ADVERTISEMENT

ಎಲ್ಲೆಂದರಲ್ಲಿ ಕಸ, ಮದ್ಯದ ಬಾಟಲಿ..ಜಿಲ್ಲಾ ಕ್ರೀಡಾಂಗಣ: ಇದು ಅವ್ಯವಸ್ಥೆಯ ಅಂಗಣ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 6:08 IST
Last Updated 3 ಮಾರ್ಚ್ 2026, 6:08 IST
ರಾಯಚೂರಿನ ಜಿಲ್ಲಾ ಕ್ರೀಡಾಂಗಣದ ಹೊರನೋಟ
ರಾಯಚೂರಿನ ಜಿಲ್ಲಾ ಕ್ರೀಡಾಂಗಣದ ಹೊರನೋಟ   

ರಾಯಚೂರು: ಇಲ್ಲಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಅಗತ್ಯ ಮೂಲ ಸೌಕರ್ಯಗಳಿಲ್ಲದೆ ಕ್ರೀಡಾಪಟುಗಳು ಪರದಾಡುವಂತಾಗಿದೆ.

ಕ್ರೀಡಾಂಗಣ ಉದ್ಘಾಟನೆಯಾದಾಗ ಅರೆಬರೆ ಕಾಮಗಾರಿ ಮಾಡಲಾಗಿತ್ತು. ಬಳಿಕ ಕಾಮಗಾರಿ ಆರಂಭಿಸಿ ದರೂ ಇದುವರೆಗೂ ಪೂರ್ಣಗೊಂಡಿಲ್ಲ. ಕಾರಣ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸಿದ್ದರೂ ಉಪಯೋಗಕ್ಕೆ ಬಾರದಂತಾಗಿದೆ.

ಕ್ರೀಡಾಂಗಣದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಮಳೆ ಬಂದರೆ ನೀರು ಹೊರಗಡೆ ಹೋಗಲು ಸೂಕ್ತ ವ್ಯವಸ್ಥೆ ಇಲ್ಲ. ಸಿಂಥೆಟಿಕ್ ಟ್ರ್ಯಾಕ್ ಇಲ್ಲ. ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಮಾತ್ರ ಶೌಚಾಲಯ ವ್ಯವಸ್ಥೆ ಇದೆ. ಸಾರ್ವಜನಿಕರಿಗೆ ಶೌಚಾಲಯ ಇದ್ದರೂ ಅದಕ್ಕೆ ಬೀಗ ಹಾಕಲಾಗಿದೆ. ಆದ್ದರಿಂದ ಸಾರ್ವಜನಿಕರು, ಕ್ರೀಡಾಪಟುಗಳಿಗೆ ಶೌಚಕ್ಕೆ ಇಲ್ಲಿ ಬಯಲೇ ಗತಿ. 

ADVERTISEMENT

ಕ್ರೀಡಾಂಗಣದಲ್ಲಿ ಕಸ, ಪ್ಲಾಸ್ಟಿಕ್ ತ್ಯಾಜ್ಯ ತುಂಬಿಕೊಂಡಿದೆ. ರಾತ್ರಿ ವೇಳೆ ಕುಡುಕರ ಅಡ್ಡವಾಗುತ್ತಿದೆ. ಕ್ರೀಡಾಂಗಣದ ಸುತ್ತಮುತ್ತ ಮದ್ಯದ ಬಾಟಲಿಗಳನ್ನು ಎಸೆಯಲಾಗುತ್ತಿದೆ. ಇದರಿಂದ ಸ್ವಚ್ಛತೆ ಮರೀಚಿಕೆಯಾಗಿದೆ.

ಕ್ರೀಡಾಪಟುಗಳಿಗೆ ನಿಗದಿತ ಅವಧಿಯಲ್ಲಿ ಮಾತ್ರ ಒಳಾಂ‌ಗಣ ಕ್ರೀಡಾಂಗಣ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಇದರಿಂದ ಉಳಿದ ಸಮಯದಲ್ಲಿ ಅಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. 

ಕುಡಿಯುವ ನೀರಿಲ್ಲ: ಕ್ರೀಡಾಂಗಣದಲ್ಲಿ ಪ್ರತಿದಿನ ಕ್ರೀಡಾಪಟುಗಳು ಅಭ್ಯಾಸ ಮಾಡುತ್ತಾರೆ. ಒಂದು ವೇಳೆ ಬಾಯಾರಿಕೆಯಾದರೆ ಇಲ್ಲಿ ಕುಡಿಯುವ ನೀರೂ ಸಿಗುವುದಿಲ್ಲ. ಹಾಗಾಗಿ ಅನೇಕರು ನೀರಿನ ಬಾಟಲಿಗಳನ್ನು ತರುತ್ತಾರೆ. 

ವಿವಿಧ ಇಲಾಖೆಗಳು ಇಲ್ಲಿಯೇ ಕ್ರೀಡಾಕೂಟ ಆಯೋಜನೆ ಮಾಡುತ್ತವೆ. ಆದರೂ ಅಭಿವೃದ್ಧಿ ಹಾಗೂ ಸ್ವಚ್ಛತೆ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಕ್ರೀಡಾಪಟುಗಳು ದೂರಿದ್ದಾರೆ.

ಶೌಚಾಲಯಗಳ ದುಸ್ಥಿತಿ
ಮಹಾನಗರ ಪಾಲಿಕೆಯಿಂದ ಮೂರು ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ. ಶೀಘ್ರವೇ ಹಸ್ತಾಂತರ ಮಾಡಲಾಗುತ್ತದೆ. ಸ್ವಚ್ಛತೆ ಕಾಪಾಡಲು ಸಾರ್ವಜನಿಕರು ಸಹಕಾರ ನೀಡಬೇಕು
ಈರೇಶ ನಾಯಕ, ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ
ಕ್ರೀಡೆಯಲ್ಲಿ ಸಾಕಷ್ಟು ಸಾಧನೆ ಮಾಡುವ ಗುರಿ ಹೊಂದಿದ್ದರೂ ಸಮರ್ಪಕ ಸೌಲಭ್ಯವಿಲ್ಲದ ಕಾರಣ ಕ್ರೀಡಾಪಟುಗಳು ಗುರಿಯಿಂದ ಹಿಂದೆ ಸರಿಯುವಂತಾಗಿದೆ
ಕಮಲಾಕ್ಷಿ ತೀರ್ಥಬಾವಿ, ಕ್ರೀಡಾಪಟು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.