
ರಾಯಚೂರು: ‘ಕುಟುಂಬದ ಸ್ವಾವಲಂಬನೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಕುಟುಂಬದ ಆರ್ಥಿಕ ಸಬಲೀಕರಣ ಸ್ವಸಹಾಯ ಗುಂಪುಗಳಿಂದ ಮಾತ್ರ ಸಾಧ್ಯ’ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಸೂರ್ಯಮನಿ ಸಾಹೊ ಹೇಳಿದರು.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಭವನದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್, ಜೀವನ ಮಿತ್ರ ಸಮಾಜ ಸೇವಾ ಸಂಸ್ಥೆ ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಯೋಗದಲ್ಲಿಗುರುವಾರ ನಡೆದ ಬೃಹತ್ ಕೃಷಿ ಜಾಗರಣೆ ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಸಾಲ ಮೇಳದಲ್ಲಿ ಅವರು ಮಾತನಾಡಿದರು.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಂ. ಹನುಮಂತಪ್ಪ ಅವರು 32 ಮಹಿಳಾ ಸ್ವಸಹಾಯ ಗುಂಪುಗಳ 350ಕ್ಕೂ ಅಧಿಕ ಸದಸ್ಯರಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ₹ 3. 20 ಕೋಟಿ ಮೊತ್ತದ ಸಾಲ ಮಂಜೂರಾತಿ ಪತ್ರಗಳನ್ನು ವಿತರಿಸಿದರು.
ನಬಾರ್ಡ್ ಬ್ಯಾಂಕಿನ ಡಿಡಿಎಂ ಕಲಾವತಿ ಮಾತನಾಡಿ, ‘ಜಂಟಿ ಬಾಧ್ಯತಾ ಗುಂಪುಗಳಿಗೆ ಜೀವನ್ ಮಿತ್ರ ಸಮಾಜ ಸೇವಾ ಸಂಸ್ಥೆಯ ಮೂಲಕ ಸುಮಾರು 9000 ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಗಿದೆ’ ಎಂದು ತಿಳಿಸಿದರು.
ಜೀವನ ಮಿತ್ರ ಸಮಾಜ ಸೇವಾ ಸಂಸ್ಥೆಯ ಕಾರ್ಯದರ್ಶಿ ನಟರಾಜ್ ಮಾತನಾಡಿ, ‘ಜೀವನ ಮಿತ್ರ ಸಮಾಜ ಸೇವಾ ಸಂಸ್ಥೆಯು 22 ವರ್ಷಗಳಿಂದ ಮಹಿಳಾ ಸ್ವಸಹಾಯ ಸಂಘಗಳ ಮತ್ತು ಜಂಟಿ ಬಾಧ್ಯತಾ ಗುಂಪುಗಳಿಗೆ ತರಬೇತಿ ಕೊಡುತ್ತ ಬರಲಾಗಿದೆ’ ಎಂದು ಹೇಳಿದರು.
‘ಆರು ರಾಷ್ಟ್ರೀಕೃತ ಬ್ಯಾಂಕ್‌ಗಳು, ಒಂದು ಆರ್‌ಆರ್‌ಬಿ ಬ್ಯಾಂಕ್ ಹಾಗೂ ಸಹಕಾರ ಬ್ಯಾಂಕುಗಳ ಜೊತೆ ಸ್ವಸಹಾಯ ಗುಂಪುಗಳ ನಡುವೆ ಸೇತುವೆಯಾಗಿ ನಮ್ಮ ಸಂಸ್ಥೆ ಕಾರ್ಯನಿರ್ವಹಿತ್ತಿದೆ. ಮಹಿಳೆಯರು ಮತ್ತು ರೈತರು ಉದ್ಯಮಿಗಳಾಗಲು ನಮ್ಮ ಸಂಸ್ಥೆ ಹಗಲಿರುಳು ಶ್ರಮಿಸುತ್ತಿದೆ’ ಎಂದು ತಿಳಿಸಿದರು.
ಹೈದರಾಬಾದ್‌ನ ಎಂಎಸ್‌ಎಂಇ ಫೌಂಡೇಶನ್ ಮುಖ್ಯಸ್ಥ ರಾಜಕುಮಾರ ಸೈಬರ್ ಅಪರಾಧಗಳ ಬಗ್ಗೆ ಮಾತನಾಡಿದರು.
ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣದ ಡೀನ್ ಸತೀಶಕುಮಾರ, ನಿವೃತ್ತ ರಿಸರ್ವ್ ಬ್ಯಾಂಕಿನ ಕೃಷ್ಣಪ್ಪ ಪುರುಷೋತ್ತಮ, ಜಯಪ್ರಕಾಶ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ರಾಮಬಾಬು ರಾಯಲ, ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ತಿಮ್ಮಣ್ಣ ನಾಯಕ, ಎಂಜಿನಿಯರ್ ಸಂತೋಷ ಸಿ, ಉಪಸ್ಥಿತರಿದ್ದರು.
ಅಶೋಕ ಸ್ವಾಗತಿಸಿದರು. ಶಂಕರಪ್ಪ ವಾಲಿ ನಿರೂಪಿಸಿದರು. ಪಂಜಾಬ್ ನ್ಯಾಷನಲ್ ಬ್ಯಾಂಕಿನ ವ್ಯವಸ್ಥಾಪಕ ಮಧುಸ್ಮಿತ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.