ADVERTISEMENT

ರಾಯಚೂರು: ವಿದ್ಯುತ್ ದರ ಏರಿಕೆ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2025, 12:12 IST
Last Updated 29 ಮಾರ್ಚ್ 2025, 12:12 IST
ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ವಿದ್ಯುತ್ ದರ ಏರಿಕೆ ವಿರೋಧಿಸಿ ಸಿಪಿಐಎಂಎಲ್ ಲಿಬರೇಶನ್ ಪಕ್ಷದ ಕಾರ್ಯಕರ್ತರು ವಿದ್ಯುತ್ ಮೀಟರ್ ಹಿಡಿದು ಪ್ರತಿಭಟನೆ ನಡೆಸಿದರು 
ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ವಿದ್ಯುತ್ ದರ ಏರಿಕೆ ವಿರೋಧಿಸಿ ಸಿಪಿಐಎಂಎಲ್ ಲಿಬರೇಶನ್ ಪಕ್ಷದ ಕಾರ್ಯಕರ್ತರು ವಿದ್ಯುತ್ ಮೀಟರ್ ಹಿಡಿದು ಪ್ರತಿಭಟನೆ ನಡೆಸಿದರು     

ರಾಯಚೂರು: ವಿದ್ಯುತ್ ದರ ಏರಿಕೆ ವಿರೋಧಿಸಿ ಸಿಪಿಐಎಂಎಲ್ ಲಿಬರೇಶನ್ ಪಕ್ಷದ ಕಾರ್ಯಕರ್ತರು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ವಿದ್ಯುತ್ ಮೀಟರ್ ಹಿಡಿದು ಪ್ರತಿಭಟನೆ ನಡೆಸಿದರು. 

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಾಧ್ಯವಾಗದೇ ಸಾಮಾನ್ಯ ಜನರ ಮೇಲೆ ಹೊರೆ ಹಾಕುತ್ತಿದೆ.  ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಿಸಿದೆ. ಸದ್ಯ ಗೃಹಬಳಕೆ (ಎಲ್‌ಟಿ–1) ವಿದ್ಯುತ್‌ ಸಂಪರ್ಕದಲ್ಲಿ ಪ್ರತಿ ಕೆ.ವಿಗೆ ₹120 ನಿಗದಿತ ಶುಲ್ಕ ವಿಧಿಸಲಾಗುತ್ತಿತ್ತು. ಇದನ್ನು ₹145ಕ್ಕೆ ಹೆಚ್ಚಿಸಲಾಗಿದೆ ಎಂದು ದೂರಿದರು.

ರಾಜ್ಯ ಸರ್ಕಾರ ಒಂದು ಕಡೆ ಉಚಿತ ವಿದ್ಯುತ್‌ ನೀಡುವುದಾಗಿ ಘೋಷಿಸಿದೆ. ಇನ್ನೊಂದೆಡೆ ಸರ್ಕಾರದ ಇಲಾಖೆಗಳೇ ₹6 ಸಾವಿರ ಕೋಟಿಯಷ್ಟು ವಿದ್ಯುತ್ ಬಿಲ್‌ ಬಾಕಿ ಉಳಿಸಿಕೊಂಡಿವೆ. ಬೆಲೆ ಏರಿಕೆಯೊಂದನ್ನೇ ಗ್ಯಾರಂಟಿಯಾಗಿ ಕೊಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ADVERTISEMENT

ಬರಿದಾಗಿರುವ ಬೊಕ್ಕಸ ತುಂಬಿಕೊಳ್ಳಲು ಜನಸಾಮಾನ್ಯರ ಮೇಲೆ ಒಂದಿಲ್ಲೊಂದು ಬೆಲೆ ಏರಿಕೆಯ ಬರೆ ಎಳೆಯುತ್ತಿರುವ ರಾಜ್ಯ ಸರ್ಕಾರ ಸ್ಟಾರ್ಟ್ ಮೀಟರ್ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಶೇ 400-800 ರಷ್ಟು ದರ ಏರಿಕೆ ಮಾಡಿರುವುದು ಗ್ಯಾರಂಟಿ ಯೋಜನೆಗಳನ್ನು ನಂಬಿ ಮತ ನೀಡಿದ ನಾಡಿನ ಜನರ ದುರ್ದೈವವೇ ಸರಿ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿದ್ದೇವೆ. ಹೀಗಿರುವಾಗ ವಿದ್ಯುತ್ ದರ ಹೆಚ್ಚಳದಿಂದ ಗಾಯದ ಮೇಲೆ ಬರೆ ಹಾಕಿದಂತಾಗಿದೆ ಎಂದು ದೂರಿದರು.

ರಾಜ್ಯದ ಎಲ್ಲ ಶಾಸಕರು ಪಕ್ಷಾತೀತವಾಗಿ ತಮ್ಮ ಸಂಬಳ ಮತ್ತು ಭತ್ಯೆ ಹೆಚ್ಚಿಸಿಕೊಂಡಿದ್ದಾರೆ. ರಾಜ್ಯದ ವಿದ್ಯಾರ್ಥಿ, ಯುವಜನರು ಸೇರಿದಂತೆ ರೈತ, ಕಾರ್ಮಿಕರು ಎಲ್ಲರೂ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಸರ್ಕಾರದ ಈ ನಡೆಯು ಪ್ರಜಾತಂತ್ರವನ್ನು ನಗೆಪಾಟಲಿಗೆ ಈಡು ಮಾಡಿದೆ ಎಂದು ಟೀಕಿಸಿದರು.

ಪಕ್ಷದ ಮುಖಂಡರಾದ ಅಜೀಜ್ ಜಾಗೀರ್ದಾರ್, ಆಂಜನೇಯ ಕುರುಬರ ದೊಡ್ಡಿ, ರವಿಚಂದ್ರ, ಹನೀಫ್ ಅಬಕಾರಿ, ಜಿಲಾನಿ ಯರಗೇರಾ, ಮೊಹಮ್ಮದ್ ಶಾಲಂ, ಮಹೇಂದ್ರ, ಆನಂದ ಕುಮಾರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.