ಪ್ರಾತಿನಿಧಿಕ ಚಿತ್ರ
ರಾಯಚೂರು: ನಗರದ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ಬೆಳಿಗ್ಗೆ ಎರಡೂವರೆ ತಾಸು ಮಳೆ ಅಬ್ಬರಿಸಿದೆ. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ 30 ಮಿ.ಮೀ ಮಳೆ ದಾಖಲಾಗಿದೆ.
ರಾಯಚೂರು ಮಹಾನಗರಪಾಲಿಕೆ ವತಿಯಿಂದ ಗುರುವಾರ ಬೆಳಿಗ್ಗೆ ಆಯೋಜಿಸಿದ್ದ ಮ್ಯಾರಥಾನ ಮಳೆಯ ಅಬ್ಬರದಿಂದಾಗಿ ರದ್ದಾಯಿತು. ಮ್ಯಾರಥಾನಲ್ಲಿ ಪಾಲ್ಗೊಳ್ಳಲು 527 ಯುವಕ, ಯುವತಿಯರು ಹೆಸರು ನೋಂದಣಿ ಮಾಡಿಕೊಂಡಿದ್ದರು. ಸುರಿಯುವ ಮಳೆಯಲ್ಲೇ 50 ಯುವಕ, ಯುವತಿಯರು ಜಿಲ್ಲಾ ಕ್ರೀಡಾಂಗಣಕ್ಕೆ ಬಂದಿದ್ದರು. ಮಳೆ ಬಿಡುವು ಮಾಡಿಕೊಡದ ಕಾರಣ ನಿರಾಶೆಯಿಂದ ಮನೆಗಳತ್ತ ಹೆಜ್ಜೆ ಹಾಕಿದರು.
ಪತ್ರಿಕೆಗಳು ಹಾಗೂ ಹಾಲು ಬೆಳಿಗ್ಗೆ 9 ಗಂಟೆಯ ನಂತರ ಮನೆಗೆ ತಲುಪಿದವು. ತರಕಾರಿ ಮಾರಾಟಗಾರರು ಸಹ ತೊಂದರೆ ಅನುಭವಿಸಬೇಕಾಯಿತು. ಶಾಲಾ- ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಉದ್ಯೋಗಕ್ಕೆ ತೆರಳುವ ನೌಕರರು ಹಾಗೂ ಕೂಲಿಕೆಲಸಕ್ಕೆ ತೆರಳುವ ಕಾರ್ಮಿಕರು ಪರದಾಡಿದರು.
ಮಳೆಯ ಅಬ್ಬರಕ್ಕೆ ನಗರದ ಚರಂಡಿಗಳು ತುಂಬಿ ಹರಿದವು. ರೈಲ್ವೆ ಸ್ಟೇಷನ್ ರಸ್ತೆ ಮೇಲೆ ಅಪಾರ ಪ್ರಮಾಣದಲ್ಲಿ ನೀರು ಹರಿಯಿತು.
ಮಸ್ಕಿ, ಮಾನ್ವಿ, ಸಿರವಾರ, ಸಿಂಧನೂರು, ಜಾಲಹಳ್ಳಿ ಹಾಗೂ ಹಟ್ಟಿ ಚಿನ್ನದಗಣಿ ಪ್ರದೇಶದಲ್ಲಿ ಮಳೆ ಅಬ್ಬರಿಸಿದೆ. ಒಟ್ಟಾರೆ ಜಿಲ್ಲೆಯಲ್ಲಿ ಮೋಡಕವಿದ ವಾತಾವರಣ ಹಾಗೂ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಶಾಲೆಗಳಿಗೆ ರಜೆ: ತಹಶೀಲ್ದಾರ್ ಆದೇಶದ ಅನ್ವಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ರಜಾ ಅವಧಿಯನ್ನು ಮುಂದಿನ ಎರಡು ಶನಿವಾರಗಳನ್ನು ಪೂರ್ಣಾವಧಿ ತರಗತಿಗಳನ್ನು ನಡೆಸುವ ಮೂಲಕ ಸರಿದೂಗಿಸಲು ಆದೇಶಿಸಲಾಗಿದೆ ಎಂದು ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.