ADVERTISEMENT

ರಾಯಚೂರು ಉತ್ಸವ | ಖಾದ್ಯಗಳ ರಸದೌತಣ: ಬಾಯಿ ಚಪ್ಪರಿಸುವಂತೆ ಮಾಡಿದ ಭೋಜನ

ರಾಯಚೂರು ಉತ್ಸವದಲ್ಲಿ ಆಹಾರ ಮೇಳ: 12 ತಾಸಿನಲ್ಲಿ ₹5.52 ಲಕ್ಷ ವ್ಯವಹಾರ

ಚಂದ್ರಕಾಂತ ಮಸಾನಿ
Published 7 ಫೆಬ್ರುವರಿ 2026, 4:01 IST
Last Updated 7 ಫೆಬ್ರುವರಿ 2026, 4:01 IST
ರಾಯಚೂರಿನಲ್ಲಿ ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಆಯೋಜಿಸಿರುವ ಆಹಾರ ಮೇಳದಲ್ಲಿ ಹಣ್ಣಿನ ಸಲಾಡ್ ಖರೀದಿಸಿದ ಮಹಿಳೆಯರು/ ಚಿತ್ರ: ಶ್ರೀನಿವಾಸ ಇನಾಂದಾರ್
ರಾಯಚೂರಿನಲ್ಲಿ ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಆಯೋಜಿಸಿರುವ ಆಹಾರ ಮೇಳದಲ್ಲಿ ಹಣ್ಣಿನ ಸಲಾಡ್ ಖರೀದಿಸಿದ ಮಹಿಳೆಯರು/ ಚಿತ್ರ: ಶ್ರೀನಿವಾಸ ಇನಾಂದಾರ್   

ರಾಯಚೂರು: ಆಹಾರ ಮೇಳದ ಶಾಮಿಯಾನದೊಳಗೆ ಪ್ರವೇಶಿಸುತ್ತಲೇ ವಿಶಿಷ್ಟ ತಿಂಡಿ ತಿನಿಸುಗಳು ಘಮ ಘಮಿಸಿದವು. ವಿವಿಧ ಜಿಲ್ಲೆಗಳ ಬಾಣಸಿಗರು ಸಿದ್ಧಪಡಿಸುತ್ತಿದ್ದ ಖಾದ್ಯದ ಅದ್ಭುತ ಪರಿಮಳ ಗ್ರಾಹಕರನ್ನು ಮಳಿಗೆಗೆ ಎಳೆದು ತರುತ್ತಿತ್ತು.

ಬಾಳೆಕಾಯಿ ಬಜಿ, ಡೊಣಮೆಣಸಿನಕಾಯಿ ಬಜಿ, ಈರುಳ್ಳಿ ಬಜಿ, ಮಿರ್ಚಿ ಅದೆಷ್ಟು ರುಚಿ!. ಆಲೂಗಡ್ಡೆಯ ಸಿಪ್ಪೆ ಬಿಚ್ಚಿ ಚಕ್ರಾಕಾರದಲ್ಲಿ ಕೆತ್ತಿ, ಕಡ್ಡಿ ಚುಚ್ಚಿ ಎಣ್ಣೆಯೊಳಗೆ ಕರೆದು ಅದಕ್ಕೆ ಮಸಾಲೆ ಸವರಿ ಕೊಡುತ್ತಿರುವುದನ್ನು ನೋಡುವುದೇ ಒಂದು ಸಂಭ್ರಮವಾಯಿತು. ಕೆರೆ ಮೀನು, ಹೊಳೆ ಮೀನು ತಿಂದು ರೂಢಿ ಇದ್ದವರು ಸಮುದ್ರದ ಮೀನುಗಳ ಫ್ರೈ ಸವಿದು, ನಾಲಿಗೆ ಚೆಪ್ಪರಿಸಿಕೊಳ್ಳುತ್ತ, ಬಾಣಸಿಗರನ್ನು ಹೊಗಳುತ್ತ ಊರಿನತ್ತ ಹೆಜ್ಜೆ ಹಾಕಿದರು.

ಹೌದು ಇದೆಲ್ಲ ಕಂಂಡು ಬಂದಿದ್ದು ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ಆಹಾರ ಮೇಳದಲ್ಲಿ. ಇಲ್ಲಿ ಒಟ್ಟು 100 ಮಳಿಗೆಗಳನ್ನು ತೆರೆದಿದ್ದರೂ ಅದರಲ್ಲಿ 85 ಮಳಿಗೆಗಳಲ್ಲಿ ವ್ಯಾಪಾರ ಚೆನ್ನಾಗಿ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿತು. ಆಂಧ್ರಪ್ರದೇಶ, ತೆಲಂಗಾಣದ ತಲಾ ಎರಡು ಮಳಿಗೆಗಳು, ಮೈಸೂರು, ಮಂಗಳೂರು, ಉಡುಪಿ, ದಕ್ಷಿಣ ಕನ್ನಡದ ಬಾಣಸಿಗರು ರಾಯಚೂರಿಗೆ ಬಂದು ರುಚ್ಚಿಕಟ್ಟಾದ ಖಾದ್ಯಗಳನ್ನು ಬಿಸಿಲೂರಿನ ಜನರಿಗೆ ಪರಿಚಯಿಸಿದರು.

ADVERTISEMENT

ಅಡುಗೆ ತಯಾರಿಸುವ ಸ್ಥಳದಲ್ಲಿ ಶುಚಿತ್ವಕ್ಕೆ ಒತ್ತುಕೊಟ್ಟು ಎಲ್ಲ ಬಾಣಸಿಗರು ಹಾಗೂ ಮಾರಾಟಗಾರರಿಗೆ ಮಾಸ್ಕ್‌, ಹ್ಯಾಂಡ್‌ಗ್ಲೋಸ್‌ ಹಾಗೂ ಅಡಿಗೆ ಅನಿಲ ಸಹ ಉಚಿತವಾಗಿ ಕೊಡಲಾಗಿದೆ. ಅಷ್ಟೇ ಅಲ್ಲ; ಗ್ರಾಹಕರಿಗೆ ಅತ್ಯಂತ ಕಡಿಮೆ ದರದಲ್ಲಿ ಖಾದ್ಯ ಮಾರಾಟ ಮಾಡುವಂತೆ ಸೂಚಿಸಲಾಗಿದೆ. ಹೀಗಾಗಿ ಗ್ರಾಹಕರು ಕೈಗೆಟುಕುವ ಬೆಲೆಯಲ್ಲಿ ವಿಶಿಷ್ಟ ಬಗೆಯ ಖಾದ್ಯಗಳನ್ನು ಸೇವಿಸಿ ಸಂಭ್ರಮಿಸಿದರು.

ದೇವದುರ್ಗ ತಾಲ್ಲೂಕಿನ ಗಲಗ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಆಹಾರ ಮೇಳದಲ್ಲಿ ಪಾಲ್ಗೊಂಡು ವಿವಿಧ ಬಗೆಯ ಚಾಟ್‌ಗಳನ್ನು ಸೇವಿಸಿ ತಮ್ಮನ್ನು ಮೇಳಕ್ಕೆ ಕರೆತಂದ ಶಿಕ್ಷಕರಿಗೆ ಧನ್ಯವಾದ ಹೇಳಿದರು. ರಾಯಚೂರು ತಾಲ್ಲೂಕಿನ ಯರಗೇರಾದ ವಸತಿ ನಿಲಯದ ವಿದ್ಯಾರ್ಥಿನಿಯರು ಸಹ ಆಹಾರ ಮೇಳದಲ್ಲಿ ಹೊಸ ಖಾದ್ಯಗಳನ್ನು ಸೇವಿಸಿ ಸಂತಸ ಹಂಚಿಕೊಂಡರು.

‘ಜಿಲ್ಲಾಡಳಿತವು ಆಹಾರ ಮೇಳದಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದೆ. ಜಿಲ್ಲೆಯ ಜನ ಆಹಾರ ಮೇಳದಲ್ಲಿ ವಿವಿಧ ಬಗೆಯ ಭಕ್ಷ ಸೇವಿಸಿದ್ದಾರೆ. ಹೊಸ ರುಚಿ ನೋಡಿದ್ದಾರೆ. ಜಿಲ್ಲೆಯ ಜನರಿಗೆ ಇಂತಹ ಅವಕಾಶ ಮಾಡಿಕೊಟ್ಟಿರುವುದು ಸಂತಸ ತಂದಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಸಫಿವುಲ್ಲಾ ಪ್ರತಿಕ್ರಿಯಿಸಿದರು.

ಜಿಲೇಬಿ ವ್ಯವಹಾರ ₹ 15 ಸಾವಿರ

ಲಿಂಗಸುಗೂರು ತಾಲ್ಲೂಕಿನ ಚಿಕ್ಕಕುಪ್ಪೇರಿಯ ದೇವಮ್ಮ ಅವರು ತಮ್ಮ ತಂಡದೊಂದಿಗೆ ಆಹಾರ ಮೇಳಕ್ಕೆ ಬಂದು ಸಜ್ಜೆ ಹಾಗೂ ಬೆಲ್ಲದ ಜಿಲೇಬಿ ಸಿದ್ಧಪಡಿಸಿ ಪ್ರತಿ ಕೆಜಿಗೆ ₹ 300 ರಂತೆ ಮಾರಾಟ ಮಾಡಿದರು. ಮೊದಲ ದಿನವೇ ₹ 15 ಸಾವಿರ ವ್ಯವಹಾರ ನಡೆಸಿದರು. ‘22 ಕೆ.ಜಿ ಬೆಲ್ಲ 16 ಕೆ.ಜಿ ಬೆಲ್ಲ ಬಳಸಿ ಜಿಲೇಬಿ ಮಾಡಿದ್ದೇವೆ. ಒಂದು ಕೆಜಿ ಬೆಲ್ಲ ಹಾಗೂ ಸಜ್ಜೆ ಬಳಸಿದರೆ ಮೂರು ಕೆಜಿ ಜಿಲೇಬಿ ಸಿದ್ಧವಾಗುತ್ತದೆ. ಸಾವಯವ ಬೆಲ್ಲ ಬಳಸಿದ ಕಾರಣ ಗ್ರಾಹಕರು ಆಸಕ್ತಿಯಿಂದ ಖರೀದಿಸಿ ಕೊಂಡೊಯ್ಯುತ್ತಿದ್ದಾರೆ. ಮೊದಲ ದಿನ ಮೂರು ಪಟ್ಟು ಆದಾಯ ಬಂದಿದೆ’ ಎಂದು ದೇವಮ್ಮ ಸಂತಸ ಹಂಚಿಕೊಂಡರು.

ಬಿರಿಯಾನಿಗೆ ಸರತಿ ಸಾಲು

ಸಮುದ್ರ ಮೀನು ಹಾಗೂ ಚಿಕನ್ ಖಾದ್ಯ ಸೇವಿಸಲು ಹೆಚ್ಚು ಜನ ಮುಗಿಬಿದ್ದಿದ್ದರು. ಸಂಜೆ ವೇಳೆಯಲ್ಲಿ ಬಿರಿಯಾನಿ ಖರೀದಿಸಲು ಸರತಿ ಸಾಲಿನಲ್ಲಿ ನಿಲ್ಲುವಂತಾಯಿತು. ಬಾಣಸಿಗರು ಸಹ ಒಂದೇ ದಿನದಲ್ಲಿ ₹ 70 ಸಾವಿರ ವ್ಯವಹಾರ ನಡೆಸಿದ ಸಂಭ್ರಮದಲ್ಲಿದ್ದರು. ‘ನಿತ್ಯ ನಮ್ಮ ಸ್ವಂತ ಮಳಿಗೆಯಲ್ಲಿ ₹4 ಸಾವಿರದಿಂದ ₹ 5 ಸಾವಿರದವರೆಗೆ ವ್ಯವಹಾರವಾಗುತ್ತದೆ.

ಗುರುವಾರ ಒಂದೇ ದಿನದಲ್ಲಿ ₹ 15 ಸಾವಿರ ವ್ಯಾಪಾರ ಆಗಿದೆ. ನಮ್ಮ ಭಾಗ್ಯಕ್ಕೆ ಲಕ್ಷ್ಮಿ ಹರಿದು ಬಂದಿದ್ದಾಳೆ’ ಎಂದು ಭವಾನಿ ಬಿರಿಯಾನಿಯ ಮಾಲೀಕರಾದ ಭಾಗ್ಯಲಕ್ಷಿ ಖುಷಿಯಿಂದ ಹೇಳಿದರು. ಗದಗಿನ ಸ್ವ–ಸಹಾಯ ಸಂಘದ ವೀಣಾ ರಾಠೋಡ ಅವರು ನಾಲ್ವರು ಮಹಿಳಾ ತಂಡದೊಂದಿಗೆ ಆಹಾರ ಮೇಳಕ್ಕೆ ಬಂದು ಆಲು ಟ್ವಿಟರ್‌ ಸಿದ್ಧಪಡಿಸಿ ಭರ್ಜರಿ ವ್ಯಾಪಾರ ನಡೆಸಿದರು. ‘ಮೊದಲ 12 ತಾಸಿನಲ್ಲಿ ಒಟ್ಟು ₹552300 ವ್ಯವಹಾರವಾಗಿದೆ. ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕಿದೆ. ಬಹುತೇಕ ಮಳಿಗೆದಾರರು ಉತ್ತಮ ಲಾಭ ಗಳಿಸಿದ್ದಾರೆ. ಮಕ್ಕಳು ಹಾಗೂ ಯುವ ಸಮೂಹ ಹೆಚ್ಚು ಉತ್ಸಾಹದಿಂದ ಪಾಲ್ಗೊಂಡಿದ್ದರು’ ಎಂದು ಕೌಶಲ್ಯಾಭಿವೃದ್ಧಿ ಇಲಾಖೆಯ ಜಿಲ್ಲಾ ಅಭಿಯಾನ ವ್ಯವಸ್ಥಾಪಕ ವಿಭೂಮತಿಮಠ ತಿಳಿಸಿದರು.

ಆಹಾರ ಮೇಳದಲ್ಲಿ ಪಾಲ್ಗೊಂಡು ಸಂಭ್ರಮಿಸಿದ ದೇವದುರ್ಗ ತಾಲ್ಲೂಕಿನ ಗಲಗ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು
ರಾಯಚೂರಿನ ಆಹಾರ ಮೇಳದಲ್ಲಿ ಲಿಂಗಸುಗೂರು ತಾಲ್ಲೂಕಿನ ಚಿಕ್ಕಕುಪ್ಪೇರಿಯ ಮಹಿಳೆಯೊಬ್ಬರು ಸ್ಥಳದಲ್ಲೇ ಬೆಲ್ಲದ ಜಿಲೇಬಿ ಸಿದ್ಧಪಡಿಸಿದರು
ಆಹಾರ ಮೇಳದಲ್ಲಿ ಬಾಣಸಿಗರೊಬ್ಬರು ಆಲೂ ಟ್ವಿಸ್ಟರ್‌ ಎಣ್ಣೆಯಲ್ಲಿ ಕರೆದರು
ಆಹಾರ ಮೇಳದಲ್ಲಿ ಬಿರಿಯಾನಿ ಗ್ರೇವಿ ಸಿದ್ಧಪಡಿಸಿದ ಬಾಣಸಿಗರು
ಆಹಾರ ಮೇಳದಲ್ಲಿ ಚಾಟ್‌ ಸೇವಿಸಿದ ಯುವತಿಯರು
ಆಹಾರ ಮೇಳದ ಮಳಿಗೆಗಳ ಮುಂದೆ ನೆರೆದಿದ್ದ ಗ್ರಾಹಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.