
ರಾಯಚೂರು: ಸಂಕ್ರಾಂತಿ ಪ್ರಯುಕ್ತ ಜಿಲ್ಲೆಯ ಕೃಷ್ಣಾ ನದಿ ತಟದ ಗ್ರಾಮಸ್ಥರು ಹಾಗೂ ಪಟ್ಟಣ ಪ್ರದೇಶದ ಜನ ನದಿಯಲ್ಲಿ ಪುಣ್ಯಸ್ನಾನ ಮಾಡಿದರು.
ಶಕ್ತಿನಗರ ಸಮೀಪದ ಕೃಷ್ಣಾ ನದಿಯಲ್ಲಿ ಸ್ವಲ್ಪ ಮಟ್ಟಿಗೆ ನೀರು ಇರುವ ಮಾಹಿತಿ ಪಡೆದ ಅನೇಕ ಜನ ಖಾಸಗಿ ವಾಹನಗಳಲ್ಲಿ ತೆರಳಿ ಪುಣ್ಯಸ್ನಾನ ಮಾಡಿದರು. ಮಾನ್ವಿ, ಲಿಂಗಸುಗೂರು ಹಾಗೂ ಸಿಂಧನೂರಿನಲ್ಲಿ ನದಿ ಬತ್ತಿರುವ ಕಾರಣ ಬಹುತೇಕ ಜನ ಮನೆಗಳಲ್ಲೇ ಸ್ನಾನ ಮಾಡಿದರು.
ಸೂರ್ಯ ಪಥ ಬದಲಿಸುವ ಸಂದರ್ಭದಲ್ಲಿ ಆಚರಿಸಲಾಗುವ ಈ ಹಬ್ಬದಲ್ಲಿ ಭೂಮಾತೆ, ಫಸಲಿಗೆ ಹಾಗೂ ಜಾನುವಾರುಗಳಿಗೆ ಪೂಜೆ ಸಲ್ಲಿಸಿದರು.
ಬಂಧುಗಳು ಹಾಗೂ ಕುಟುಂಬದ ಸದಸ್ಯರೊಂದಿಗೆ ನದಿ ದಂಡೆಗಳಲ್ಲಿ ಕುಳಿತು ಸಾಮೂಹಿಕವಾಗಿ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಚಪಾತಿ, ಬದನೆಕಾಯಿ ಪಲ್ಯ, ಮೊಸರು ಹಾಗೂ ಶೇಂಗಾ ಚಟ್ನಿ ಸವಿದರು.
ರಂಗೋಲಿ ಚಿತ್ತಾರ: ನಗರ, ಪಟ್ಟಣ ಪ್ರದೇಶಗಳಲ್ಲಿ ಮಹಿಳೆಯರು ಬೆಳಿಗ್ಗೆ ಸಗಣಿಯಿಂದ ಅಂಗಳ ಸಾರಿಸಿ ದೊಡ್ಡ ಪ್ರಮಾಣದಲ್ಲಿ ರಂಗೋಲಿ ಬಿಡಿಸಿದ್ದರು. ಕಬ್ಬು, ಬೆಲ್ಲ ಹಾಗೂ ಮೊಸರು ಗಡಿಗೆ ಚಿತ್ರ ಮೂಡಿಸಿ ಗಮನ ಸೆಳೆದರು.
ಆಂಧ್ರಪ್ರದೇಶ ಮೂಲದವರು ಮನೆಗಳ ಮುಂದೆ ಆಕರ್ಷಕ ರಂಗೋಲಿ ಬಿಡಿಸಿದ್ದರು. ಮನೆಗಳಲ್ಲಿ ವಿವಿಧ ತರಕಾರಿಗಳಿಂದ ಸಿದ್ಧಪಡಿಸಿದ ಖಾದ್ಯಗಳನ್ನು ಕುಟುಂಬ ಸದಸ್ಯರೊಂದಿಗೆ ಸೇವಿಸಿದರು. ಬಂಧು ಬಳಗದವರಿಗೂ ಆಹ್ವಾನ ನೀಡಿದ್ದರು.
ಮಹಿಳೆಯರ ಸಿಂಗಾರ: ಹೊಸ ಸೀರೆ ತೊಟ್ಟು ಆಭರಣತೊಟ್ಟು ಸಿಂಗಾರ ಮಾಡಿಕೊಂಡು ಮಹಿಳೆಯರು ಮನೆ ಮನೆಗೆ ತೆರಳಿ ಎಳ್ಳು–ಬೆಲ್ಲ ಕೊಟ್ಟು ಶುಭ ಕೋರಿದರು. ಮಕ್ಕಳು ಸಹ ಆಕರ್ಷಕ ಡಬ್ಬಿಗಳಲ್ಲಿ ಎಳ್ಳು–ಬೆಲ್ಲ ತುಂಬಿಕೊಂಡು ಮನೆ ಮನೆಗೆ ಹೋಗಿ ಎಳ್ಳು–ಬೆಲ್ಲ ಹಂಚಿದರು.
ನಗರದ ದೇವಸ್ಥಾನಗಳಿಗೂ ಭೇಟಿ ಕೊಟ್ಟು ದೇವರ ದರ್ಶನ ಪಡೆದರು.
ದೇವರಿಗೆ ಎಳ್ಳು–ಬೆಲ್ಲ ಸಮರ್ಪಿಸಿದರು. ನಗರದ ಚಂದ್ರಮೌಳೇಶ್ವರ ದೇವಸ್ಥಾನ ಹಾಗೂ ವಿಷ್ಣು ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿತ್ತು.
ತರಹೇವಾರಿ ಊಟ
ಸಿರವಾರ: ತಾಲ್ಲೂಕಿನಾದ್ಯಂತ ಸೋಮವಾರ ಸಂಭ್ರಮದಿಂದ ಸಂಕ್ರಾಂತಿ ಆಚರಿಸಲಾಯಿತು.
ಸಮೀಪದಲ್ಲಿ ನದಿಗಳಿಲ್ಲದ ಕಾರಣ ಕೆಲವರು ದೇವದುರ್ಗ ತಾಲ್ಲೂಕಿನ ಗೂಗಲ್‌ಗೆ ತೆರಳಿ ಕೃಷ್ಣಾ ನದಿಯಲ್ಲಿ, ಇನ್ನೂ ಕೆಲವರು ಮಾನ್ವಿ ತಾಲ್ಲೂಕಿನ ಗ್ರಾಮಗಳು ಹಾಗೂ ಮಂತ್ರಾಲಯಕ್ಕೆ ತೆರಳಿ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿದರು.
ಸಂಕ್ರಾಂತಿಯ ವಿಶೇಷವಾದ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಪುಂಡ್ಯ ಪಲ್ಯ, ಬದನೆಕಾಯಿ, ಭರ್ತ, ಶೇಂಗಾ ಹೋಳಿಗೆ, ಎಳ್ಳಿನ ಹೋಳಿಗೆ ಸೇರಿ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿಕೊಂಡು ಹೋಗಿ ನದಿಯಲ್ಲಿ ಪುಣ್ಯಸ್ನಾನ ಮಾಡಿದ ನಂತರ ಸವಿದರು.
ಮನೆ ಮುಂದೆ ರಂಗೋಲಿ ಅಲಂಕಾರ: ಪ್ರತಿ ಮನೆ ಮುಂದೆ ರಂಗೋಲಿಯಲ್ಲಿ ರೈತ, ಎತ್ತಿನ ಬಂಡಿ, ರೈತ ಬೆಳೆದ ಬೆಳೆಗಳ ಚಿತ್ರಗಳನ್ನು ಬಿಡಿಸಿ ಅದರಲ್ಲಿ ಆಕಳ ಸಗಣಿಯಿಂದ ಗೊದ್ದೆಮ್ಮ ಮಾಡಿ ಸಜ್ಜೆ, ಜೋಳ, ಅಕ್ಕಿ, ಗೆಜ್ಜರಿ ಹಾಗೂ ಬಾರೆಹಣ್ಣು ತುಂಬಲಾಯಿತು.
ಕೃಷ್ಣೆಯಲ್ಲಿ ಮಿಂದ ಜನ
ಶಕ್ತಿನಗರ: ಸಂಕ್ರಾಂತಿ ಅಂಗವಾಗಿ ಇಲ್ಲಿನ ಕೃಷ್ಣಾ ನದಿಯಲ್ಲಿ ಭಕ್ತರು ಸೋಮವಾರ ಪುಣ್ಯಸ್ನಾನ ಮಾಡಿದರು.
ಪ್ರೇಕ್ಷಣೀಯ ಸ್ಥಳಗಳಿಗೆ ಕುಟುಂಬ ಸಮೇತರಾಗಿ ತೆರಳಿ ಕೃಷ್ಣೆಯಲ್ಲಿ ಮಿಂದು ದೇವರಿಗೆ ಪೂಜೆ ಸಲ್ಲಿಸಿದರು.
ಬಳಿಕ ನದಿ ದಡದಲ್ಲಿ ಕುಳಿತುಕೊಂಡು ಸಜ್ಜೆ ರೊಟ್ಟಿ, ಎಳ್ಳು, ಶೇಂಗಾ ಹೋಳಿಗೆ, ಭರ್ತ (ತರಕಾರಿ ಖಾದ್ಯ), ಎಣ್ಣೆ ಬದನೆಕಾಯಿ, ಚಿತ್ರಾನ್ನ ಹಾಗೂ ಮೊಸರನ್ನ ಸೇರಿದಂತೆ ಭಕ್ಷ್ಯ ಭೋಜನ ಸವಿದರು.
ಕುರುವಪುರ, ನಾರದಗಡ್ಡೆ, ದೇವಸೂಗೂರಿನ ಸೂಗೂರೇಶ್ವರ ಸ್ವಾಮಿ ದೇಗುಲ ಸೇರಿ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಎಳ್ಳು–ಬೆಲ್ಲ ವಿನಿಮಯ
ಸಿಂಧನೂರು: ತಾಲ್ಲೂಕಿನಾದ್ಯಂತ ಸಂಕ್ರಾಂತಿ ಪ್ರಯುಕ್ತ ಜನರು ನದಿಗಳಿಗೆ ತೆರಳಿ ಪುಣ್ಯಸ್ನಾನ ಮಾಡಿದರು.
ಜನರು ತುಂಗಭದ್ರಾ ಹಾಗೂ ಕೃಷ್ಣಾ ನದಿಗಳಿಗೆ ತೆರಳಿ ಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸಿದರು.
ತಾಲ್ಲೂಕಿನ ಮುಕ್ಕುಂದಾ, ವಳಬಳ್ಳಾರಿ, ಸಿರುಗುಪ್ಪ ಹತ್ತಿರದ ಕೆಂಚನಗುಡ್ಡ, ದಢೇಸೂಗೂರು ಗ್ರಾಮಗಳ ಬಳಿಯ ತುಂಗಭದ್ರಾ ನದಿಯಲ್ಲಿ ಎಣ್ಣೆ ಹಾಗೂ ಎಳ್ಳು ಹಚ್ಚಿಕೊಂಡು ಸ್ನಾನ ಮಾಡಿದರು.
ಉಪ್ಪಾರವಾಡಿ, ಬ್ರಾಹ್ಮಣರ ಓಣಿ, ಸುಕಾಲಪೇಟೆ, ಪ್ರಶಾಂತ ನಗರ, ಪಟೇಲವಾಡಿ, ನಟರಾಜ ಕಾಲೊನಿ, ಇಂದಿರಾನಗರ, ಕೋಟೆ, ಜನತಾ ಕಾಲೊನಿ, ಆದರ್ಶ ಕಾಲೊನಿ, ಅಂಬೇಡ್ಕರ್ ನಗರ ಹಾಗೂ ಮತ್ತಿತರ ಕಡೆಗಳಲ್ಲಿ ಮಕ್ಕಳು ಸಂಜೆ ಮನೆ ಮನೆಗೆ ತೆರಳಿ ಎಳ್ಳು–ಬೆಲ್ಲ ತಿಂದು ಒಳ್ಳೆ ಮಾತಾಡಿ ಎಂದು ಹೇಳಿ ಎಳ್ಳು–ಬೆಲ್ಲ ವಿನಿಮಯ ಮಾಡಿಕೊಂಡರು.
ವಿವಿಧ ಬಡಾವಣೆಗಳಲ್ಲಿ ಮಹಿಳೆಯರು ತಮ್ಮ ಮನೆಗಳ ಮುಂದೆ ವೈವಿಧ್ಯಮಯ ರಂಗೋಲಿ ಬಿಡಿಸಿ ಸಂಭ್ರಮಿಸಿದರು.
‘ಸಂಕ್ರಾಂತಿಯು ಅನ್ನದಾತನಿಗೆ ಸುಗ್ಗಿ ಕಾಲವಾಗಿದೆ. ರೈತನಿಗೆ ಬೆಳೆ ಬೆಳೆಯಲು ಶಕ್ತಿ ಕೊಟ್ಟು ಫಸಲು ನೀಡಿದ ಭೂ ತಾಯಿಗೆ ವಂದಿಸುವ ಸಮಯ. ಈ ಹಬ್ಬ ಗ್ರಾಮೀಣ ಭಾಗದ ಸೊಗಡನ್ನು ಹೆಚ್ಚಿಸುತ್ತದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷೆ ಸರಸ್ವತಿ ಪಾಟೀಲ ಹೇಳುತ್ತಾರೆ.
ಗ್ರಾಮೀಣ ಪ್ರದೇಶಗಳಾದ ಗಾಂಧಿನಗರದ ಶಿವಾಲಯ, ಅಂಬಾದೇವಿ ದೇವಸ್ಥಾನ, ಸೋಮನಾಥಪುರಗಳಿಗೆ ತೆರಳಿ ರೈತರು ವಿಶೇಷ ಪೂಜೆ ಸಲ್ಲಿಸಿದರು. ಹಾಗೆಯೇ ಅಮರಾಪುರ, ಗುಂಜಳ್ಳಿ, ಬಳಗಾನೂರು, ದಿದ್ದಿಗಿ ಹಾಗೂ ಮತ್ತಿತರ ಗ್ರಾಮಗಳಲ್ಲಿಯೂ ಮಕರ ಸಂಕ್ರಾಂತಿ ಆಚರಿಸಲಾಯಿತು.
ವನ ಭೋಜನ ಸಂಭ್ರಮ
ಕವಿತಾಳ: ಪಟ್ಟಣದಲ್ಲಿ ಮಕರ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಸಮೀಪದ ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ನಿಲ್ಲಿಸಿದ ಕಾರಣ ಪುಣ್ಯಸ್ನಾನ ಮಾಡಲು ಪ್ರತಿವರ್ಷ ಕಾಲುವೆಗೆ ಹೋಗುತ್ತಿದ್ದ ಯುವಕರು ಬೇಸರ ವ್ಯಕ್ತಪಡಿಸಿದರು.
ಹತ್ತಿರದಲ್ಲಿ ನದಿಗಳಿಲ್ಲದ ಕಾರಣ ಮನೆಯಲ್ಲಿ ಸ್ನಾನ ಮುಗಿಸಿದ ಮಹಿಳೆಯರು ಮಕ್ಕಳು ಸಜ್ಜೆ ರೊಟ್ಟಿ ಭರ್ತ ಹಸಿ ಮೆಣಸಿನಕಾಯಿ ಚಟ್ನಿ ಶೇಂಗಾ ಹೋಳಿಗೆ ಎಳ್ಳಿನ ಹೋಳಿಗೆ ಚಿತ್ರಾನ್ನ ಮೊಸರನ್ನ ಸೇರಿದಂತೆ ತಿಂಡಿಗಳನ್ನು ಬುತ್ತಿ ಕಟ್ಟಿಕೊಂಡು ಸಮೀಪದ ಕಡ್ಡೋಣಿ ತಿಮ್ಮಾಪುರ ಅರಣ್ಯ ಇಲಾಖೆ ನರ್ಸರಿಗೆ ಹೋಗಿ ಭೋಜನ ಸವಿಯುತ್ತಿರುವುದು ಕಂಡು ಬಂತು. ‘ಪ್ರತಿವರ್ಷ ಸಂಕ್ರಾಂತಿ ಹಬ್ಬದಂದು ಇಲ್ಲಿಗೆ ಬಂದು ಊಟ ಮಾಡುತ್ತೇವೆ. ಹಸಿರು ಪರಿಸರದಲ್ಲಿ ಗೆಳತಿಯರು ಮಕ್ಕಳೊಂದಿಗೆ ಒಟ್ಟಿಗೆ ಕುಳಿತು ಪರಸ್ಪರ ಮಾತನಾಡಿಕೊಂಡು ಊಟ ಮಾಡುವುದು ಖುಷಿ ತರುತ್ತದೆ’ ಎಂದು ಶೈಲಜಾ ಭಾವಿಕಟ್ಟಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.