ರಾಯಚೂರು: ಜಿಲ್ಲಾಡಳಿತ ಹಾಗೂ ರಾಯಚೂರು ಮಹಾನಗರ ಪಾಲಿಕೆ ಅಧಿಕಾರಿಗಳ ಎರಡು ತಂಡಗಳು ನಗರದ 20 ಹೋಟೆಲ್, ಚಹಾ ಅಂಗಡಿ, ರೆಸ್ಟೋರೆಂಟ್ ಹಾಗೂ ಬಾರ್‌ಗಳ ಮೇಲೆ ಶನಿವಾರ ದಾಳಿ ಮಾಡಿ ಶುಚಿತ್ವ ಕಾಪಾಡಿಕೊಳ್ಳದ ಮಾಲೀಕರಿಗೆ ದಂಡ ವಿಧಿಸಿ ಬಿಸಿ ಮುಟ್ಟಿಸಿದವು.
ರಾಯಚೂರು ಉಪ ವಿಭಾಗಾಧಿಕಾರಿ ಗಜಾನನ ಬಾಳೆ ಹಾಗೂ ತಹಶೀಲ್ದಾರ್ ಸುರೇಶ ವರ್ಮಾ ನೇತೃತ್ವದಲ್ಲಿ ಜಿಲ್ಲಾ ಅಂಕಿತ ಅಧಿಕಾರಿಗಳು ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳನ್ನೊಂಡ ಒಂದು ತಂಡವು ರೈಲು ನಿಲ್ದಾಣ ಸುತ್ತಲಿನ 10ಕ್ಕೂ ಹೆಚ್ಚು ವಿವಿಧ ಹೋಟೆಲ್‌ಗಳು, ಚಹಾ ಅಂಗಡಿಗಳ ಮೇಲೆ ದಾಳಿ ನಡೆಸಿ ತಲಾ
₹30 ಸಾವಿರ ದಂಡ ವಿಧಿಸಿತು.
ಪಾಲಿಕೆಯ ಕಂದಾಯ ವಲಯ ಆಯುಕ್ತರು ಹಾಗೂ ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿ ನಿಯರ್ ನೇತೃತ್ವದ ಮತ್ತೊಂದು ತಂಡ ಸುಮಾರು 10ಕ್ಕೂ ಹೆಚ್ಚು ಬಾರ್ ಹಾಗೂ ರೆಸ್ಟೋರೆಂಟೆಗಳು ಮತ್ತು ವಿವಿಧ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಅಲ್ಲಿನ ಸಾಮಗ್ರಿಗಳು, ಶುಚಿತ್ವದ ಬಗ್ಗೆ ಪರಿಶೀಲಿಸಿ ₹50 ಸಾವಿರ ದವರೆಗೂ ದಂಡ ವಿಧಿಸಿ ಬಿಸಿಮುಟ್ಟಿಸಿತು.
ಉಪ ಆಯುಕ್ತ ಶರಣಬಸಪ್ಪ ಕೋಟೆಪ್ಪಗೋಳ ಮತ್ತು ತಹಶೀಲ್ದಾರ್ ನೇತೃತ್ವದ ಇನ್ನೊಂದು ತಂಡ ರೈಲು ನಿಲ್ದಾಣದ ಸುತ್ತಲಿನ ಸಸ್ಯಹಾರಿ ಮತ್ತು ಮಾಂಸಾಹಾರಿ ಹೋಟೆಲ್ ಪ್ರವೇಶಿಸಿ ಅವರು ಅಡುಗೆಗೆ ಬಳಸುವ ಆಹಾರ ಸಾಮಗ್ರಿಗಳ ಗುಣಮಟ್ಟ ಪರಿಶೀಲಿಸಿತು. ಕೆಲವು ಹೋಟೆಲ್‌ಗಳಲ್ಲಿ ನಿಷೇಧಿತ ಉಪ್ಪು ಮತ್ತು ನಿಷೇಧಿತ ಬಣ್ಣದ ರಸಾಯನ ಬಳಸುತ್ತಿರುವುದನ್ನು ಪತ್ತೆ ಹಚ್ಚಿದರು. ನಂತರ ಮಾಲೀಕರಿಗೆ ದಂಡ ವಿಧಿಸಿದರು.
ಹೋಟೆಲ್‌ಗಳಲ್ಲಿ ಕೆಲಸ ಮಾಡುವವರು ವ್ಶೆದ್ಯರಿಂದ ವೈದ್ಯಕೀಯ ಪ್ರಮಾಣ ಪತ್ರ ಪಡೆದಿರುವುದಿಲ್ಲ. ಅಡುಗೆಗೆ ವಿಪರೀತ ಬಣ್ಣ ಬಳಸುತ್ತಿದ್ದಾರೆ. ಇದನ್ನು ನೋಡಿದ ಅಧಿಕಾರಿಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಸುಧಾರಣಾ ನೊಟೀಸ್ ಜಾರಿ ಮಾಡಿದರು.
ಹೋಟೆಲ್‌ಗಳಲ್ಲಿನ ನೀರಿನ ತೊಟ್ಟಿಗಳು ಮತ್ತು ಟ್ಯಾಂಕ್‌ಗಳನ್ನು ಪರಿಶೀಲಿಸಲಾಯಿತು. ಪ್ರಯೋಗಾಲಯಕ್ಕೆ ಕಳುಹಿಸಲು ಬಾಟಲ್‌ಗಳಲ್ಲಿ ನೀರು ಸಂಗ್ರಹಿಸಲಾಯಿತು. ಪ್ರತಿ ದಿನ ನೀರಿನ ಟ್ಯಾಂಕ್ ಸ್ವಚ್ಛ ಮಾಡುವಂತೆ ಮಾಲೀಕರಿಗೆ ಎಚ್ಚರಿಕೆ ನೀಡಲಾಯಿತು.
ಪಾಲಿಕೆಯ ಕಂದಾಯ ವಲಯ ಆಯುಕ್ತ ಹಾಗೂ ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನೇತೃತ್ವದ ತಂಡವು ಬಾರ್‌ಗಳಲ್ಲಿ ಸ್ವಚ್ಛತೆ ಹಾಗೂ ನಿಷೇಧಿತ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಪರಿಶೀಲಿಸಿತು.
ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿನ ಸಿಬ್ಬಂದಿ ವೈಯಕ್ತಿಕವಾಗಿ ಸ್ವಚ್ಛತೆಯಿಂದಿರಬೇಕು. ಅಡುಗೆ ಮಾಡುವ ಎಲ್ಲ ಸಿಬ್ಬಂದಿಯ ಆರೋಗ್ಯ ತಪಾಸಣೆ ಮಾಡಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಹೋಟೆಲ್ ಸೀಜ್ ಮಾಡಲಾಗುವುದು ಎಂದು ಮಾಲೀಕರಿಗೆ ಎಚ್ಚರಿಕೆ ನೀಡಲಾಯಿತು.
ಹೋಟೆಲ್ ರೆಸ್ಟೋರಂಟ್‌ಗಳು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಶುಚಿತ್ವ ಕಾಪಾಡಿಕೊಳ್ಳಬೇಕು. ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ ಅನಿವಾರ್ಯವಾಗಲಿದೆಗಜಾನನ ಬಾಳೆ ರಾಯಚೂರು ಉಪ ವಿಭಾಗಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.