ₹75 ಹಾಗೂ ಮಕ್ಕಳಿಗೆ ₹50 ಅನುದಾನ ವೆಚ್ಚ ಮಾಡುವುದಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ. ಅಲ್ಲಿ ಊಟ, ಉಪಹಾರ ತಯಾರಿಸುವ ಜವಾಬ್ದಾರಿ ವಹಿಸಿಕೊಂಡಿರುವ ಅಧಿಕಾರಿಗಳು ಕಡಿಮೆ ಅನುದಾನದಲ್ಲಿ ವ್ಯವಸ್ಥೆ ಕಲ್ಪಿಸಲಾಗದೆ ಕಣ್ಮರೆಯಾಗುತ್ತಿದ್ದಾರೆ.

ಕ್ವಾರಂಟೈನ್‌ ಕೇಂದ್ರಗಳಲ್ಲಿ ಅವ್ಯವಸ್ಥೆ ನೋಡಿಕೊಂಡು, ಕೆಲವರಿಗೆ ಸಂಬಂಧಿಗಳು ಮನೆಯಿಂದ ಊಟ ತಲುಪಿಸುತ್ತಿದ್ದಾರೆ. ಅನುಕೂಲವಿಲ್ಲದ ಜನರು ಮಾತ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ರಾಯಚೂರು ತಾಲ್ಲೂಕಿನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ 1,688, ಸಿಂಧನೂರು ತಾಲ್ಲೂಕಿನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ 238, ಮಾನ್ವಿ ತಾಲ್ಲೂಕಿನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ 750, ದೇವದುರ್ಗ ತಾಲ್ಲೂಕಿನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ 294 ಹಾಗೂ ಲಿಂಗಸೂಗೂರು ತಾಲ್ಲೂಕಿನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ 415 ಜನರು ಸೇರಿದಂತೆ ಒಟ್ಟು 3,385 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ಲ್ಲಿ ಇರಿಸಲಾಗಿದೆ.

139 ಸ್ಯಾಂಪಲ್‌ಗಳು ನೆಗೆಟಿವ್:ರಾಯಚೂರುಜಿಲ್ಲೆಯಿಂದ ಇದೂವರೆಗೆ 2,826 ಜನರ ರಕ್ತ ಹಾಗೂ ಗಂಟಲಿನ ದ್ರವ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಇದೂವರೆಗೆ ಜಿಲ್ಲೆಯಿಂದ ಕಳುಹಿಸಲಾದ ಸ್ಯಾಂಪಲ್‌ಗಳ ಫಲಿತಾಂಶದಲ್ಲಿ 2,431 ವರದಿಗಳು ನೆಗೆಟಿವ್ ಆಗಿದೆ. ಉಳಿದ 390 ಸ್ಯಾಂಪಲ್‌ಗಳ ಫಲಿತಾಂಶ ಬರಬೇಕಿದೆ.

ಆಸ್ಪತ್ರೆಗೆ ಬುಧವಾರ ಐವರನ್ನು ದಾಖಲಿಸಲಾಗಿದ್ದು, ಇಬ್ಬರನ್ನು ಡಿಸಚಾರ್ಜ್ ಮಾಡಲಾಗಿದೆ. ಜಿಲ್ಲೆಯಿಂದ ಇದೂವರೆಗೆ ಕಳುಹಿಸಲಾದ ವರದಿಗಳಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.