ADVERTISEMENT

ಅಂಗವಿಕಲರಿಗೆ ಅನುಕೂಲ ಮಾಡುವುದೇ ಇಲಾಖೆ ಗುರಿ: ಕಲ್ಯಾಣಾಧಿಕಾರಿ ಶರಣಪ್ಪ

ಯಂತ್ರಚಾಲಿತ ತ್ರಿಚಕ್ರವಾಹನ ನೀಡಲು ಎರಡು ಕಾಲುಗಳಿಲ್ಲದವರಿಗೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 14:44 IST
Last Updated 27 ಸೆಪ್ಟೆಂಬರ್ 2022, 14:44 IST
ಶರಣಪ್ಪ
ಶರಣಪ್ಪ   

ರಾಯಚೂರು: ನಗರದಲ್ಲಿ ಮಂಳವಾರ ಆಯೋಜಿಸಿದ್ದ ‘ಪ್ರಜಾವಾಣಿ’ ಫೋನ್‌ ಇನ್‌ ನೇರ ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶರಣಪ್ಪ ಅವರು ಅಂಗವಿಕಲರ ಕಲ್ಯಾಣ ಇಲಾಖೆಯಲ್ಲಿ ಲಭ್ಯವಿರುವ ವಿವಿಧ ಯೋಜನೆಗಳ ಪ್ರಯೋಜನ ಹೇಗೆ ಪಡೆದುಕೊಳ್ಳಬೇಕು ಎಂಬುದನ್ನು ಅಂಗವಿಕಲರಿಗೆ ಮತ್ತು ಅವರ ಸಂಬಂಧಿಗಳಿಗೆ ಮಾಹಿತಿ ನೀಡಿದರು. ಜಿಲ್ಲೆಯ ವಿವಿಧೆಡೆಯಿಂದ ಕರೆ ಮಾಡಿದ್ದ ಅಂಗವಿಕಲರಿಗೆ ಸಮಾಧಾನದಿಂದ ಉತ್ತರಿಸಿದರು.

* ಆಲ್ದಾಳ ಸುಲ್ತಾನ್ (ಜಾನೆಕಲ್‌): ಇಬ್ಬರು ಬುದ್ಧಿಮಾಂದ್ಯ ಮಕ್ಕಳಿದ್ದಾರೆ. ಅವರಿಗೆ ಇಲಾಖೆಯಿಂದ ಏನು ಅನುಕೂಲಗಳಿವೆ? ವೈದ್ಯಕೀಯ ವೆಚ್ಚ ಪಡೆದುಕೊಳ್ಳಬಹುದೆ?

– ನಮ್ಮಲ್ಲಿ ಬುದ್ಧಿಮಾಂದ್ಯ ಮಕ್ಕಳಿಗಾಗಿ ವಿಶೇಷ ಶಾಲೆಗಳಿವೆ, ವಸತಿ ಶಾಲೆಗಳು ಕೂಡಾ ಇವೆ. ಮಕ್ಕಳ ಆರೈಕೆಗಿಂತಲೂ, ಅವರಿಗೆ ಫಿಜಿಯೋಥೆರಪಿ ಮಾಡಬೇಕಾದ ಅಗತ್ಯ ಇರುತ್ತದೆ. ಹೀಗಾಗಿ ವಿಶೇಷ ಶಾಲೆಗಳಿಗೆ ಸೇರಿಸುವುದು ಮುಖ್ಯ. ‘ನಿರಾಮಯ’ ವಿಮಾ ಯೋಜನೆಯಡಿ ಬುದ್ಧಿಮಾಂದ್ಯ ಮಕ್ಕಳಿಗೆ ವರ್ಷಕ್ಕೆ ₹1 ಲಕ್ಷದವರೆಗೂ ವೈದ್ಯಕೀಯ ವೆಚ್ಚ ಭರಿಸಲಾಗುವುದು. ತಾಲ್ಲೂಕು ಮಟ್ಟದಲ್ಲಿ ಎಂಆರ್‌ಡಬ್ಲು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಆರ್‌ಡಬ್ಲುಗಳನ್ನು ನೇಮಿಸಿದ್ದು, ಅವರಿಂದ ಮಾಹಿತಿ ಪಡೆಯಬಹುದು. ನೇರವಾಗಿ ಇಲಾಖೆಗೆ ಬಂದರೆ, ನಿಮ್ಮ ಮಕ್ಕಳನ್ನು ಶಾಲೆಗೆ ಸೇರ್ಪಡೆಗೊಳಿಸಿ ಈ ಯೋಜನೆ ಲಾಭ ದೊರೆಕಿಸಲಾಗುವುದು. ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿದ್ದಕ್ಕೆ ಮಾತ್ರ ವೆಚ್ಚ ಭರಿಸಲು ಅವಕಾಶವಿದೆ.

ADVERTISEMENT

* ಯಲ್ಲಪ್ಪ, ದೇವದುರ್ಗ: ಬಸ್‌ ಮತ್ತು ರೈಲ್ವೆ ಪಾಸ್‌ಗಳನ್ನು ಪಡೆದುಕೊಳ್ಳುವುದು ಹೇಗೆ? ಅಂಗವಿಕಲರ ಸಲಕರಣೆಗಳು ಕೊಡಲಾಗುತ್ತಿದೆಯೇ?

– ಬಸ್‌ಪಾಸ್‌ ಮತ್ತು ರೈಲ್ವೆಪಾಸ್‌ಗಳನ್ನು ನೇರವಾಗಿ ಹೋಗಿ ₹650 ಹಣ ಪಾವತಿಸಿ ಪಡೆದುಕೊಳ್ಳಬಹುದಾಗಿದೆ. ಅಂಧರು ಮಾತ್ರ ಇಲಾಖೆಯಿಂದ ಪತ್ರವೊಂದನ್ನು ತೆಗೆದುಕೊಂಡು ಹೋದರೆ ಸಂಪೂರ್ಣ ಉಚಿತವಾಗಿ ಪಾಸ್‌ ಕೊಡುತ್ತಾರೆ. ರಾಯಚೂರಿನವರು ಗುಂತಕಲ್‌ ರೈಲ್ವೆ ಜಂಕ್ಷನ್‌ಗೆ ಹೋದರೆ ಪಾಸ್‌ ಕೊಡುತ್ತಾರೆ. ಅಂಗವಿಕಲರಿಗೆ ಸಾಧನ, ಸಲಕರಣೆಗಳನ್ನು ಉಚಿತವಾಗಿ ಒದಗಿಸುತ್ತೇವೆ.


* ಉಸ್ಮಾನ ಪಾಷಾ ಚಕ್ರವರ್ತಿ, ಸಿಂಧನೂರು: ನಿರ್ಗತಿಕರಿಗೆ ತ್ರಿಚಕ್ರ ವಾಹನಗಳು ಸಿಗುತ್ತಿಲ್ಲ. ತಮಗೆ ಬೇಕಾದವರನ್ನೇ ಆಯ್ಕೆ ಮಾಡುತ್ತಿದ್ದಾರೆ.

– ಶಾಸಕರ ಅನುದಾನಕ್ಕೆ ಫಲಾನುಭವಿಗಳನ್ನು ಅವರೇ ಆಯ್ಕೆ ಮಾಡುತ್ತಾರೆ. ಫಲಾನುಭವಿಗಳ ಪಟ್ಟಿಯನ್ನು ನಾವೇ ಪರಿಶೀಲಿಸಿ ಕೊಟ್ಟಿರುತ್ತೇವೆ. ನಿಯಮಾನುಸಾರ ಟೆಂಡರ್‌ ಕೂಡಾ ನಾವೇ ಮಾಡುತ್ತೇವೆ. ಒಟ್ಟಾರೆ ತ್ರಿಚಕ್ರ ವಾಹನವನ್ನು ವಿಕಲಚೇತನರಿಗೇ ಕೊಡುತ್ತಾರೆ. ತೀವ್ರತರ ಸಮಸ್ಯೆ ಇದ್ದವರು ಯಾರೇ ಇದ್ದರೂ ನಮ್ಮ ಗಮನಕ್ಕೆ ತಂದರೆ, ಇಲಾಖೆಯಿಂದಲೇ ಸಹಾಯ ಮಾಡುತ್ತೇವೆ. ಅಂಥವರಿಂದ ದಯವಿಟ್ಟು ಅರ್ಜಿ ಸಲ್ಲಿಸಿ.

* ಅಯ್ಯಪ್ಪ, ಮಾನ್ವಿ: ನಾನು ಸೊಸೈಟಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದೇನೆ. ಬೆನ್ನುಮೂಳೆ ಸಮಸ್ಯೆಯಿಂದಾಗಿ ಗಾಲಿಕುರ್ಚಿಯನ್ನೇ ಅವಲಂಬಿಸಿದ್ದೇನೆ. ಡ್ಯುಟಿಗೆ ಹೋಗಿಬರಲು ಸಹಾಯಕನನ್ನು ಸರ್ಕಾರದಿಂದ ನೇಮಕ ಮಾಡಿಕೊಳ್ಳಬಹುದೆ?

– ಆ ರೀತಿ ನೇಮಕ ಮಾಡಿಕೊಳ್ಳಲು ಅವಕಾಶವಿಲ್ಲ. ಆದರೂ ನಮ್ಮ ಇಲಾಖೆಯ ನಿರ್ದೇಶಕರನ್ನು ಸಂಪರ್ಕಿಸಿ, ಹೆಚ್ಚಿನ ಮಾಹಿತಿ ಪಡೆದು, ಸಾಧ್ಯವಾದ ಸಹಾಯ ಮಾಡುತ್ತೇನೆ. ಯಂತ್ರಚಾಲಿತ ಗಾಲಿಕುರ್ಚಿ ಒದಗಿಸುವ ಕೆಲಸ ಮಾಡುತ್ತೇನೆ. ಈ ಕುರ್ಚಿಯನ್ನು ಎಲ್ಲ ಕಡೆಗೂ ತೆಗೆದುಕೊಂಡು ಹೋಗಲು ಸಾಧ್ಯವಿದೆ. ಕಚೇರಿಯೊಂದಿಗೆ ಸಂಪರ್ಕದಲ್ಲಿ ಇರಿ.

* ಈರೇಶ, ಮಾನ್ವಿ: ಇಬ್ಬರು ಅಂಗವಿಕಲರಿದ್ದು, ಮಾಸಾಶನ ಪಡೆಯುವುದು ಹೇಗೆ? ಯಂತ್ರಚಾಲಿಕ ತ್ರಿಚಕ್ರ ವಾಹನ ದೊರೆಯುತ್ತಿಲ್ಲ.

– ಯುಡಿಐಡಿ ಕಾರ್ಡ್‌ ಮಾಡಿಸಬೇಕಾಗುತ್ತದೆ. ನಾಳೆಯೇ ಕಚೇರಿಗೆ ಕರೆದುಕೊಂಡು ಬನ್ನಿ. ರಿಮ್ಸ್‌ಗೆ ಕರೆದುಕೊಂಡು ಹೋಗಿ, ಯುಡಿಐಡಿ ಕಾರ್ಡ್‌ ಮಾಡಿಸಿಕೊಡುವ ವ್ಯವಸ್ಥೆ ಮಾಡುತ್ತೇವೆ. ಆನಂತರ ಮಾಸಾಶನ ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಬಸ್‌ ಪಾಸ್‌ ಕೂಡಾ ಮಾಡಿಕೊಳ್ಳಬಹುದು. ಯಂತ್ರಚಾಲಿತ ತ್ರಿಚಕ್ರ ವಾಹನಗಳಿಗೆ ಬಹಳಷ್ಟು ಬೇಡಿಕೆ ಇದೆ. ಸಂಪೂರ್ಣ ಕಾಲು ಇಲ್ಲದವರಿಗೆ ಆದ್ಯತೆಯಿಂದ ಆಯ್ಕೆ ಮಾಡುತ್ತೇವೆ. ಈ ವರ್ಷ ಮತ್ತೆ ಅರ್ಜಿ ಸಲ್ಲಿಸಿ. ನಿಮ್ಮ ಅರ್ಜಿ ಪರಿಗಣಿಸುತ್ತೇವೆ.


* ಶಾಂತಕುಮಾರ ಗಿಣಿವಾರ, ಸಿಂಧನೂರು: ಕಾಲು ಮಡಿಸಲು ಬರುವುದಿಲ್ಲ. ಏನಾದರೂ ಅನುಕೂಲ ಸಿಗುತ್ತದೆಯೆ?

– ಯಂತ್ರಚಾಲಿತ ತ್ರಿಚಕ್ರವಾಹನಕ್ಕೆ ಅರ್ಜಿ ಸಲ್ಲಿಸಿ, ನಿಮಗೆ ಆದ್ಯತೆಯಿಂದ ಕೊಡುವ ವ್ಯವಸ್ಥೆ ಮಾಡುತ್ತೇವೆ.

* ತಿಪ್ಪಣ್ಣ, ಆಶಿಹಾಳ ತಾಂಡಾ: ಯಂತ್ರಚಾಲಿಕ ತ್ರಿಚಕ್ರವಾಹನ ಪಡೆಯುವುದು ಹೇಗೆ? ರೈಲ್ವೆ ಪಾಸ್‌ ಎಲ್ಲಿ ಪಡೆಯಬೇಕು?

– ಶೇ 75 ರಷ್ಟು ಅಂಗವಿಕಲತೆ ಇದ್ದವರಿಗೆ ತ್ರಿಚಕ್ರವಾಹನ ಕೊಡಲಾಗುವುದು. ತಾಲ್ಲೂಕು ಮಟ್ಟದಲ್ಲಿ ಎಂಆರ್‌ಡಬ್ಲು ಅವರಿಗೆ ನಿಮ್ಮ ಅರ್ಜಿ ಮತ್ತು ದಾಖಲೆಗಳನ್ನು ಕೊಡಿ. ಅರ್ಹತೆಯನ್ನು ಪರಿಶೀಲಿಸಿ ಒದಗಿಸಲಾಗುವುದು. ಆಧಾರ್‌ ಕಾರ್ಡ್‌, ಅಂಗವಿಕಲರ ಗುರುತಿನ ಚೀಟಿ, ಹೊಸ ನಮೂನೆ ಯುಡಿಐಡಿ ಕಾರ್ಡ್‌, ಭಾವಚಿತ್ರಗಳನ್ನು ತೆಗೆದುಕೊಂಡು ಗುಂತಕಲ್‌ ಜಂಕ್ಷನ್‌ ಕಚೇರಿಗೆ ಹೋದರೆ ಉಚಿತ ಪಾಸ್‌ ಮಾಡಿಕೊಡುತ್ತಾರೆ.

* ಉರುಕುಂದ, ಮಾನ್ವಿ: ಯುಡಿಐಡಿ ಕಾರ್ಡ್‌ಗೆ ಅರ್ಜಿ ಸಲ್ಲಿಸಿದರೂ ಮಾಡಿಕೊಟ್ಟಿಲ್ಲ.

– ನೀವು ಅರ್ಜಿ ಸಲ್ಲಿಸಿರುವ ದಾಖಲೆ ಅಥವಾ ಆಧಾರ್‌ ಸಂಖ್ಯೆಯನ್ನು ನಮಗೆ ಮೊಬೈಲ್‌ ಮೂಲಕ ಕಳುಹಿಸಿ, ಕೂಡಲೇ ಪರಿಶೀಲಿಸಿ ಯುಡಿಐಡಿ ಒದಗಿಸುವ ಕೆಲಸ ಮಾಡುತ್ತೇವೆ.

* ಮರಿಸ್ವಾಮಿ, ಮದ್ಲಾಪುರ: ವಿವಾಹ ಪ್ರೋತ್ಸಾಹಧನಕ್ಕಾಗಿ 2020 ರಲ್ಲಿ ಅರ್ಜಿ ಸಲ್ಲಿಸಿದರೂ ಬಂದಿಲ್ಲ.

– ಇದುವರೆಗೂ ಅನುದಾನ ಬಂದಿರಲಿಲ್ಲ, ಹೀಗಾಗಿ ಕೊಟ್ಟಿರುವುದಿಲ್ಲ. ಎರಡನೇ ತ್ರೈಮಾಸಿಕದಲ್ಲಿ ಅನುದಾನ ಬಿಡುಗಡೆಯಾಗಲಿದ್ದು, ನಿಮಗೆ ಪ್ರೋತ್ಸಾಹಧನ ಜಮಾಗೊಳಿಸುವ ಕೆಲಸ ಮಾಡುತ್ತೇನೆ.

* ರೇಣುಕಾ, ಐನೂರ: ಅನಿಕೇತನ ಕಾಲೇಜಿನಲ್ಲಿ ಓದುತ್ತಿದ್ದು, ಕಾಲೇಜು ಶುಲ್ಕ ಕಟ್ಟಲು ಸಹಾಯಮಾಡಿ.

– ಕಾಲೇಜಿಗೆ ಶುಲ್ಕ ಕಟ್ಟುವುದಕ್ಕೆ ಶಿಷ್ಯವೇತನ ನೀಡಲಾಗುವುದು. ಕೂಡಲೇ ಅರ್ಜಿ ಸಲ್ಲಿಸಿ, ನಮ್ಮ ಇಲಾಖೆಯಿಂದ ಶಿಷ್ಯವೇತನ ಹೆಚ್ಚಿನ ಮೊತ್ತ ಸಿಗುತ್ತದೆ. ಸಿಂಧನೂರಿನಲ್ಲಿ ಎಂಆರ್‌ಡಬ್ಲು ಅವರನ್ನು ಸಂಪರ್ಕಿಸಿ. ಶಾಲೆಗೆ ಕಟ್ಟಿದ ಶುಲ್ಕ ದೃಢೀಕರಣ, ಬ್ಯಾಂಕ್‌ ಪಾಸ್‌ಬುಕ್‌, ಆಧಾರ್‌ಕಾರ್ಡ್‌, ಗುರುತಿನ ಚೀಟಿ ತೆಗೆದುಕೊಂಡು ಕೊಡಿ. ಅರ್ಜಿ ಸಲ್ಲಿಸುವುದಕ್ಕೆ ವ್ಯವಸ್ಥೆ ಮಾಡುತ್ತಾರೆ.

* ಅಮರೇಶ, ಕವಿತಾಳ: ಶಾದಿಭಾಗ್ಯ ಯೋಜನೆಯಡಿ 2019 ರಲ್ಲಿ ಅರ್ಜಿ ಸಲ್ಲಿಸಿದರೂ ಹಣ ಕೊಟ್ಟಿಲ್ಲ.

– ತಾಲ್ಲೂಕು ಎಂಆರ್‌ಡಬ್ಲು ಅವರಿಗೆ ಅರ್ಜಿ ಸಲ್ಲಿಸಿದ ದಾಖಲೆಯನ್ನು ನನಗೆ ಕಳುಹಿಸಿ. ಈ ಬಾರಿ ಬಜೆಟ್‌ ಬಂದ ತಕ್ಷಣ ಆದ್ಯತೆಯಿಂದ ಹಣ ನೀಡಲಾಗುವುದು.

* ವೆಂಕಟೇಶ, ರಾಯಚೂರು: ಮಾಸಾಶನಕ್ಕಾಗಿ ಎಲ್ಲಿ ಅರ್ಜಿ ಸಲ್ಲಿಸಬೇಕು?

– ಬ್ಯಾಂಕ್‌ ಪಾಸ್‌ಬುಕ್‌, ಆಧಾರ್‌ ಕಾರ್ಡ್‌, ಜಾತಿ, ಆದಾಯ ಪ್ರಮಾಣ ಪತ್ರಗಳು, ಅಂಗವಿಕಲರ ಪ್ರಮಾಣ ಪತ್ರದೊಂದಿಗೆ ನಾಡಕಚೇರಿ ಹೋಗಿ ಅರ್ಜಿ ಸಲ್ಲಿಸಿದರೆ, ಸಾಕು. ವಿಳಂಬ ಮಾಡದೆ ಮಸಾಶನ ಒದಗಿಸುವುದಕ್ಕೆ ಸರ್ಕಾರ ವ್ಯವಸ್ಥೆ ಮಾಡಿದೆ.

* ಗೋವಿಂದ, ರಾಯಚೂರು: ಅಂಗವಿಕಲ ಸಹೋದರ ರಂಗಸ್ವಾಮಿ ಮುಖ್ಯಮಂತ್ರಿಗೆ ಭೇಟಿಯಾಗಿದ್ದರು. ಸಿಎಂ ಕಚೇರಿಯಿಂದ ಜಿಲ್ಲಾಡಳಿತಕ್ಕೆ ಒಂದು ಪತ್ರ ಬಂದಿತ್ತು. ಜಿಲ್ಲಾಡಳಿತದಿಂದ ಶಿಫಾರಸು ಮಾಡಿದರೂ ರಿಮ್ಸ್‌ನಲ್ಲಿ ಆತನಿಗೆ ಇದುವರೆಗೂ ನ್ಯಾಯ ಸಿಕ್ಕಿಲ್ಲ.

– ನಮ್ಮ ಅಂಗವಿಕಲ ಕಲ್ಯಾಣ ಇಲಾಖೆ ಕಚೇರಿಗೆ ನಾಳೆಯೇ ರಂಗಸ್ವಾಮಿ ಅವರನ್ನು ಕಳುಹಿಸಿ. ಎಲ್ಲಿ ನ್ಯಾಯ ಸಿಗಬೇಕಿತ್ತು, ಅಲ್ಲಿಗೆ ಒಂದು ಪತ್ರ ಬರೆದು ವಿಚಾರಿಸುತ್ತೇವೆ. ಖುದ್ದಾಗಿ ಪರಿಶೀಲಿಸಿ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ.

* ನರೇಶ, ಗುಂಜಳ್ಳಿ: ಶ್ರವಣದೋಷವಿದ್ದು, ಆಧಾರ್‌ ಯೋಜನೆಯಡಿ ಯಾವುದೇ ಪ್ರಯೋಜನ ಸಿಗುತ್ತಿಲ್ಲ.

– ಆಧಾರ್‌ ಯೋಜನೆಯಡಿ ವರ್ಷಕ್ಕೆ 10 ಅರ್ಜಿಗಳನ್ನು ಮಾತ್ರ ಪರಿಗಣಿಸುತ್ತಿದ್ದಾರೆ. ಈ ವರ್ಷ ಸುವಿದಾ ಅನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ. ಆನಂತರ ಇಲಾಖೆಗೆ ಬಂದು ಅರ್ಜಿ ಸಲ್ಲಿಸಿದ ದಾಖಲೆ ಕೊಡಿ, ಪರಿಗಣಿಸಲಾಗುವುದು. ಎಸ್ಸೆಸ್ಸೆಲ್ಸಿ ಮುಗಿಸಿದ್ದರೆ ಹೋಲಿಗೆ ಯಂತ್ರ ಕೊಡುವುದಕ್ಕೆ ಅವಕಾಶವಿದೆ. ಇದಕ್ಕಾಗಿ ನೇರವಾಗಿ ಬಂದು ಅರ್ಜಿ ಸಲ್ಲಿಸಿ.

* ರಡ್ಡೆಪ್ಪ, ಸಿಂಧನೂರು: 65 ವಯಸ್ಸಿನ ಅಂಗವಿಕಲ ಅಜ್ಜಿಯೊಬ್ಬರಿದ್ದಾರೆ. ಸರ್ಕಾರದಿಂದ ಅವರಿಗೇ ಯಾವುದೇ ಅನುಕೂಲ ಸಿಕ್ಕಿಲ್ಲ.

– ಮಾಸಾಶನ ಮಾತ್ರ ಅವರಿಗೆ ಸಿಗುತ್ತದೆ. ಬೇರೆ ಯೋಜನೆಗಳಡಿ ಅವರಿಗೆ ಪ್ರಯೋಜನ ಸಿಗುವುದಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ಶೇ 5 ರ ಅನುದಾನದಲ್ಲಿ ಅರ್ಜಿ ಸಲ್ಲಿಸಿ, ದಾಖಲೆಯನ್ನು ತಂದುಕೊಡಿ. ನೇರವಾಗಿ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಅನುಕೂಲ ಮಾಡಿಕೊಡಲಾಗುವುದು. ಬೇರೆ ಇಲಾಖೆಗಳ ಮೂಲಕವೇ ಅವರಿಗೆ ಪ್ರಯೋಜನ ದೊರಕಿಸುವುದಕ್ಕೆ ನಮಗೆ ಅವಕಾಶವಿದೆ. ತಾಲ್ಲೂಕು ಪಂಚಾಯಿತಿ ಎಂಆರ್‌ಡಬ್ಲು ಬಸವರಾಜ ಅವರನ್ನು ಸಂಪರ್ಕಿಸಿ.

– ನಿರ್ವಹಣೆ: ನಾಗರಾಜ ಚಿನಗುಂಡಿ, ಶ್ರೀನಿವಾಸ ಇನಾಮದಾರ್‌, ಬಾವಸಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.