ರಾಯಚೂರು: ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಅದರಲ್ಲೂ ರಾಯಚೂರು ನಗರದಲ್ಲಿ ಬೀದಿನಾಯಿಗಳ ಉಪಟಳ ಮಿತಿಮೀರಿದೆ. ವೃದ್ಧರು, ಮಧ್ಯ ವಯಸ್ಕರು ಬೆಳಿಗ್ಗೆ ವಾಯುವಿಹಾರಕ್ಕೆ ಹಾಗೂ ಮಕ್ಕಳು ಶಾಲೆಗಳಿಗೆ ಹೋಗುವುದು ಕಷ್ಟವಾಗುತ್ತಿದೆ.
ನಗರದ ಎಲ್ಲ ಬಡಾವಣೆಗಳಲ್ಲೂ ನಾಯಿಗಳ ದೊಡ್ಡ ಹಿಂಡುಗಳು ಇವೆ. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮುಂಭಾಗದ ಲಿಂಗಸುಗೂರು ರಸ್ತೆ, ಡಿಸಿ ಮನೆ ಮುಂಭಾಗದ ಆಟೊ ನಿಲ್ದಾಣ, ಜಿಲ್ಲಾ ಕ್ರೀಡಾಂಗಣದ ಆವರಣ, ರೈಲು ನಿಲ್ದಾಣ ರಸ್ತೆ, ಗಂಜ್ ಸರ್ಕಲ್, ಬಸವನಬಾವಿ ವೃತ್ತ, ಆರ್‌ಟಿಒ ವೃತ್ತ, ಚಂದ್ರಬಂಡಾ ರಸ್ತೆ ಸೇರಿದಂತೆ ಪ್ರಮುಖ ಮಾರ್ಗಗಳಲ್ಲೇ ಬೀದಿ ನಾಯಿಗಳು ಹಿಂಡು ಕಟ್ಟಿಕಟ್ಟಿಕೊಂಡು ಜನರ ಮೇಲೆ ದಾಳಿ ಮಾಡಲು ಶುರು ಮಾಡಿವೆ.
ಬೆಳಗಿನ ಜಾವ ವಾಯುವಿಹಾರಕ್ಕೆ ಹೋಗುವವರು, ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಬೆಳಿಗ್ಗೆ ಹಾಗೂ ರಾತ್ರಿ ವೇಳೆಯಲ್ಲಿ ಮನೆಯಿಂದ ಹೊರಗೆ ಬರುವುದೇ ಕಷ್ಟವಾಗುತ್ತಿದೆ. ಮನೆ ಮನೆಗೆ ಪತ್ರಿಕೆ ಹಂಚುವವರು, ಹಾಲು ಕೊಡುವವರ ಮೇಲೂ ಬೀದಿ ನಾಯಿಗಳು ದಾಳಿ ಮಾಡುತ್ತಿವೆ.
ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳಿಂದ ಬೆಳಗಿನ ಜಾವ ರಾಯಚೂರಿಗೆ ಬರುವ ಪ್ರಯಾಣಿಕರ ಮೈಮೇಲೆ ಹಾರಿ ಬ್ಯಾಗ್ ಕಚ್ಚಿ ಹರಿದಾಡುತ್ತಿವೆ. ಕಲ್ಲು ತೂರಿ ಒಂದನ್ನು ಎದುರಿಸಲು ಹೋದರೆ ಮೂರು ನಾಲ್ಕು ನಾಯಿಗಳು ಮೈಮೇಲೆ ಹಾರಿ ಬರುತ್ತಿವೆ.
ಕೇಂದ್ರ ಬಸ್ ನಿಲ್ದಾಣ, ರೈಲು ನಿಲ್ದಾಣ, ನಗರ ಸಾರಿಗೆಯ ಬಸ್ ತಂಗುದಾಣಗಳು, ಕಾಂಪ್ಲೆಕ್ಸ್‌ಗಳ ಆವರಣವನ್ನು ತಮ್ಮ ಅಡ್ಡೆ ಮಾಡಿಕೊಂಡಿವೆ. ರಾತ್ರಿ ಹಾಗೂ ಬೆಳಗಿನ ಜಾವ ಇವು ಹೆಚ್ಚು ಸಕ್ರಿಯವಾಗಿರುತ್ತವೆ. ರಾತ್ರಿ ವೇಳೆ, ಬೆಳಗಿನ ವೇಳೆ ರೋಗಿಗಳಿಗೆ ಆಹಾರ ಕೊಟ್ಟು ಬರುವವರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಸ್ಥಿತಿ ಇದೆ.
ಸಂಘಟನೆಗಳ ದೂರು: ಬೀದಿ ನಾಯಿಗಳ ಹಾವಳಿಯಿಂದ ಜನರ ರಕ್ಷಣೆ ಮಾಡುವಂತೆ ಒತ್ತಾಯಿಸಿ ಈಗಾಗಲೇ ಅಖಂಡ ಕರ್ನಾಟಕ ರಕ್ಷಣಾ ಸಮಿತಿ ಅಧ್ಯಕ್ಷ ರಾಜಶೇಖರ ಮಾಚರ್ಲಾ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.
‘ನಾಯಿಗಳ ನಿಯಂತ್ರಣ ಮಾಡಬೇಕಾದ ಮಹಾನಗರ ಪಾಲಿಕೆ ನಿದ್ರಾವಸ್ಥೆಯಿಂದ ಎಚ್ಚರಗೊಳ್ಳುವುದು ಯಾವಾಗ’ ಎಂದು ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಬಾಬುರಾವ್ ಪ್ರಶ್ನಿಸಿದ್ದಾರೆ.
ನಾಯಿ ಕಚ್ಚಿದ ಗಂಭೀರ ಘಟನೆಗಳು
ರಾಯಚೂರು ತಾಲ್ಲೂಕಿನ ದೇವಸುಗೂರಿನಲ್ಲಿ ಜುಲೈ 17ರಂದು ಬಾಲಕ, ವೃದ್ಧ ಸೇರಿ ಮೂವರನ್ನು ಕಚ್ಚಿಗೊಳಿಸಿವೆ. ಲಿಂಗಸುಗೂರು ತಾಲ್ಲೂಕಿನ ಕಸಬಾ ಲಿಂಗಸುಗೂರಲ್ಲಿ ಬೀದಿನಾಯಿಗಳು ದಾಳಿ ನಡೆಸಿ ಬಾಲಕನನ್ನು ಕೊಂದು ಹಾಕಿವೆ. ರಾಯಚೂರು ನಗರದ ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ದಾಳಿ ನಡೆಸಿ ಮುಖ, ಗಲ್ಲ ಹಾಗೂ ಕೈ ಹರಿದು ಹಾಕಿವೆ. ಇನ್ನೊಂದು ಪ್ರಕರಣದಲ್ಲಿ ಒಂದೇ ನಾಯಿ ನಾಲ್ವರಿಗೆ ಬೀದಿ ನಾಯಿ ಕಚ್ಚಿಗೊಳಿಸಿದೆ.
ನಾಯಿಗಳು ಮಳೆಗಾಲದಲ್ಲಿ ಸಂತಾನ ಅಭಿವೃದ್ಧಿಯಲ್ಲಿ ತೊಡಗುವ ಸಂದರ್ಭದಲ್ಲಿ ಹೆಚ್ಚು ಆಕ್ರಮಣಕಾರಿಯಾಗಿರುತ್ತವೆ. ಅವುಗಳಿಂದ ಎಚ್ಚರಿಕೆ ಇರುವುದು ಒಳ್ಳೆಯದುಡಾ.ಪೂರಣಸಿಂಗ್ ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕ
1236 ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ
‘ರಾಯಚೂರು ಮಹಾನಗರಪಾಲಿಕೆಯು ಸಾರ್ವಜನಿಕರ ಮನವಿಯನ್ನು ಗಂಭೀರವಾಗಿ ಪರಿಗಣಿಸಿದೆ. ಎನ್‌ಜಿಒ ಮೂಲಕ ಬೀದಿನಾಯಿಗಳನ್ನು ಹಿಡಿದು ಅವುಗಳ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿಯೇ ₹ 25 ಲಕ್ಷ ಕಾಯ್ದಿರಿಸಲಾಗಿದೆ’ ಎಂದು ಆಯುಕ್ತ ಜುಬಿನ್ ಮೊಹಾಪಾತ್ರ ತಿಳಿಸಿದ್ದಾರೆ. ‘ನಗರದ ವಲಯ 1 ಹಾಗೂ ವಲಯ 2ರಲ್ಲಿ ತಲಾ 623 ಶೇರಿ ಒಟ್ಟು 1236 ಬೀದಿ ನಾಯಿಗಳಿಗೆ ರೇಬಿಸಿ ನಿರೋಧಕ ಲಸಿಕೆ ಹಾಕಲಾಗಿದೆ. ಧ್ವನಿರಹಿತ ಪ್ರಾಣಿಗಳಿಗಾಗಿ ಆರೈಕೆ (ಕೇರ್ ಫಾರ್ ವಾಯ್ಸ್ ಲೆಸ್ ಅನಿಮಲ್ಸ್) ಎಂಬ ಸರ್ಕಾರೇತರ ಸಂಸ್ಥೆಯು ಪ್ರಾಣಿಗಳ ಜನನ ನಿಯಂತ್ರಣ ಕಾರ್ಯವನ್ನು ನಡೆಸುತ್ತಿದೆ ಇಲ್ಲಿಯವರೆಗೆ 350 ನಾಯಿಗಳ ಸಂತಾನ ಶಕ್ತಿನಿಯಂತ್ರಣ ಶಕ್ತಿ ನಿಯಂತ್ರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ’ ಹೇಳಿದ್ದಾರೆ.
ಆರು ತಿಂಗಳಲ್ಲಿ ನಾಯಿ ಕಚ್ಚಿ 1298 ಜನರು ಗಾಯ
ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ 2025ರ ಜನವರಿಯಿಂದ ಆಗಸ್ಟ್ ವರೆಗೆ 1298 ಜನರು ನಾಯಿಕಡಿತದಿಂದ ಗಾಯಗೊಂಡು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಜನವರಿಯಲ್ಲಿ 215 ಫೆಬ್ರುವರಿಯಲ್ಲಿ 192 ಮಾರ್ಚ್‌ನಲ್ಲಿ 110 ಏಪ್ರಿಲ್‌ನಲ್ಲಿ 112 ಮೇನಲ್ಲಿ 183 ಜೂನ್‌ನಲ್ಲಿ 192 ಹಾಗೂ ಆಗಸ್ಟ್‌ನಲ್ಲಿ 294 ಜನರಿಗೆ ನಾಯಿಗಳು ಕಚ್ಚಿದೆ. ಪಶು ಸಂಗೋಪನೆ ಇಲಾಖೆಯ ಜಾನುವಾರು ಗಣತಿ ಪ್ರಕಾರ ನಗರವೊಂದಲ್ಲೇ ಸುಮಾರು ಎರಡು ಸಾವಿರ ಬೀದಿ ನಾಯಿಗಳು ಇವೆ. ಒಂದು ಬಾರಿಗೆ ಅವು ಎರಡರಿಂದ ನಾಲ್ಕು ಮರಿಗಳಿಗೆ ಜನ್ಮಕೊಡುವ ಕಾರಣ ಬೀದಿ ನಾಯಿಗಳ ಸಂಖ್ಯೆ ದುಪ್ಪಟ್ಟ ಆಗಿರಬಹುದು ಎಂದು ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.