ADVERTISEMENT

ರಾಯಚೂರು ನಗರಸಭೆ: ₹2.37 ಲಕ್ಷ ಉಳಿತಾಯ ಬಜೆಟ್‌

2022–23ನೇ ಸಾಲಿನಲ್ಲಿ ಒಟ್ಟು ₹93.02 ಕೋಟಿ ಆದಾಯ ಸ್ವೀಕೃತಿ ಅಂದಾಜು

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 16:06 IST
Last Updated 11 ಏಪ್ರಿಲ್ 2022, 16:06 IST
ರಾಯಚೂರಿನ ಸಾರ್ವಜನಿಕ ಉದ್ಯಾನದಲ್ಲಿ ಸೋಮವಾರ ಆಯೋಜಿಸಿದ್ದ ನಗರಸಭೆ ಸರ್ವಸದಸ್ಯರ ಸಭೆಯಲ್ಲಿ ನೂತನ ಅಧ್ಯಕ್ಷೆ ಲಲಿತಾ ಆಂಜೀನೇಯ್ಯ ಕಡಗೋಲ ಅವರ ಅಧ್ಯಕ್ಷತೆಯಲ್ಲಿ ಬಜೆಟ್‌ ಮಂಡನೆ ಮಾಡಲಾಯಿತು
ರಾಯಚೂರಿನ ಸಾರ್ವಜನಿಕ ಉದ್ಯಾನದಲ್ಲಿ ಸೋಮವಾರ ಆಯೋಜಿಸಿದ್ದ ನಗರಸಭೆ ಸರ್ವಸದಸ್ಯರ ಸಭೆಯಲ್ಲಿ ನೂತನ ಅಧ್ಯಕ್ಷೆ ಲಲಿತಾ ಆಂಜೀನೇಯ್ಯ ಕಡಗೋಲ ಅವರ ಅಧ್ಯಕ್ಷತೆಯಲ್ಲಿ ಬಜೆಟ್‌ ಮಂಡನೆ ಮಾಡಲಾಯಿತು   

ರಾಯಚೂರು: 2022–23 ನೂತನ ಹಣಕಾಸು ವರ್ಷಕ್ಕೆ ರಾಯಚೂರು ನಗರಸಭೆಯಿಂದ ಸೋಮವಾರ ಅಂದಾಜು ಬಜೆಟ್‌ ಮಂಡಿಸಲಾಯಿತು.

ನೂತನ ಅಧ್ಯಕ್ಷೆ ಲಲಿತಾ ಅಂಜಿನೇಯ್ಯ ಕಡಗೋಲ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಉದ್ಯಾನದಲ್ಲಿ ಆಯೋಜಿಸಿದ್ದ ಬಜೆಟ್‌ ಸಭೆಯಲ್ಲಿ ಲೆಕ್ಕ ಮೇಲ್ವಿಚಾರಕ ದೇವೇಂದ್ರಪ್ಪ ಅವರು ಬಜೆಟ್‌ ವಿವರ ನೀಡಿದರು.

2022–23ನೇ ಹಣಕಾಸು ವರ್ಷದಲ್ಲಿ ವಿವಿಧ ಮೂಲಗಳಿಂದ ಒಟ್ಟು ₹93.02 ಕೋಟಿ ಆದಾಯ ಸಂಗ್ರಹ ಮತ್ತು ₹93 ಕೋಟಿ ವಿವಿಧ ವೆಚ್ಚವಾಗುವ ಅಂದಾಜು ಮಾಡಲಾಗಿದೆ. ಒಟ್ಟು ₹2.37 ಉಳಿತಾಯದ ಬಜೆಟ್‌ ಇದಾಗಿದೆ. 2021–22ನೇ ಸಾಲಿನಲ್ಲಿ ಅಂದಾಜು ಮಾಡಿದ್ದ ಆದಾಯ ಒಟ್ಟು ₹93.78 ಕೋಟಿ ಪೈಕಿ ಡಿಸೆಂಬರ್‌ ಅಂತ್ಯಕ್ಕೆ ₹62 ಕೋಟಿ ಸಂಗ್ರಹವಾಗಿದ್ದು, ಮಾರ್ಚ್‌ ಅಂತ್ಯದವರೆಗೂ ₹111 ಕೋಟಿಗೆ ತಲುಪುವ ಅಂದಾಜಿದೆ.

ADVERTISEMENT

2022–23ನೇ ಸಾಲಿನಲ್ಲಿ ಎಸ್‌ಎಫ್‌ಸಿ, ಬಾಡಿಗೆ, ವಸೂಲಾತಿಯಿಂದ ಒಟ್ಟು ₹59.25 ಕೋಟಿ, ನೀರು, ರಸ್ತೆ ಹಾಗೂ ಸಮಾಜ ಕಲ್ಯಾಣಕ್ಕಾಗಿ ₹16.94 ಕೋಟಿ ಅನುದಾನ ಮತ್ತು ಎಎಂಡಿ, ಬ್ಯಾಂಕ್‌ ಠೇವಣಿ, ಹಣಕಾಸು ಯೋಜನೆಗಳಿಂದ ಒಟ್ಟು ₹₹16.83 ಕೋಟಿ ಬರಲಿದೆ ಎಂದು ಅಂದಾಜಿಸಲಾಗಿದೆ.

ನೂತನ ಬಜೆಟ್‌ಗೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು. ಕೆಲವರು ಬಜೆಟ್‌ ಅಂಶಗಳನ್ನು ಪ್ರಸ್ತಾಪಿಸಿ ಪರಿಷ್ಕರಣೆ ಮಾಡುವಂತೆ ಸಲಹೆಗಳನ್ನು ನೀಡಿದರು. ಪೌರಾಯುಕ್ತ ಕೆ.ಮುನಿಸ್ವಾಮಿ ಅವರು ಮಾತನಾಡಿ, ಸದಸ್ಯರ ಸಲಹೆಗಳನ್ನು ಆಧರಿಸಿ ಕೆಲವೊಂದು ಅಂಶಗಳನ್ನು ಪರಿಷ್ಕರಣೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ನಿಕಟಪೂರ್ವ ಅಧ್ಯಕ್ಷ ಈ.ವಿನಯಕುಮಾರ್‌ ಮಾತನಾಡಿ, ಪತ್ರಕರ್ತರ ಸಂಘದಿಂದ ಆರೋಗ್ಯ ವೆಚ್ಚಕ್ಕಾಗಿ ₹25 ಲಕ್ಷ ಅನುದಾನ ಮೀಸಲಿಡುವಂತೆ ಕೋರಿಕೆ ಸಲ್ಲಿಸಿರುವುದನ್ನು ಮಾನ್ಯ ಮಾಡಬೇಕು. ಅಲ್ಲದೆ, ವಿದ್ಯುತ್‌ ಕಂಬಗಳ ಸ್ಥಳಾಂತರಕ್ಕಾಗಿ ₹5 ಲಕ್ಷ ಮೀಸಲಿಟ್ಟ ಅನುದಾನ ಸಾಕಾಗುವುದಿಲ್ಲ. ರಸ್ತೆ ವಿಭಜಕಗಳಲ್ಲಿ ಹಾಕಿರುವ ಸಸಿಗಳನ್ನು ಉಳಿಸಿಕೊಳ್ಳಲು ನೀರಿನ ವ್ಯವಸ್ಥೆಗಾಗಿ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ತೆಗೆದಿರಿಸಬೇಕು ಎಂದರು.

ನಗರಸಭೆ ಸದಸ್ಯ ಜಯಣ್ಣ ಮಾತನಾಡಿ, ಇದುವರೆಗೂ ಆಡಳಿತ ನಡೆಸಿದವರು ಬೇರೆ ಹಾಗೂ ಈಗ ಬಜೆಟ್‌ ಮಂಡಿಸಿದ್ದ ಬೇರೆಯವರಿದ್ದಾರೆ. ಹೀಗಾಗಿ ಅಭಿವೃದ್ಧಿ ವಿಷಯ ಪ್ರಸ್ತಾಪಿಸುವುದಕ್ಕೆ ಗೊಂದಲವನ್ನುಂಟು ಮಾಡಿದೆ. ಅವಸರದಲ್ಲಿ ಸಿದ್ಧಪಡಿಸಿರುವ ಬಜೆಟ್‌ ಇದಾಗಿದೆ. ಅಂಕಿಅಂಶಗಳನ್ನು ಜೋಡಿಸಿ ಕೊಡಲಾಗಿದೆ ವಿನಾ ನಗರದ ಜ್ವಲಂತ ಸಮಸ್ಯೆಗಳನ್ನು ಪರಿಗಣಿಸಿಲ್ಲ ಎಂದರು.

ನಗರಸಭೆ ಲೆಕ್ಕ ಸಿಬ್ಬಂದಿ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ನಿರೀಕ್ಷೆಗೆ ತಕ್ಕಂತೆ ಶುಲ್ಕಗಳನ್ನು ವಸೂಲಿ ಮಾಡುತ್ತಿಲ್ಲ. ಈ ಕಾರಣದಿಂದ ನಗರಸಭೆಯಿಂದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಆಸ್ತಿ ತೆರಿಗೆಯನ್ನು ಜನರೇ ಬಂದು ಕಟ್ಟುತ್ತಾರೆ ಎನ್ನುವ ಕಾರಣಕ್ಕಾಗಿ ಸಿಬ್ಬಂದಿಯು ಬಾಕಿ ವಸೂಲಿಗೆ ಕ್ರಮ ವಹಿಸುತ್ತಿಲ್ಲ. ಜನರ ಆಶಯಕ್ಕೆ‌ ತಕ್ಕಂತೆ ಕೆಲಸ ಮಾಡಬೇಕು. ಎಸ್ ಸಿ, ಎಸ್ ಟಿ, ಓಬಿಸಿ, ಅಲ್ಪಸಂಖ್ಯಾತರು ಹಾಗೂ ಕೊಳಗೇರಿ ಜನರಿಗಾಗಿ ಬಜೆಟ್‌ನಲ್ಲಿ ಯಾವುದೇ ಯೋಜನೆಗಳನ್ನು ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಉಪಾಧ್ಯಕ್ಷೆ ನರಸಮ್ಮ ಮಾಡಗಿರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.