
ರಾಯಚೂರು: ಎಡೆದೊರೆ ನಾಡು ರಾಯಚೂರು ಉತ್ಸವದ ಅಂಗವಾಗಿ ಆಯೋಜಿರುವ ‘ಮಕ್ಕಳ ಹಬ್ಬ’ದ ಪ್ರಯುಕ್ತ ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ವನ್ಯಜೀವಿಗಳು ವಾಲ್ಕಟ್ ಮೈದಾನದ ಕೃತಕ ಅರಣ್ಯದಲ್ಲಿ ಬಿಡಾರ ಹೂಡಿರುವ ಬೆನ್ನಲ್ಲೇ ಕೀಟಲೋಕ ಜಾಗೃತಗೊಂಡು ನಗರದ ಮಹಾತ್ಮಾ ಗಾಂಧಿ ಮೈದಾನದಲ್ಲಿ ಅಸರೆ ಪಡೆದುಕೊಂಡಿದೆ. ಅಪರೂಪದ ಹಕ್ಕಿಗಳೂ ಇಲ್ಲಿ ಬಂದಿಳಿದಿವೆ.
ಮಕ್ಕಳು ಕೀಟಲೋಕವನ್ನು ನೋಡುವ ಕುತೂಹಲದಲ್ಲಿದ್ದರೆ, ಕೀಟಗಳು ಸಹ ಚಿಣ್ಣರ ಲೋಕದ ಎದುರು ಪ್ರದರ್ಶನಕ್ಕೆ ಅಣಿಯಾಗಿವೆ. ಪರಿಸರದಲ್ಲಿನ ವಿವಿಧ ಕೀಟಗಳು ಸಹ ಫ್ಯಾಷನ್ ಲೋಕದ ಸುಂದರಿಯರು ಪ್ರದರ್ಶನ ನೀಡುವ ಮಾದರಿಯಲ್ಲಿ ಸರತಿ ಸಾಲಿನಲ್ಲಿ ಸಜ್ಜಾಗಿ ಕುಳಿತಿವೆ.
ಹೌದು ಈ ಎಲ್ಲ ಕೀಟಗಳೂ ಮೈಸೂರಿನಿಂದ ಬಂದಿವೆ. ವಿರಾಟ್ ಪ್ರದರ್ಶನ ನೀಡಿ ಗುಂಯ್ ಗುಡುತ್ತಿವೆ. ಭ್ರಮರ ಸಂಗೀತ ಕೇಳುಗರ ಕಣ್ಮನ ಸೆಳೆಯುತ್ತಿದ್ದರೆ, ಬೆರಗು ಕಣ್ಣಿನಿಂದ ನೋಡುತ್ತಿರುವ ಮಕ್ಕಳ ಕಣ್ಮನ ತಣಿಸುತ್ತಿವೆ.
ಮೈಸೂರಿನಿಂದ ಬಂದಿರುವ ರೊಬೊಟಿಕ್ ಚೇಳು, ಜೇರುಂಡೆ, ಚಿಡ್ಡಾಗಳು, ಜೇನು ನೊಣಗಳು, ಮಿಡತೆ, ದುಂಬಿಗಳು ಚಲನವಲನಗಳ ಮೂಲಕ ಗಮನ ಸೆಳೆಯುತ್ತಿವೆ.
ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ದೊಡ್ಡ ಕೋರಿಯನ್ ಶಾಮಿಯಾನಾ ಹಾಕಲಾಗಿದೆ. ಕ್ರೀಡಾಂಗಣದ ಪ್ರವೇಶ ದ್ವಾರದಲ್ಲೇ ರೊಬೊಟಿಕ್ ಚಿಟ್ಟೆ ಪ್ರದರ್ಶನದ ಬೃಹತ್ ರಂಗು ರಂಗಿನ ಆಕರ್ಷಕ ಫಲಕ ಹಾಕಲಾಗಿದೆ. ಶಾಮಿಯಾನದೊಳಗೆ ಪ್ರವೇಶಿಸಿದರೆ ಸಾಕು ಕೀಟಲೋಕ ಗೋಚರಿಸುತ್ತದೆ.
ವಿರಾಟ್ ಚೇಳಿನ ಕೊಂಬು ಹಾಗೂ ಬಾಲ ಭಯಹುಟ್ಟಿಸುತ್ತದೆ. ಅದು ಚಲನವಲನ ಆರಂಭಿಸುತ್ತಿದ್ದಂತೆಯೇ ಮಕ್ಕಳು ಒಂದು ಕ್ಷಣ ಹೆದರಿ ಹಿಂದೆ ಸರಿಯುತ್ತಿದ್ದಾರೆ. ಜೇನು ನೊಣವೊಂದು ಗೂಡುಕಟ್ಟುತ್ತಿರುವ ಪ್ರತಿಕೃತಿ ಹೆಚ್ಚು ಆಕರ್ಷಕವಾಗಿದೆ. ಗ್ಲೈಡ್ ಡ್ರ್ಯಾಗನ್ ಫ್ಲೈ (ನೀಲಿ ಚಿಡ್ಡಾ) ಹೆಲಿಕಾಪ್ಟರ್‌ನಂತೆ ಬಂದು ಹೂವಿನ ಮೇಲೆ ಬಂದು ಕುಳಿತು ಮಕರಂದ ಹೀರುತ್ತಿದೆ. ಮರದ ಪೊಟರೆಯಲ್ಲಿ ಜೇನುನೊಣಗಳು ಗೂಡುಕಟ್ಟುವ ಸಿದ್ಧತೆಯಲ್ಲಿ ತೊಡಗಿವೆ.
‘ಮೈಸೂರಿನ ನಿರಂತರ ಸುಮಾರು 16 ತಾಸು ಪ್ರಯಾಣ ಮಾಡಿ ರೊಬೊಟಿಕ್ ಕೀಟಗಳನ್ನು ರಾಯಚೂರು ಉತ್ಸವಕ್ಕೆ ತಂದಿದ್ದೇವೆ. ಎರಡು ದಿನ ಪೂರ್ತಿ ಸೆಟ್‌ಅಪ್ ಮಾಡಿಕೊಂಡಿದ್ದೇವೆ. ಪರಿಸರದ ಮೇಲೆ ಆಗುತ್ತಿರುವ ದಾಳಿಯಿಂದಾಗಿ ಕೀಟಗಳು ಕಾಣಸಿಗದಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಿ ಕೀಟಗಳ ರೊಬೊಟಿಕ್ ಪ್ರತಿಕೃತಿ ಸಿದ್ಧಪಡಿಸಿ ಮಕ್ಕಳಿಗೆ ತಿಳಿವಳಿಕೆ ನೀಡುವ ಪ್ರಯತ್ನ ಮಾಡಲಾಗಿದೆ’ ಎಂದು ರೊಬೊಟಿಕ್ ಪ್ರದರ್ಶನದ ಸಂಯೋಜಕ ನಾಗರಾಜ ಪ್ರತಿಕ್ರಿಯಿಸಿದರು.
‘ಜಿಲ್ಲೆಯಲ್ಲಿರುವ ಅಪರೂಪದ ಹಕ್ಕಿಗಳನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದು ಮಕ್ಕಳ ಹಬ್ಬದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಮಕ್ಕಳು ಆಸಕ್ತಿಯಿಂದ ಪಕ್ಷಿಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ’ ಎಂದು ಹವ್ಯಾಸಿ ಪೊಟೊಗ್ರಾಫರ್ ಈರಣ್ಣ ಬೆಂಗಾಲಿ ಸಂತಸ ಹಂಚಿಕೊಂಡರು.
‘ಮಕ್ಕಳ ಹಬ್ಬದಲ್ಲಿ ಕುದ್ರೋಳಿ ಗಣೇಶ ಅವರ ಜಾದೂ ಪ್ರದರ್ಶನ, ಮುಖವಾಡ, ಗೂಡುದೀಪ, ಮಣ್ಣಿನಮೂರ್ತಿ ತಯಾರಿಸುವ ಕಾರ್ಯಾಗಾರ ಸಹ ಏರ್ಪಡಿಸಲಾಗಿದೆ. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ವೇದಿಕೆ ಸಜ್ಜುಗೊಳಿಸಲಾಗಿದೆ’ ಎಂದು ಉತ್ಸವ ಸಮಿತಿ ಸದಸ್ಯ ಕೃಷ್ಣ ಶಾವಂತಗೇರಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.