ADVERTISEMENT

ರಾಯಚೂರು: ತಾಯ್ನಾಡಿನಲ್ಲೇ ಕನ್ನಡ ಶಾಲೆಗಳು ಅನಾಥ

ತೆಲಂಗಾಣ, ಆಂಧ್ರಪ್ರದೇಶದಲ್ಲಿ ಸುಸ್ಥಿತಿಯಲ್ಲಿ ಕನ್ನಡ ಶಾಲೆಗಳು

ಚಂದ್ರಕಾಂತ ಮಸಾನಿ
Published 24 ಮಾರ್ಚ್ 2025, 6:53 IST
Last Updated 24 ಮಾರ್ಚ್ 2025, 6:53 IST
ತೆಲಂಗಾಣದ ನಾರಾಯಣಪೇಟೆ ಜಿಲ್ಲೆ ಕೃಷ್ಣಾ ಮಂಡಲದ ಕೃಷ್ಣಾ ಗ್ರಾಮದಲ್ಲಿರುವ ಸರ್ಕಾರಿ ಕನ್ನಡ ಪ್ರೌಢ ಶಾಲೆಯಲ್ಲಿ ಸ್ಮಾರ್ಟ್‌ ಬೋರ್ಡ್‌ ಅಳವಡಿಸಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತಿದೆ/ ಚಿತ್ರ: ಶ್ರೀನಿವಾಸ ಇನಾಮದಾರ್
ತೆಲಂಗಾಣದ ನಾರಾಯಣಪೇಟೆ ಜಿಲ್ಲೆ ಕೃಷ್ಣಾ ಮಂಡಲದ ಕೃಷ್ಣಾ ಗ್ರಾಮದಲ್ಲಿರುವ ಸರ್ಕಾರಿ ಕನ್ನಡ ಪ್ರೌಢ ಶಾಲೆಯಲ್ಲಿ ಸ್ಮಾರ್ಟ್‌ ಬೋರ್ಡ್‌ ಅಳವಡಿಸಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತಿದೆ/ ಚಿತ್ರ: ಶ್ರೀನಿವಾಸ ಇನಾಮದಾರ್   

ರಾಯಚೂರು: ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶವನ್ನು ಒಳಗೊಂಡು ನಲವತ್ತು ಕಿ.ಮೀ ಪರಿಧಿಯಲ್ಲಿ ಕನ್ನಡಿಗರೇ ವಾಸವಾಗಿದ್ದರೂ ಜಿಲ್ಲೆಯ ಗಡಿಗೊಳಗಿನ ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿ ಮಾತ್ರ ಶೋಚನೀಯವಾಗಿದೆ.

ತಂತ್ರಜ್ಞಾನ ಯುಗದಲ್ಲಿ ಹಾಳಾದ ಕಟ್ಟಡ, ಮಕ್ಕಳು ನೆಲದ ಮೇಲೆ ಕುಳಿತುಕೊಳ್ಳುವ ಸ್ಥಿತಿ ನೋಡಿದರೆ ತಾಯ್ನಾನಾಡಿನಲ್ಲೇ ಕನ್ನಡ ಶಾಲೆಗಳು ಅನಾಥವಾಗಿರುವುದು ಕಂಡು ಬರುತ್ತದೆ.

ರಾಯಚೂರು ನಗರದಲ್ಲಿರುವ ಅನೇಕ ಸರ್ಕಾರಿ ಪ್ರಾಥಮಿಕ ಶಾಲೆಗಳ ಸಮಸ್ಯೆ ಹೇಳತೀರದು. ಶಾಲೆಯಲ್ಲಿ ಕುಳಿತುಕೊಳ್ಳಲು ಸರಿಯಾದ ಪೀಠೋಪಕರಣಗಳು ಇಲ್ಲ. ಶೌಚಾಲಯಗಳ ಸ್ಥಿತಿಯೂ ಗಂಭೀರವಾಗಿದೆ. ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವೂ ದೊರಕುತ್ತಿಲ್ಲ. ಸರ್ಕಾರಿ ಶಾಲೆಗಳು ಬಡವರ ಶಾಲೆಗಳಾಗಿ ಗುರುತಿಸಿಕೊಂಡಿವೆ.

ADVERTISEMENT

ನೆರೆಯ ತೆಲಂಗಾಣದ ನಾರಾಯಣಪೇಟೆ ಜಿಲ್ಲೆ ಕೃಷ್ಣಾ ಮಂಡಲದ ಕನ್ನಡ ಶಾಲೆಗಳು ಉತ್ತಮ ಸ್ಥಿತಿಯಲ್ಲಿವೆ.

ಅಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಲ್ಲಿನ ಕನ್ನಡ ಶಾಲೆಗಳ ಸ್ಥಿತಿ ಸುಧಾರಿಸಿವೆ. ಒಂದೇ ವರ್ಷದ ಅವಧಿಯಲ್ಲಿ ಅನೇಕ ಶಾಲೆಗಳಿಗೆ ಹೊಸ ಕಟ್ಟಡ ಮಂಜೂರು ಮಾಡಿ, ಮೂಲಸೌಕರ್ಯ ಒದಗಿಸಲಾಗಿದೆ.

‘ನಮ್ಮ ಊರು, ನಮ್ಮ ಶಾಲೆ‘ ಯೋಜನೆ ಅಡಿಯಲ್ಲಿ ಪಿಠೋಪಕರಣಗಳನ್ನು ಒದಗಿಸಲಾಗಿದೆ. ಕನ್ನಡ ಶಾಲೆಗಳಿಗೆ ಕನ್ನಡ ಪುಸ್ತಕಗಳನ್ನು ಮುದ್ರಿಸಿಕೊಟ್ಟಿದೆ. ಪ್ರಾಥಮಿಕ ಶಾಲೆಗಳಲ್ಲಿ ಎಡಿಎಫ್‌ ಬೋರ್ಡ್‌ ಹಾಗೂ ಪ್ರೌಢಶಾಲೆಗಳಲ್ಲಿ ಸ್ಮಾರ್ಟ್‌ ಬೋರ್ಡ್‌ ಅಳವಡಿಸಲಾಗಿದ್ದು, ಶಿಕ್ಷಕರಿಗೆ ತರಬೇತಿಯನ್ನೂ ಕೊಡಲಾಗಿದೆ. ಶಾಲೆಗೆ ಉಚಿತ ಇಂಟರ್‌ನೆಟ್‌, ವಿದ್ಯುತ್‌ ಹಾಗೂ ಫ್ಯಾನ್‌ಗಳನ್ನೂ ಅಳವಡಿಸಲಾಗಿದೆ. ಅಲ್ಲಿನ ಸರ್ಕಾರಿ ಕನ್ನಡ ಶಾಲೆಗಳು ಖಾಸಗಿ ಶಾಲೆಗಳಿಗಿಂತಲೂ ಚೆನ್ನಾಗಿವೆ.

ಸಾರಿಗೆ ಸಮಸ್ಯೆ ಇರುವ ಕಾರಣ ಮಕ್ಕಳು ಆಟೊದಲ್ಲಿ ಬರಲು ವ್ಯವಸ್ಥೆ ಮಾಡಲಾಗಿದೆ. ಆಟೊದ ಹಣವನ್ನು ಸರ್ಕಾರ ಮಕ್ಕಳ ಖಾತೆಗೆ ನೇರವಾಗಿ ಪಾವತಿಸುತ್ತಿದೆ. ನಾಲ್ಕೈದು ಗ್ರಾಮಗಳ ಮಕ್ಕಳು ಒಂದೇ ಆಟೊದಲ್ಲಿ ನಿತ್ಯ ಬಂದು ಹೋಗುತ್ತಾರೆ. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಹಾಗೂ ಸಂಜೆ ಉ‍ಪಾಹಾರವನ್ನೂ ಕೊಡುತ್ತಿದೆ.

ಕನ್ನಡ ಶಿಕ್ಷಕರ ಕೊರತೆ ಇಲ್ಲ. ತೆಲಂಗಾಣದಲ್ಲಿ ಎಲ್ಲ ವಿಷಯಗಳನ್ನು ಕನ್ನಡದಲ್ಲೇ ಬೋಧನೆ ಮಾಡಲಾಗುತ್ತಿದೆ. ಕನ್ನಡ ವ್ಯಾಕಾರಣವನ್ನೂ ಅಚ್ಚುಕಟ್ಟಾಗಿ ಹೇಳಿಕೊಡಲಾಗುತ್ತಿದೆ.

ಅತಂತ್ರ ಸ್ಥಿತಿಯಲ್ಲಿ ಗಡಿನಾಡು ಕನ್ನಡಿಗರು

ಗಡಿಯಲ್ಲಿರುವ ಗಡಿಕನ್ನಡಿಗರ ಮಕ್ಕಳಿಗೆ 10ನೇ ತರಗತಿ ವರೆಗೂ ಕನ್ನಡದಲ್ಲಿ ಶಿಕ್ಷಣ ದೊರಕುತ್ತಿದೆ. ಪಿಯುಸಿ, ಪದವಿಗೆ ರಾಯಚೂರಿಗೆ ಬರಬೇಕಾದ ಸ್ಥಿತಿ ಇದೆ. ಕರ್ನಾಟಕದಲ್ಲಿ ಪದವಿ ಮುಗಿಸಿದ ಮೇಲೆ ತೆಲಂಗಾಣ ಸರ್ಕಾರ ಸರ್ಕಾರಿ ನೌಕರಿ ಕೊಡುವುದಿಲ್ಲ. 1ರಿಂದ 10ನೇ ತರಗತಿ ವರೆಗೆ ತೆಲಂಗಾಣದಲ್ಲಿ ಓದಿದ ಕಾರಣ ಕರ್ನಾಟಕದ ಸರ್ಕಾರವೂ ಅವರನ್ನು ನೇಮಕ ಮಾಡಿಕೊಳ್ಳುವುದಿಲ್ಲ. ತಾಂತ್ರಿಕ ಕಾರಣದಿಂದಾಗಿ ಗಡಿನಾಡು ಕನ್ನಡಿಗರು ಅತಂತ್ರ ಸ್ಥಿತಿಯಲ್ಲಿದ್ದಾರೆ.

‘ಗಡಿಭಾಗದ ಕನ್ನಡಿಗರ ಮಕ್ಕಳ ಹಾಗೂ ಶಾಲೆಗಳ ಸಮಸ್ಯೆಗೆ ರಾಜ್ಯ ಸರ್ಕಾರ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಸೌಲಭ್ಯಗಳು ಶಿಕ್ಷಣ ಪಡೆಯುವುದಕ್ಕೆ ಮಾತ್ರ ಸೀಮಿತವಾಗಿದೆ. ಪದವಿ ಪಡೆದ ಗಡಿಕನ್ನಡಿಗರ ಮಕ್ಕಳಿಗೂ ಸರ್ಕಾರಿ ನೌಕರಿ ಸಿಗಬೇಕು. ಕನ್ನಡ ಅನ್ನ ಕೊಡುವ ಭಾಷೆಯಾಗಿ ಬೆಳೆಯಬೇಕು’ ಎಂದು ಗಡಿ ಪ್ರಾಧಿಕಾರದ ಸದಸ್ಯ ಭಗತರಾಜ ನಿಜಾಮಕಾರಿ ಹೇಳುತ್ತಾರೆ.

ಶಾಲೆಗಳ ಜಾಗ ಅತಿಕ್ರಮಣ

ರಾಯಚೂರು ಜಿಲ್ಲೆ ಶೈಕ್ಷಣಿಕವಾಗಿ ನಿರ್ಲಕ್ಷಿಸಲ್ಪಟ್ಟಿದೆ. ಸರ್ಕಾರಿ ಶಾಲೆಗಳ ಜಾಗವನ್ನೇ ಅತಿಕ್ರಮಣ ಮಾಡಿಕೊಂಡ ಅನೇಕ ನಿದರ್ಶನಗಳು ಇಲ್ಲಿವೆ. ಅದಕ್ಕೆ ಸ್ಥಳೀಯ ರಾಯಕಾರಣಿಗಳೇ ಪ್ರೋತ್ಸಾಹ ನೀಡುತ್ತಿದ್ದಾರೆ.

ಸ್ಥಳೀಯ ಶಾಸಕರ ನಿಧಿಯಿಂದ ಶಾಲಾಭಿವೃದ್ಧಿಗೆ ಅನುದಾನವೂ ದೊರೆಯುತ್ತಿಲ್ಲ. ಶಾಸಕರೇ ಸರ್ಕಾರಿ ಶಾಲೆಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಮುಖ್ಯಶಿಕ್ಷಕರು ಶಾಸಕರಿಗೆ ಮನವಿಪತ್ರಕೊಟ್ಟರೂ ಸ್ಪಂದಿಸುತ್ತಿಲ್ಲ. ಮತಗಳ ಮೇಲೆ ಕಣ್ಣಿಟ್ಟು ಕೇವಲ ಸಮುದಾಯ ಭವನಕ್ಕೆ ಹಣ ನೀಡುತ್ತಿದ್ದಾರೆ.

‘ಶೈಕ್ಷಣಿಕ ಗುಣಮಟ್ಟ ಸುಧಾರಿಸಬೇಕು ಎನ್ನುವ ಆಸಕ್ತಿಯೂ ಅಧಿಕಾರಿಗಳಲ್ಲಿ ಇಲ್ಲ. ಜಿಲ್ಲಾ ಪಂಚಾಯಿತಿಯೇ ಇಲ್ಲಿ ನಿಷ್ಕ್ರೀಯವಾಗಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒಗಳು ರಾಜಕಾರಣಿಗಳ ಕೈಗೊಂಬೆಯಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಕಲಬುರಗಿ ಬಿಟ್ಟು ಇಲ್ಲಿ ಬರುವುದು ಬಹಳ ವಿರಳ. ಅವರಿಗೆ ಶೈಕ್ಷಣಿಕ ಪ್ರಗತಿಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಅನೇಕ ವರ್ಷಗಳಿಂದ ಶಾಲಾ ಕಟ್ಟಡ ಸುಣ್ಣಬಣ್ಣ ಕಂಡಿಲ್ಲ. ಅನೇಕ ಶಾಲೆಗಳಲ್ಲಿ ಕಲಿಕಾ ವಾತಾವರಣವೇ ಕಾಣ ಸಿಗುವುದಿಲ್ಲ ಎಂದು ವಿದ್ಯಾರ್ಥಿಗಳ ಪಾಲಕರೇ ಹೇಳುತ್ತಾರೆ.

‘ಇಂದು ಅಂತರ್ಜಾಲ ಸೌಲಭ್ಯಗಳಿದ್ದರೂ ಹಿರಿಯ ಅಧಿಕಾರಿಗಳ ಬಳಿ ಸರಿಯಾದ ಮಾಹಿತಿಯೇ ಲಭ್ಯವಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳು ಕೇಸ್‌ವರ್ಕರ್‌ಗಳನ್ನೇ ಅವಲಂಬಿಸಿದ್ದಾರೆ. ರಾಯಚೂರು ಜಿಲ್ಲೆಯ ಅಧಿಕಾರಿಗಳ ಬೆರಳ ತುದಿಯಲ್ಲಿ ಮಾಹಿತಿ ದೊರೆಯುವುದು ಆಶ್ಚರ್ಯವೇ ಸರಿ‘ ಎಂದು ಜನ ಸೇವಾ ಪೌಂಡೇಷನ್ ಅಧ್ಯಕ್ಷ ಜಾವಿದ್‌ ಖಾನ್ ಬೇಸರ ವ್ಯಕ್ತಪಡಿಸುತ್ತಾರೆ.

ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿನ ಶಾಲೆಗಳಲ್ಲಿ ಗ್ರಂಥಾಲಯಗಳ ವ್ಯವಸ್ಥೆ ಭಿನ್ನವಾಗಿಲ್ಲ. ಕರ್ನಾಟಕದ ಪ್ರೌಢಶಾಲೆಗಳಲ್ಲಿ ಗ್ರಂಥಾಲಯಗಳು ಈಚೆಗೆ ನಿರ್ಮಾಣವಾಗಿವೆ.

ಶೇಕಡ 50ರಷ್ಟು ಶಿಕ್ಷಕರೇ ಇಲ್ಲ

ರಾಯಚೂರು ಜಿಲ್ಲೆಯಲ್ಲಿ 8486 ಮಂಜೂರಾದ ಶಿಕ್ಷಕರ ಹುದ್ದೆಗಳು ಇವೆ. ಪ್ರಸ್ತುತ 4,200 ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. 3744 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಜಿಲ್ಲೆಯ 858 ಪ್ರೌಢ ಶಾಲೆಗಳಲ್ಲಿ 2200 ಪ್ರೌಢ ಶಾಲಾ ಶಿಕ್ಷಕರ ಹುದ್ದೆಗಳಿವೆ. ಇದರಲ್ಲಿ 1200 ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಎಂದು ಡಿಡಿಪಿಐ ಕೆ.ಡಿ.ಬಡಿಗೇರ ಹೇಳುತ್ತಾರೆ.

ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳ 6616 ಕೊಠಡಿಗಳು ಮಾತ್ರ ಉತ್ತಮ ಸ್ಥಿತಿಯಲ್ಲಿವೆ. 836 ಕೊಠಡಿಗಳು ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿವೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಳೆದ ವರ್ಷವೇ ಲಿಖಿತ ಮಾಹಿತಿ ಕೊಟ್ಟಿದ್ದಾರೆ. ಆದರೆ, ಸಚಿವರೂ ಗಂಭೀರವಾಗಿಲ್ಲ.

ರಾಯಚೂರು ಜಿಲ್ಲೆಯಲ್ಲಿ 230 ಸರ್ಕಾರಿ ಪ್ರೌಢ ಶಾಲೆಗಳಿವೆ. 62,529 ಮಕ್ಕಳು ಓದುತ್ತಿದ್ದಾರೆ. ಪ್ರೌಢ ಶಾಲೆಯ 2123 ಕೊಠಡಿಗಳು ಮಾತ್ರ ಸುಸ್ಥಿತಿಯಲ್ಲಿ ಇವೆ. 222 ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಪ್ರೌಢಶಾಲೆಯಲ್ಲಿ 2415 ಮಂಜೂರಾತಿ ಶಿಕ್ಷಕರ ಮಂಜೂರಾತಿ ಹುದ್ದೆಗಳಿವೆ. 1369 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 1046 ಶಿಕ್ಷಕರ ಹುದ್ದೆಗಳು ಖಾಲಿ ಇವೆ.


ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಗಳು

ತಾಲ್ಲೂಕು – ಪ್ರಾಥಮಿಕ– ಪ್ರೌಢ ಶಾಲೆ

1. ದೇವದುರ್ಗ – 317– 34

2. ಲಿಂಗಸುಗೂರು– 315–48

3. ಮಾನ್ವಿ– 274–43

4. ರಾಯಚೂರು– 260–54

5. ಸಿಂಧನೂರು– 282–48

ಒಟ್ಟು– 1448–227

ತೆಲಂಗಾಣದ ನಾರಾಯಣಪೇಟೆ ಜಿಲ್ಲೆ ಕೃಷ್ಣಾ ಮಂಡಲದ ವಿವಿಧ ಗ್ರಾಮಗಳಿಂದ ಆಟೊದಲ್ಲಿ ಶಾಲೆಗೆ ಬಂದ ಮಕ್ಕಳು
ತೆಲಂಗಾಣದ ನಾರಾಯಣಪೇಟೆ ಜಿಲ್ಲೆ  ಕೃಷ್ಣಾ ಗ್ರಾಮದ ಪ್ರಾಥಮಿಕ ಶಾಲೆಗೆ ಬಂದ ವಿದ್ಯಾರ್ಥಿಗಳ ಡಿಜಿಟಲ್‌ ಹಾಜರಾತಿ ಪಡೆಯುತ್ತಿರುವ ಶಿಕ್ಷಕಿ
ತೆಲಂಗಾಣದ ನಾರಾಯಣಪೇಟೆ ಜಿಲ್ಲೆ ಕೃಷ್ಣಾ ಮಂಡಲದ ಕೃಷ್ಣಾ ತಂಗಡಗಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು
ತೆಲಂಗಾಣ ಸರ್ಕಾರ ಅಲ್ಲಿನ ಕನ್ನಡ ಶಾಲೆಗೆ ಮುದ್ರಿಸಿಕೊಟ್ಟಿರುವ ಕನ್ನಡದ ಪುಸ್ತಕಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.