ADVERTISEMENT

ರಾಯಚೂರಿನ ಸ್ಮಾರಕಗಳ ಅಭಿವೃದ್ಧಿಗೆ ಶುಕ್ರದೆಸೆ

ಚಂದ್ರಕಾಂತ ಮಸಾನಿ
Published 10 ನವೆಂಬರ್ 2025, 5:10 IST
Last Updated 10 ನವೆಂಬರ್ 2025, 5:10 IST
ರಾಜ್ಯ ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ದೇವರಾಜು ಎ, ಹಾಗೂ ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಾಪಾತ್ರ, ಪುರಾತ್ತವ ಇಲಾಖೆಯ ಮಂಜುಳಾ ಸಿ.ಎನ್, ಎಇಇ ಸತೀಶ್, ಪ್ರೇಮಲತಾ ಬಿ.ಎಂ., ಶಿವಪ್ರಕಾಶ ಅವರು ನವೆಂಬರ್ 4ರಂದು ರಾಯಚೂರು ಕೋಟೆ ಪ್ರದೇಶವನ್ನು ವೀಕ್ಷಿಸಿದರು
ರಾಜ್ಯ ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ದೇವರಾಜು ಎ, ಹಾಗೂ ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಾಪಾತ್ರ, ಪುರಾತ್ತವ ಇಲಾಖೆಯ ಮಂಜುಳಾ ಸಿ.ಎನ್, ಎಇಇ ಸತೀಶ್, ಪ್ರೇಮಲತಾ ಬಿ.ಎಂ., ಶಿವಪ್ರಕಾಶ ಅವರು ನವೆಂಬರ್ 4ರಂದು ರಾಯಚೂರು ಕೋಟೆ ಪ್ರದೇಶವನ್ನು ವೀಕ್ಷಿಸಿದರು   

ರಾಯಚೂರು: ನಗರದಲ್ಲಿರುವ ಐತಿಹಾಸಿಕ ಸ್ಮಾರಕಗಳನ್ನು ಉಳಿಸಿಕೊಳ್ಳುವ ದಿಸೆಯಲ್ಲಿ ಮಹಾನಗರಪಾಲಿಕೆ, ರಾಜ್ಯ ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿವೆ.

ರಾಯಚೂರು ನಗರಸಭೆಯು ಮಹಾನಗರಪಾಲಿಕೆಯಾಗಿ ಮೇಲ್ದರ್ಜೆಗೇರಿದ ನಂತರ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ನಿಧಾನಗತಿಯಲ್ಲಿ ಗರಿ ಬಿಚ್ಚಿಕೊಳ್ಳಲಾರಂಭಿಸಿದೆ. ನೀಲನಕ್ಷೆ, ವಿಸ್ತ್ರತ ಯೋಜನಾ ವರದಿಗಳು ಸಹ ಸಿದ್ಧವಾಗತೊಡಗಿವೆ.

ಇದೇ ದಿಸೆಯಲ್ಲಿ ಅಧಿಕಾರಿಗಳು ಆಸಕ್ತಿಯಿಂದ ಕಾರ್ಯನಿರ್ವಹಿಸಿದರೆ ಹಾಗೂ ರಾಜಕಾರಣಿಗಳು ಪಕ್ಷಭೇದ ಮರೆತು ಅಭಿವೃದ್ಧಿಗೆ ಸಹಕರಿಸಿದರೂ ಸಾಕು ಎರಡು ವರ್ಷಗಳ ಅವಧಿಯಲ್ಲಿ ರಾಯಚೂರು ನಗರದ ಚಿತ್ರಣವೇ ಬದಲಾಗಲಿದೆ.

ADVERTISEMENT

ನಗರದ ನವರಂಗ ದರ್ವಾಜಾ, ಕಾಟೆ ದರ್ವಾಜಾ, ಮೆಕ್ಕಾ ದರ್ವಾಜಾ, ಪಂಚ ಬೀಬಿ ಪಹಾಡ್, ತೀನ್‌ ಕಂದಿಲ್ ಸ್ಥಳವನ್ನು ಕಾಲಮಿತಿಯಲ್ಲಿ ಅಭಿವೃದ್ಧಿಪಡಿಸಿದರೆ ನಿಜಕ್ಕೂ ರಾಯಚೂರು ಜಿಲ್ಲೆ ಪ್ರವಾಸೋದ್ಯಮತ್ತ ದಾಪುಗಾಲು ಇಡಲಿದೆ.

ಸ್ಮಾರಕಗಳ ರಕ್ಷಣೆ ಹಾಗೂ ಅಭಿವೃದ್ಧಿ ಸಹ ಮಹಾನಗರಪಾಲಿಕೆಯ ಹೊಣೆಯಾಗಿದೆ. ಮುಂದೆ ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳು ಎದುರಾಗಬಾರದು ಎನ್ನುವ ಉದ್ದೇಶದಿಂದ ರಾಜ್ಯ ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಅವರ ಸಹಕಾರದಿಂದಲೇ ಸ್ಮಾರಕ ಪ್ರದೇಶ ಅಭಿವೃದ್ಧಿ ಪಡಿಸಲಾಗುತ್ತಿದೆ‘ ಎಂದು ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಾಪಾತ್ರ ಹೇಳುತ್ತಾರೆ.

‘ಕೋಟೆ ಗೋಡೆ ಪಕ್ಕದಲ್ಲಿ ವಾಕಿಂಗ್ ಪಾತ್‌ ನಿರ್ಮಾಣ ಮಾಡುವ ಉದ್ದೇಶವಿದೆ. ಧ್ವನಿ ಬೆಳಕಿನ ವ್ಯವಸ್ಥೆಗೂ ನೀಲನಕ್ಷೆ ಸಿದ್ಧವಾಗಿದೆ. ಇದಕ್ಕಾಗಿ ಪ್ರಾತ್ಯಕ್ಷಿಯನ್ನೂ ನಡೆಸಲಾಗಿದೆ. ಇದರ ಜತೆಗೆ ನಗರದ ಜನತೆ ನಗರ ನೈರ್ಮಲ್ಯಕ್ಕೆ ಸಹಕಾರ ನೀಡಿದರೆ ರಾಯಚೂರು ನಗರದ ಸ್ಮಾರಕಗಳು ಸಹ ಮಹತ್ವ ಪಡೆದುಕೊಳ್ಳಲಿದೆ‘ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.

‘ರಾಜ್ಯ ಪುರಾತತ್ವ ಇಲಾಖೆಗೆ ಅನುದಾನ ಬಹಳ ಕಡಿಮೆ ಇರುತ್ತದೆ. ಸ್ಮಾರಕಗಳ ಅಭಿವೃದ್ಧಿಗೆ ಮಹಾನಗರಪಾಲಿಕೆ ಅನುದಾನ ಕೊಡಲು ಆಸಕ್ತಿ ತೋರಿಸಿದೆ. ಹೀಗಾಗಿ ಇಲಾಖೆಯ ಎಂಜಿನಿಯರ್‌ಗಳು ಸ್ಮಾರಕದ ಅಭಿವೃದ್ಧಿಗೆ ಡಿಪಿಆರ್‌ ಸಿದ್ಧಪಡಿಸಿಕೊಟ್ಟು ನೆರವಾಗುತ್ತಿದ್ದಾರೆ’ ಎಂದು ರಾಜ್ಯ ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ದೇವರಾಜು ಎ. ಹೇಳುತ್ತಾರೆ.

ರಾಯಚೂರಿನ ಮಾರುಕಟ್ಟೆ ಪ್ರದೇಶದಲ್ಲಿರುವ ಕಲ್ಲಾನೆಗಳು

‘ರಾಯಚೂರು ಕೋಟೆ ಗೋಡೆಯನ್ನು ಬಲವರ್ಧನೆಗೊಳಿಸುವ ಕಾರಯ ಭರದಿಂದ ಸಾಗಿದೆ. ಇದರ ಅಕ್ಕಪಕ್ಕದ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯವನ್ನೂ ಆರಂಭಿಸಲಾಗುವುದು. ಜೆಸ್ಕಾಂ ಕಚೇರಿಯ ಬಳಿಯೇ ಕೋಟೆ ಪ್ರವೇಶ ದ್ವಾರ ನಿರ್ಮಿಸಲಾಗುವುದು‘ ಎನ್ನುತ್ತಾರೆ.

ಬೆಳಕು ಚೆಲ್ಲಲಿದೆ ತೀನ್ ಕಂದಿಲ್:

ಇದು ಸಾಮಾನ್ಯ ಬೆಳಕು ಚೆಲ್ಲುವ ದೀವಿಗೆ ಅಲ್ಲ. ನಗರದ ಮಾರುಕಟ್ಟೆ ಪ್ರದೇಶದಲ್ಲಿ ಅಂಚೆ ಕಚೇರಿಯ ಮುಂದೆಯೇ ಇರುವ ಎಣ್ಣೆ ದೀಪದ ಕಂಬವೇ ‘ತೀನ್‌ ಕಂದಿಲ್’. ಇದರಲ್ಲಿ ಎಣ್ಣೆ ದೀಪ ಹಚ್ಚದೇ ಇರಬಹುದು. ಆದರೆ, ಇದು ಇಂದಿಗೂ ಸ್ವಾತಂತ್ರ ಪೂರ್ವದ ಆಡಳಿತ ವ್ಯವಸ್ಥೆ ಹಾಗೂ ಸಂಸ್ಕೃತಿಯ ಮೇಲೆಯೂ ಬೆಳಕು ಚೆಲ್ಲುತ್ತಿದೆ.

ಕಾಕತೀಯರ ಆಡಳಿತಾವಧಿಯಲ್ಲಿ ರಾಯಚೂರು ಕೋಟೆ ನಿರ್ಮಾಣವಾಗಿದೆ. ಬಹಮನಿ ಹಾಗೂ ಆದಿಲ್ ಶಾಹಿಗಳು ಹೊರ ಕೋಟೆ ಕಟ್ಟಿಸಿದ್ದಾರೆ. ಪಶ್ಚಿಮಕ್ಕೆ ಮೆಕ್ಕಾ ದರ್ವಾಜಾ. ದಕ್ಷಿಣಕ್ಕೆ ಇರುವ ಕಾಟೆ ದರ್ವಜಾ( ಮುಳ್ಳಿನ ಅಗಸೆ) ಹೋಗುವ ಕೂಡು ರಸ್ತೆಯ ಬದಿಯಲ್ಲಿ ಮೂರು ದೀಪಗಳಿರುವ ಕಂಬ ಇದೆ.

ಇದರ ಪಕ್ಕದಲ್ಲೇ ಕಲ್ಲಿನ ಆನೆಗಳು ಇವೆ. ತಾಯಿ ಆನೆ, ಪಕ್ಕದಲ್ಲಿ ಎರಡು ಮರಿ ಆನೆಗಳು ಕಾಣಸಿಗುತ್ತವೆ. ಮೂರು ಕೂಡು ರಸ್ತೆ ಸೇರುವ ಜಾಗದಲ್ಲಿ ಮೂರು ಆನೆಗಳು ಹಾಗೂ ಮೂರು ಅಂದರೆ ತೀನ್‌ ಕಂದಿಲ್‌. ಮೂರು ಅಂಕಿ ಇಲ್ಲಿ ಶುಭ ಸೂಚಕವಾಗಿದೆ. 3 ಅಂಕಿ ಅಶುಭ ಎಂದು ಭಾವಿಸುತ್ತಿದ್ದ ಮೌಢ್ಯದ ಕಾಲದಲ್ಲೇ ಶುಭ ಸೂಚಕ ಹೇಗಾಯಿತು ಎನ್ನುವುದು ಸಹ ರೋಚಕವೇ ಆಗಿದೆ.

16 ನೇ ಶತಮಾನದಲ್ಲಿ ಕೃಷ್ಣ ದೇವರಾಯನ ಕಾಲದಲ್ಲಿ ಕಲ್ಲಾನೆಗಳನ್ನು ಪ್ರತಿಷ್ಠಾಪಿಸಿದರೆ, ನಿಜಾಮರ ಕಾಲದಲ್ಲಿ ಎಣ್ಣೆದೀಪದ ಕಂಬ (ತೀನ್‌ ಕಂದಿಲ್) ನಿಲ್ಲಿಸಲಾಗಿದೆ. ಸ್ವಾತಂತ್ರ್ಯದ ನಂತರವೂ ತೀನ್‌ ಕಂದಿಲ್‌ನಲ್ಲಿ ಸಂಜೆ ಎಣ್ಣೆ ಹಾಕಿ ದೀಪ ಹಚ್ಚಲಾಗುತ್ತಿತ್ತು. ವಿದ್ಯುತ್‌ ಬಂದ ಮೇಲೆ ಇದು ಮಹತ್ವ ಕಳೆದುಕೊಂಡಿತು. ಇದು ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತಿದೆ.

ರಾಯಚೂರಿನ ತೀನ್ ಕಂದಿಲ್  ವೃತ್ತದಲ್ಲಿರುವ ಕಂದಿಲ್

ಮೆಕ್ಕಾ ದರ್ವಾಜಾ:

ಮೆಕ್ಕ ದರ್ವಾಜಾ ರಾಯಚೂರು ನಗರದ ಪ್ರಮುಖ ಆಕರ್ಷಣೆಯಾಗಿದೆ. ಕಾಕತೀಯರ ಆಡಳಿತಾವಧಿಯಲ್ಲಿ ರಾಯಚೂರು ಕೋಟೆ ನಿರ್ಮಾಣಗೊಂಡಿದೆ. ಬಹಮನಿ ಸುಲ್ತಾನರು ಹಾಗೂ ಆದಿಲ್ ಶಾಹಿಗಳು ಹೊರ ಕೋಟೆ ಕಟ್ಟಿಸಿ ಕೆಲವೊಂದ ಬದಲಾವಣೆ ಮಾಡಿ ಕೋಟೆಯನ್ನು ಗಟ್ಟಿಗೊಳಿಸಿದ್ದರು.

ಮೆಕ್ಕಾ ದರ್ವಾಜಾ ಇಂದು ಕೇಂದ್ರ ಬಸ್‌ ನಿಲ್ದಾಣದ ಪ್ರವೇಶದಂತೆ ಇದೆ. ಮಿತಿ ಮೀರಿ ಅತಿಕ್ರಮಣವಾದರೂ ಇರುವ ಅವಶೇಷಗಳನ್ನು ಉಳಿಸಿಕೊಂಡು ಮಹಾನಗರಪಾಲಿಕೆ, ಪ್ರವಾಸೋದ್ಯಮ ಇಲಾಖೆ, ರಾಜ್ಯ ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸೇರಿಕೊಂಡು ಸ್ಮಾರಕಗಳ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಆಸಕ್ತಿ ತೋರಿಸಿವೆ.


ಸ್ಮಾರಕಗಳ ರಕ್ಷಣೆ

ರಾಯಚೂರು ಹಳೆಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಈಗಿನ ಮಹಾನಗರಪಾಲಿಕೆ ಆಯುಕ್ತರ ಕಚೇರಿ ಮುಂಭಾಗದಲ್ಲಿ ಕನ್ನಡದ ಮೊದಲ ‘ಹಲ್ಮಡಿ’ ಶಾಸನದ ಪ್ರತಿಕೃತಿ ನಿರ್ಮಿಸಲಾಗಿದೆ.

ಧ್ವಜಕಟ್ಟೆಯ ಸುತ್ತ ನಗರದಲ್ಲಿ ದೊರೆತ ಪ್ರಮುಖ ಶಾಸನಗಳು, ಶಿಲ್ಪಗಳು, ವೀರಗಲ್ಲುಗಳನ್ನು ಸಹ ಅಚ್ಚುಕಟ್ಟಾಗಿ ಜೋಡಿಸಿ ಇಡಲಾಗಿದೆ.

ರಾಯಚೂರು ಹಳೆಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಈಗಿನ ಮಹಾನಗರಪಾಲಿಕೆ ಆಯುಕ್ತರ ಕಚೇರಿ ಮುಂಭಾಗದಲ್ಲಿ ಕನ್ನಡದ ಮೊದಲ ‘ಹಲ್ಮಡಿ’ ಶಾಸನದ ಪ್ರತಿಕೃತಿ ನಿರ್ಮಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.