ADVERTISEMENT

ರಾಯಚೂರು ವಿಮಾನನಿಲ್ದಾಣ ಡಿಪಿಆರ್‌ಗೆ ಸಿದ್ಧತೆ

ಜನಪ್ರತಿನಿಧಿಗಳ, ಅಧಿಕಾರಿಗಳ ಒಮ್ಮತ ಪ್ರಯತ್ನಕ್ಕೆ ದೊರೆತ ಫಲ

ನಾಗರಾಜ ಚಿನಗುಂಡಿ
Published 29 ಏಪ್ರಿಲ್ 2021, 16:22 IST
Last Updated 29 ಏಪ್ರಿಲ್ 2021, 16:22 IST
ರಾಯಚೂರು ವಿಮಾನ ನಿಲ್ದಾಣ ನಿರ್ಮಾಣ ಉದ್ದೇಶಿತ ಸ್ಥಳವಾದ ಯರಮರಸ್‌ಗೆ ವಿಮಾನ ನಿಲ್ದಾಣ ಪ್ರಾಧಿಕಾರ ಅಧಿಕಾರಿಗಳ ತಂಡವು ಮಾರ್ಚ್‌ನಲ್ಲಿ ಭೇಟಿ ನೀಡಿ ಪರಿಶೀಲಿಸಿದ್ದು
ರಾಯಚೂರು ವಿಮಾನ ನಿಲ್ದಾಣ ನಿರ್ಮಾಣ ಉದ್ದೇಶಿತ ಸ್ಥಳವಾದ ಯರಮರಸ್‌ಗೆ ವಿಮಾನ ನಿಲ್ದಾಣ ಪ್ರಾಧಿಕಾರ ಅಧಿಕಾರಿಗಳ ತಂಡವು ಮಾರ್ಚ್‌ನಲ್ಲಿ ಭೇಟಿ ನೀಡಿ ಪರಿಶೀಲಿಸಿದ್ದು   

ರಾಯಚೂರು: ಹಲವು ದಶಕಗಳಿಂದ ಕನವರಿಸುತ್ತಿದ್ದ ರಾಯಚೂರು ವಿಮಾನ ನಿಲ್ದಾಣ ಸ್ಥಾಪನೆ ವಿಷಯ, ಇದೀಗ ಕೈಗೂಡುವ ಹಂತಕ್ಕೆ ತಲುಪಿದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ)ವು ತಾಂತ್ರಿಕವಾಗಿ ಒಪ್ಪಿಗೆ ಸೂಚಿಸಿದೆ.

ಎಎಐ ಉಪಪ್ರಧಾನ ವ್ಯವಸ್ಥಾಪಕ ಅನುರಾಗ ಮಿಶ್ರಾ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡವು ಮಾರ್ಚ್‌ ಆರಂಭದಲ್ಲಿ ರಾಯಚೂರಿಗೆ ಭೇಟಿನೀಡಿ ವಿಮಾನ ನಿಲ್ದಾಣದ ಮೀಸಲು ಸ್ಥಳ ಪರಿಶೀಲಿಸಿ, ಜಿಲ್ಲಾಡಳಿತದಿಂದ ಸಮಗ್ರ ಮಾಹಿತಿ ಪಡೆದು ಹೋಗಿತ್ತು. ಕೋವಿಡ್‌ ಕಾರಣದಿಂದ ಕಡತವು ನನೆಗುದಿಗೆ ಬೀಳುವ ಆತಂಕ ಎದುರಾಗಿತ್ತು. ಆದರೆ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಕುರಿತು ನಿರಂತರ ಸಂಪರ್ಕ ಸಾಧಿಸಿ ಕೊನೆಗೂ ಸಮ್ಮತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ರಾಯಚೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸುವುದು ತಾಂತ್ರಿಕವಾಗಿ ಸಾಧ್ಯತೆ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವಂತೆ ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್‌ಐಐಡಿಸಿ)ದ ಮೂಲಕ ಎಎಐಗೆ ಕೋರಲಾಗಿತ್ತು. ಇದೀಗ ಸಮ್ಮತಿ ಸಿಕ್ಕಿದ್ದು, ವಿಮಾನ ನಿಲ್ದಾಣ ನಿರ್ಮಿಸಲು ರಾಜ್ಯ ಸರ್ಕಾರವು ಮುಂದಿನ ಕ್ರಮ ಕೈಗೊಳ್ಳಬೇಕಿದೆ.

ADVERTISEMENT

ಏಪ್ರಿಲ್‌ ಆರಂಭದಲ್ಲಿಯೇ ಸರ್ಕಾರದ ಮಟ್ಟದಲ್ಲಿ ಹಿರಿಯ ಅಧಿಕಾರಿಗಳು ಈ ವಿಷಯ ಚರ್ಚಿಸಿ ಡಿಪಿಆರ್‌ ಸಿದ್ಧಪಡಿಸುವುದಕ್ಕೆ ನಿರ್ಧಾರ ಕೈಗೊಂಡಿದ್ದು, ಇದೀಗ ಕೆಎಸ್‌ಐಐಡಿಸಿ ಟೆಂಡರ್‌ ಪ್ರಕ್ರಿಯೆ ಆರಂಭಿಸಿದೆ. ಡಿಪಿಆರ್‌ ಸಿದ್ಧವಾದ ಬಳಿಕ ಬೇಕಾಗುವ ಮೊತ್ತದ ವಿವರ ಗೊತ್ತಾಗಲಿದೆ. ಸದ್ಯ ವಿಮಾನ ನಿಲ್ದಾಣಕ್ಕಾಗಿ ₹70.8 ಕೋಟಿ ಜಿಲ್ಲಾಡಳಿತದಲ್ಲಿ ಮೀಸಲಿಡಲಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯಿಂದ ಬರುವ ಅನುದಾನದಲ್ಲಿ ಶಾಸಕರಾದ ಶಿವನಗೌಡ ನಾಯಕ ₹25 ಕೋಟಿ, ಡಾ.ಶಿವರಾಜ ಪಾಟೀಲ ₹14 ಕೋಟಿ, ವೆಂಕಟರಾವ್‌ ನಾಡಗೌಡ ₹7 ಕೋಟಿ, ಮಸ್ಕಿ ಕ್ಷೇತ್ರದ ಅನುದಾನದಲ್ಲಿ ₹11 ಕೋಟಿ, ಜಿಲ್ಲಾ ಗಣಿ ನಿಧಿ (ಡಿಎಂಎಫ್‌) ₹10 ಕೋಟಿ ಹಾಗೂ ಕೆಎಸ್‌ಐಐಡಿಸಿಯಿಂದ ₹12.8 ಕೋಟಿ ತೆಗೆದಿರಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹಾಗೂ ರಾಯಚೂರು ವಾಣಿಜ್ಯೋದ್ಯಮಗಳ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಷಿ ಅವರು ಕೂಡಾ ವಿಮಾನ ನಿಲ್ದಾಣ ಸ್ಥಾಪನೆಯಲ್ಲಿ ಮುತೂರ್ಜಿ ವಹಿಸಿದ್ದಾರೆ.

ಡಿಪಿಆರ್‌ ಸಿದ್ಧವಾದ ಬಳಿಕ ರಾಜ್ಯ ಸಚಿವ ಸಂಪುಟದಿಂದ ಒಪ್ಪಿಗೆ ಪಡೆಯಬೇಕಾಗುತ್ತದೆ. ಆನಂತರ ಅಡಿಗಲ್ಲು ಸಮಾರಂಭಕ್ಕೆ ದಾರಿಯಾಗಲಿದೆ. ಒಟ್ಟು 402 ಎಕರೆ ಭೂಮಿ ನಿಲ್ದಾಣಕ್ಕೆ ಮೀಸಲಾಗಿದ್ದು, ಎಟಿಆರ್‌–72 ವಿಮಾನಗಳ ಸಂಚಾರ ಸಾಧ್ಯವಾಗಲಿದೆ. 1,800 ಮೀಟರ್‌ ಉದ್ದದ ರನ್‌ವೇ ಸಿದ್ಧಪಡಿಸಲು ಯೋಜಿಸಲಾಗುತ್ತಿದೆ.

ಐತಿಹಾಸಿಕ ಸ್ಥಳ: ರಾಯಚೂರಿನಿಂದ ಹೈದರಾಬಾದ್‌ ಮಾರ್ಗದಲ್ಲಿ 10 ಕಿಲೋ ಮೀಟರ್‌ ದೂರದ ವಿಮಾನ ನಿಲ್ದಾಣ ಮೀಸಲು ಪ್ರದೇಶಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. 1942 ರಲ್ಲಿ ಎರಡನೇ ಮಹಾಸಮರದ ಸಂದರ್ಭದಲ್ಲಿಯೇ ವಿಮಾನಗಳಿಗಾಗಿ ಈ ಜಾಗ ಪ್ರತ್ಯೇಕಿಸಿ ಗುರುತಿಲಾಗಿತ್ತು. 1957 ರ ಫೆಬ್ರುವರಿ ಪ್ರಧಾನಿಯಾಗಿದ್ದ ಜವಾಹರಲಾಲ್‌ ನೆಹರು ಅವರು ಚೆನ್ನೈ ಕಡೆಗೆ ಪ್ರಯಾಣಿಸುತ್ತಿದ್ದಾಗ ಅವರಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಪೈಲಟ್‌ ಆರ್‌.ಎ.ರುಫುಸ್‌ ಅವರು ಐಎಲ್‌–14 ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಲು ಇದೇ ಜಾಗ ಆಯ್ಕೆ ಮಾಡಿಕೊಂಡಿದ್ದರು. ನೆಹರು ಅವರು ಯರಮರಸ್‌ಗೆ ಆಕಸ್ಮಿಕವಾಗಿ ಭೇಟಿನೀಡಿದ ಚಿತ್ರಗಳು ಇಂದಿಗೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಆಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.