ADVERTISEMENT

ಜನರ ಉತ್ಸವವಾಗಿ ರಾಯಚೂರು ಉತ್ಸವ ಆಚರಣೆ: ಪೂರ್ವಭಾವಿ ಸಭೆಯಲ್ಲಿ ಡಿಸಿ ನಿತೀಶ್

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 6:38 IST
Last Updated 9 ಜನವರಿ 2026, 6:38 IST
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಸಂಘ ಸಂಸ್ಥೆಗಳು, ವ್ಯಾಪಾರಸ್ಥರು, ಬುದ್ಧಿಜೀವಿಗಳು, ಮಹಿಳಾ ಪ್ರಮುಖರು, ಹೋರಾಟಗಾರರ ಸಮ್ಮುಖದಲ್ಲಿ ನಡೆದ ಎಡೆದೊರೆ ನಾಡು ರಾಯಚೂರು ಉತ್ಸವ-2026ರ ಪೂರ್ವಭಾವಿ ಸಭೆಯಲ್ಲಿ ನಿತೀಶ್‌ ಕೆ. ಮಾತನಾಡಿದರು. ಶಿವಾನಂದ ಭಜಂತ್ರಿ, ಜುಬಿನ್‌ ಮೊಹಾಪಾತ್ರ ಹಾಗೂ ಹಂಪಣ್ಣ ಸಜ್ಜನ ಉಪಸ್ಥಿತರಿದ್ದರು
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಸಂಘ ಸಂಸ್ಥೆಗಳು, ವ್ಯಾಪಾರಸ್ಥರು, ಬುದ್ಧಿಜೀವಿಗಳು, ಮಹಿಳಾ ಪ್ರಮುಖರು, ಹೋರಾಟಗಾರರ ಸಮ್ಮುಖದಲ್ಲಿ ನಡೆದ ಎಡೆದೊರೆ ನಾಡು ರಾಯಚೂರು ಉತ್ಸವ-2026ರ ಪೂರ್ವಭಾವಿ ಸಭೆಯಲ್ಲಿ ನಿತೀಶ್‌ ಕೆ. ಮಾತನಾಡಿದರು. ಶಿವಾನಂದ ಭಜಂತ್ರಿ, ಜುಬಿನ್‌ ಮೊಹಾಪಾತ್ರ ಹಾಗೂ ಹಂಪಣ್ಣ ಸಜ್ಜನ ಉಪಸ್ಥಿತರಿದ್ದರು   

ರಾಯಚೂರು: ‘ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಗಟ್ಟಿಗೊಳಿಸುವ ದಿಸೆಯಲ್ಲಿ ಜಿಲ್ಲೆಯ ಎಲ್ಲ ಸಂಘ ಸಂಸ್ಥೆಗಳು, ಕಲಾವಿದರು, ಕ್ರೀಡಾಪಟುಗಳು ಹಾಗೂ ಸಾಧಕರನ್ನೊಳಗೊಂಡು ಉತ್ಸವದ ರೂಪುರೇಷೆ ಸಿದ್ಧಪಡಿಸಲಾಗುವುದು. ರಾಯಚೂರು ಉತ್ಸವವನ್ನು ಜನರ ಉತ್ಸವವಾಗಿ ಆಚರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ನಿತೀಶ್‌ ಕೆ. ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಸಂಘ ಸಂಸ್ಥೆಗಳು, ವ್ಯಾಪಾರಸ್ಥರು, ಬುದ್ಧಿಜೀವಿಗಳು, ಮಹಿಳಾ ಪ್ರಮುಖರು, ಹೋರಾಟಗಾರರ ಸಮ್ಮುಖದಲ್ಲಿ ನಡೆದ ಎಡೆದೊರೆ ನಾಡು ರಾಯಚೂರು ಉತ್ಸವ-2026ರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಉತ್ಸವಕ್ಕೆ ಡಿಸೆಂಬರ್‌ನಲ್ಲೇ ಸಿದ್ಧತೆ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ಜನಪ್ರತಿನಿಧಿಗಳ ಸಭೆ ನಡೆಸಿ ಅವರ ಸಲಹೆ ಸೂಚನೆಗಳನ್ನು ಸ್ವೀಕರಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ಸಭೆಯನ್ನೂ ನಡೆಸಲಾಗಿದೆ. ಇದೀಗ ಸಂಘ ಸಂಸ್ಥೆಗಳ, ಬುದ್ಧಿಜೀವಿಗಳ ಸಭೆ ಕರೆಯಲಾಗಿದೆ. ಎಲ್ಲರ ಸಲಹೆ ಸೂಚನೆಗಳನ್ನೂ ಪಡೆದುಕೊಳ್ಳಲಾಗುವುದು’ ಎಂದು ತಿಳಿಸಿದರು.

ADVERTISEMENT

‘ತಾಲ್ಲೂಕು ಮಟ್ಟದಲ್ಲೂ ಸಭೆಗಳನ್ನು ನಡೆಸಲಾಗುವುದು. ಅವರ ಸಲಹೆ ಸೂಚನೆಗಳನ್ನು ಪರಿಗಣಿಸಲಾಗುವುದು. ನಂತರ ಕಾರ್ಯಕ್ರಮಗಳ ಪಟ್ಟಿಯನ್ನು ಸಿದ್ಧಪಡಿಸಲಾಗುವುದು. ರಾಯಚೂರಲ್ಲಿ ಬಿಸಿಲು ಅಧಿಕವಾಗಿರುತ್ತದೆ. ಹೀಗಾಗಿ ಜನವರಿ ಅಂತ್ಯವೇ ಸೂಕ್ತ ಎನ್ನುವ ನಿರ್ಧಾರಕ್ಕೆ ಬರಲಾಗಿದೆ’ ಎಂದು ಹೇಳಿದರು.

‘ಉತ್ಸವದಲ್ಲಿ ಕೃಷಿ ಮೇಳ, ಮ‌ತ್ಸ್ಯಮೇಳ, ಚಿತ್ರಕಲಾ ಪ್ರದರ್ಶನ, ಸ್ಥಳೀಯ ಕಲೆಗಳ ಪ್ರದರ್ಶನ, ಗೋಷ್ಠಿಗಳು, ಸಂವಾದಗಳು ಇರಲಿವೆ. ಕಲ್ಯಾಣ ಕರ್ನಾಟಕದ ಮಟ್ಟದಲ್ಲಿ ಕ್ರೀಡೆಗಳನ್ನೂ ನಡೆಸಲಾಗುವುದು. ಸ್ಮರಣ ಸಂಚಿಕೆ ಸಹ ಬಿಡುಗಡೆ ಮಾಡಲಾಗುವುದು. ಸ್ಥಳೀಯ ಕಲಾವಿದರು ಹಾಗೂ ರಾಜ್ಯ ಮಟ್ಟದ ಕಲಾವಿದರಿಗೂ ಅವಕಾಶ ಇರಲಿದೆ‘ ಎಂದು ವಿವರಿಸಿದರು.

‘ಮನೆಮನೆಯ ಉತ್ಸವವಾಗಲಿ’: ಎಡೆದೊರೆ ನಾಡು ರಾಯಚೂರು ಉತ್ಸವ-2026 ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಇದು ಐತಿಹಾಸಿಕ ಪ್ರಯತ್ನ. ನಮ್ಮೂರಲ್ಲೂ ಉತ್ಸವ ಯಾವಾಗ ಆಗುತ್ತದೆ ಎಂದು ಕಾಯುತ್ತಿದ್ದೇವು. ಈದೀಗ ಆ ಕಾಲ ಕೂಡಿ ಬಂದಿದ್ದು ನಮ್ಮ ಪುಣ್ಯ. ಇದು ಮನೆಮನೆಯ ಉತ್ಸವ ಆಗಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.

ಕರ್ನಾಟಕ ಸಂಘದಿಂದ ಉತ್ಸವದ ಮೆರವಣಿಗೆ ಆರಂಭಿಸಬೇಕು. ಸ್ಮರಣ ಸಂಚಿಕೆ ಪ್ರಕಟಿಸಬೇಕು ಎಂದು ಕನ್ನಡಪರ ಹೋರಾಟಗಾರ ಮುರಳೀಧರ ಸಲಹೆ ನೀಡಿದರು.

‘ರಾಯಚೂರು ಉತ್ಸವವು ಪ್ರತಿ ವರ್ಷ ನಡೆಯಬೇಕು‘ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಕೆ ಶಾಂತಪ್ಪ ಸಲಹೆ ಮಾಡಿದರು.

‘ರಾಯಚೂರು ಜಿಲ್ಲೆಯು ವಚನ ಮತ್ತು ದಾಸ ಸಾಹಿತ್ಯಕ್ಕೆ ಹೆಸರಾಗಿದ್ದು, ದಲಿತ ಬಂಡಾಯ ಸಾಹಿತ್ಯ ಚರ್ಚೆಗೆ ಅವಕಾಶ ಕಲ್ಪಿಸಬೇಕು’ ಎಂದು ಸಾಹಿತಿ ಬಾಬು ಬಂಡಾರಿಗಲ್ ಮನವಿ ಮಾಡಿದರು.

ಕರ್ನಾಟಕ ಸಂಘದ ಶ್ರೀನಿವಾಸ, ನರೇಂದ್ರ, ಅಣ್ಣಪ್ಪ ಮೇಟಿಗೌಡ, ಮಾರುತಿ ಬಡಿಗೇರ, ವಿನೋದ ರೆಡ್ಡಿ, ಕೆ.ಸತ್ಯನಾರಾಯಣ, ಖಾನಸಾಬ ಮೋಮಿನ್, ಅರವಿಂದ ಕುಲಕರ್, ಗುರುನಾಥ, ಸಿ.ಕೆ.ಜೈನ್, ಪ್ರತಿಭಾ ರೆಡ್ಡಿ, ಸಾಹಿತಿ ರಂಗಣ್ಣ ಪಾಟೀಲ, ಮಾಲಾ ಭಜಂತ್ರಿ, ನರೇಂದ್ರ ಆರ್ಯ, ವಿ. ಗೋವಿಂದ, ಶರಣಬಸವ ಹಿರೇಮಠ, ಲಕ್ಷ್ಮಿ ನರಸಿಂಹ, ಗಾಯತ್ರಿ ಮಾತನಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಉತ್ಸವದ ರೂಪುರೇಷಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಮಹಾನಗರಪಾಲಿಕೆಯ ಆಯುಕ್ತ ಜುಬಿನ್ ಮೊಹಾಪಾತ್ರ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ರಾಯಚೂರು ಉಪ ವಿಭಾಗಾಧಿಕಾರಿ ಹಂಪಣ್ಣ ಸಜ್ಜನ, ತಹಶೀಲ್ದಾರರಾದ ಸುರೇಶ ವರ್ಮಾ, ಅಮರೇಶ ಬಿರಾದಾರ ಉಪಸ್ಥಿತರಿದ್ದರು.

ಉತ್ಸವಕ್ಕೆ ₹4 ಕೋಟಿ

ರಾಯಚೂರು ಉತ್ಸವಕ್ಕೆ ರಾಜ್ಯ ಸರ್ಕಾರ ₹2 ಕೋಟಿ ಮಹಾನಗರಪಾಲಿಕೆ ಹಾಗೂ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರ ಸೇರಿ ₹1 ಕೋಟಿ ಕೆಪಿಸಿಎಲ್ ಹಾಗೂ ಹಟ್ಟಿ ಚಿನ್ನದಗಣಿ ಕಂಪನಿ ₹1 ಕೋಟಿ ಸೇರಿ ಒಟ್ಟು ₹4 ಕೊಡಲಿವೆ. ಕೆಲವು ಕಂಪನಿಗಳ ಸಿಎಸ್‌ಆರ್‌ ನಿಧಿಯಿಂದ ಅನುದಾನ ಬಳಸಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೀಶ್‌ ತಿಳಿಸಿದರು. ಉತ್ಸವದ ಅಂಗವಾಗಿ ಜ.26ರಿಂದ ಹೆಲಿಕಾಪ್ಟರ್‌ ರೈಡ್‌ ಆರಂಭವಾಗಲಿದೆ. ಇದೇ ಅವಧಿಯಲ್ಲಿ ವಿವಿಧ ಕ್ರೀಡೆಗಳಿಗೂ ಚಾಲನೆ ನೀಡಲಾಗುವುದು. ಸ್ವಯಂ ಪ್ರೇರಣೆಯಿಂದ ಮುಂದೆ ಬರುವ ಸಂಘಟನೆಗಳ ಸೇವೆಯನ್ನು ಬಳಸಿಕೊಳ್ಳಲಾಗುವುದು. ಒಟ್ಟಾರೆ ರಾಯಚೂರು ಉತ್ಸವವನ್ನು ಅದ್ದೂರಿಯಾಗಿ ನಡೆಯುವಂತೆ ಮಾಡಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.