ADVERTISEMENT

ರಾಯಚೂರು ನಗರಸಭೆ: ಈ ಸಲ ಉಳಿತಾಯದ ಬಜೆಟ್‌

2021–22ನೇ ಸಾಲಿನ ಬಜೆಟ್‌ ಮಂಡಿಸಿದ ಇ.ವಿನಯಕುಮಾರ್‌

​ಪ್ರಜಾವಾಣಿ ವಾರ್ತೆ
Published 2 ಜೂನ್ 2021, 15:05 IST
Last Updated 2 ಜೂನ್ 2021, 15:05 IST
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ರಾಯಚೂರು ನಗರಸಭೆ ಬಜೆಟ್‌ ಮಂಡಿಸುವುದಕ್ಕಾಗಿ ಅಧ್ಯಕ್ಷ ಇ.ವಿನಯಕುಮಾರ್‌, ಉಪಾಧ್ಯಕ್ಷೆ ನರಸಮ್ಮ ಬಜೆಟ್‌ ಪುಸ್ತಕದೊಂದಿಗೆ ಆಗಮಿಸಿದ್ದು ಹೀಗೆ..
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ರಾಯಚೂರು ನಗರಸಭೆ ಬಜೆಟ್‌ ಮಂಡಿಸುವುದಕ್ಕಾಗಿ ಅಧ್ಯಕ್ಷ ಇ.ವಿನಯಕುಮಾರ್‌, ಉಪಾಧ್ಯಕ್ಷೆ ನರಸಮ್ಮ ಬಜೆಟ್‌ ಪುಸ್ತಕದೊಂದಿಗೆ ಆಗಮಿಸಿದ್ದು ಹೀಗೆ..   

ರಾಯಚೂರು: ನಗರಸಭೆ ಅಧ್ಯಕ್ಷ ಇ.ವಿನಯಕುಮಾರ್‌ ಅವರು 2021–22ನೇ ಸಾಲಿನ ಬಜೆಟ್‌ ಅನ್ನು ಬುಧವಾರ ಮಂಡಿಸಿದ್ದು, ₹27.91 ಲಕ್ಷ ಬಜೆಟ್‌ ಉಳಿತಾಯ ಮಾಡುವುದಕ್ಕೆ ಯೋಜನೆ ಮಾಡಿರುವುದು ವಿಶೇಷ.

ಕೋವಿಡ್‌ ಕಾರಣದಿಂದಾಗಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬಜೆಟ್‌ ಮಂಡನೆಗೆ ವ್ಯವಸ್ಥೆ ಮಾಡಲಾಗಿತ್ತು.
2021–22ನೇ ಸಾಲಿನಲ್ಲಿ ₹59.76 ಕೋಟಿ ಆದಾಯ ಸಂಗ್ರಹವಾದರೆ ಹಾಗೂ ₹57.13 ಕೋಟಿ ವೆಚ್ಚವಾಗಲಿದೆ. ನಗರಸಭೆಯ ವಾಣಿಜ್ಯ ಸಂಕೀರ್ಣಗಳಿಂದ ಬಾಡಿಗೆ ಒಟ್ಟು ₹25 ಲಕ್ಷ ಸಂಗ್ರಹವಾದರೆ, ಕಟ್ಟಡ ಪರವಾನಿಗೆ ಶುಲ್ಕವು ₹20 ಕೋಟಿ ಸಂಗ್ರಹವಾಗಲಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷದ ಬಜೆಟ್‌ನಲ್ಲಿ ₹22.50 ಕೋಟಿ ಸಂಗ್ರಹದ ಅಂದಾಜು ಮಾಡಲಾಗಿತ್ತು. ಆದರೆ ವಾಸ್ತವದಲ್ಲಿ ₹15.62 ಕೋಟಿ ಸಂಗ್ರಹವಾಗಿತ್ತು.

ಕಟ್ಟಡ ಅಭಿವೃದ್ಧಿ ಶುಲ್ಕ₹15 ಕೋಟಿ ಹಾಗೂ ಕೊಳಚೆ ಪ್ರದೇಶ ಅಭಿವೃದ್ಧಿ ಕರದ ಮೇಲಿನ ವಸೂಲಾತಿ ₹25 ಲಕ್ಷ ಎಂದು ಅಂದಾಜಿಸಲಾಗಿದೆ. ಉದ್ದಿಮೆಗಳ ಪರವಾನಿಗೆ ಶುಲ್ಕ ₹38 ಲಕ್ಷ, ಎಸ್ಎಫ್‌ಸಿ ಅನುದಾನ ₹1.15 ಕೋಟಿ, ಪ್ರಮಾಣಪತ್ರಗಳ ವಿತರಣೆಯಿಂದ ₹75 ಸಾವಿರ, ತ್ಯಾಜ್ಯ ನಿರ್ವಹಣೆ ಶುಲ್ಕ ₹7 ಲಕ್ಷ, ಕಸಾಯಿಖಾನೆಗಳಿಂದ ₹1.5 ಲಕ್ಷ, ಮಾರುಕಟ್ಟೆ ಬಾಡಿಗೆ ₹16 ಲಕ್ಷ, ನೀರಿನ ಶುಲ್ಕ ₹5 ಕೋಟಿ ಸಂಗ್ರಹವಾಗುವ ಅಂದಾಜು ಮಾಡಲಾಗಿದೆ ಹಾಗೂ ವಿವಿಧ ಪ್ರಕಾರದ ದಂಡದ ಮೂಲಗಳಿಂದ ₹37 ಲಕ್ಷ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

ADVERTISEMENT

ಬ್ಯಾಂಕುಗಳಿಂದ ಬಡ್ಡಿ ₹55 ಲಕ್ಷ, ಆಸ್ತಿ ತೆರಿಗೆಯು ₹11.08 ಕೋಟಿ, ಖಾತಾ ಬದಲಾವಣೆಯಿಂದ ₹2.25 ಕೋಟಿ, ಬಡಾವಣೆಗಳ ಆಡಳಿತಾತ್ಮಕ ಅನುಮೋದನೆ ಶುಲ್ಕ ₹25 ಲಕ್ಷ ಹಾಗೂ ಜಾಹೀರಾತುಗಳಿಂದ ₹2.50 ಲಕ್ಷ ಆದಾಯ ಬರಲಿದೆ ಎಂದು ಉಲ್ಲೇಖಿಸಲಾಗಿದೆ.

ವೆಚ್ಚಗಳು: ವೇತನ ಭತ್ಯೆಗಳಿಗಾಗಿ ₹4.93 ಕೋಟಿ, ದಿನಗೂಲಿ ನೌಕರರಿಗೆ ₹8.60 ಕೋಟಿ, ಶವಸಂಸ್ಕಾರಕ್ಕೆ ₹10 ಲಕ್ಷ, ಲೇಖನ ಸಾಮಗ್ರಿಗಳಿಗೆ ₹10 ಲಕ್ಷ, ಪ್ರಯಾಣ ವೆಚ್ಚ ₹5 ಲಕ್ಷ, ಜಾಹೀರಾತು ಪ್ರಸರಣಕ್ಕೆ ₹15 ಲಕ್ಷ, ಕಚೇರಿ ವೆಚ್ಚಗಳು ₹35 ಲಕ್ಷ, ಕಟ್ಟಡಗಳ ನಿರ್ವಹಣೆ ₹1.15 ಕೋಟಿ, ಉದ್ಯಾನವನಗಳ ದುರಸ್ತಿ, ನಿರ್ವಹಣೆಗೆ ₹10 ಲಕ್ಷ, ಸಾರ್ವಜನಿಕ ಶೌಚಾಲಯ ನಿರ್ವಹಣೆ ಮತ್ತು ದುರಸ್ತಿಗೆ ₹10 ಲಕ್ಷ, ಕಂಪ್ಯೂಟರ್‌ ಹೊರಗುತ್ತಿಗೆ ಸಿಬ್ಬಂದಿಗೆ ₹42 ಲಕ್ಷ, ಬ್ಯಾಂಕ್‌ ಶುಲ್ಕ ₹2 ಲಕ್ಷ, ಲೆಕ್ಕಪತ್ರ ಶುಲ್ಕ ₹30 ಲಕ್ಷ, ಸದಸ್ಯರಿಗೆ ಸಭಾ ಭತ್ಯ ₹25 ಲಕ್ಷ, ರಸ್ತೆ ಮತ್ತು ಪಾದಚಾರಿ ಮಾರ್ಗ ದುರಸ್ತಿಗೆ ₹75 ಲಕ್ಷ, ಚರಂಡಿ, ಒಳಚರಂಡಿ ದುರಸ್ತಿ ₹1.15 ಕೋಟಿ, ಔಷಧ ಖರೀದಿ ₹15 ಲಕ್ಷ, ವಿವಿಧ ಕಾರ್ಯಕ್ರಮಗಳ ವೆಚ್ಚ ₹5 ಲಕ್ಷ, ಘನತ್ಯಾಜ್ಯ ನಿರ್ವಹಣೆಗೆ ₹95 ಲಕ್ಷ, ವಾಹನಗಳ ದುರಸ್ತಿಗೆ ₹15 ಲಕ್ಷ, ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ₹1 ಕೋಟಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಂಗವಿಕಲರ ಕಲ್ಯಾಣಕ್ಕಾಗಿ ₹19 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ನಗರಸಭೆ ಉಪಾಧ್ಯಕ್ಷೆ ನರಸಮ್ಮ ಮಾಡಗಿರಿ, ಪೌರಾಯುಕ್ತ ವೆಂಕಟೇಶಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.