ADVERTISEMENT

ರಾಯಚೂರು ಜಿಲ್ಲೆಯಲ್ಲಿ ಎಡೆಬಿಡದ ತುಂತುರು ಮಳೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 8:44 IST
Last Updated 15 ಜುಲೈ 2020, 8:44 IST
ರಾಯಚೂರಿನಲ್ಲಿ ಸುರಿದ ಮಳೆಗೆ ರಸ್ತೆಯಲ್ಲಿ ನೀರು ತುಂಬಿರುವುದು
ರಾಯಚೂರಿನಲ್ಲಿ ಸುರಿದ ಮಳೆಗೆ ರಸ್ತೆಯಲ್ಲಿ ನೀರು ತುಂಬಿರುವುದು   

ರಾಯಚೂರು: ಜಿಲ್ಲೆಯಾದ್ಯಂತ ಬುಧವಾರ ಬೆಳಿಗ್ಗೆಯಿಂದ ಎಡೆಬಿಡದೆ ತುಂತುರು ಮಳೆ ಬೀಳುತ್ತಿದೆ.

ಅದರಲ್ಲೂ ರಾಯಚೂರು, ಲಿಂಗಸುಗೂರು ಹಾಗೂ ಮಾನ್ವಿ ತಾಲ್ಲೂಕುಗಳಲ್ಲಿ ಆಗಾಗ ಬಿರುಸಾದ ಮಳೆ ಬೀಳುತ್ತಿದೆ. ಲಾಕ್‌ಡೌನ್ ಕಾರಣ ಮಧ್ಯಾಹ್ನದವರೆಗೂ‌ ಮಾತ್ರ ಅಗತ್ಯ ಸರಕು ಖರೀದಿಗೆ ಅವಕಾಶ ಇದ್ದರೂ ಮನೆಯಿಂದ ಹೊರಗೆ ಜನರು ಬಾರದ ಸ್ಥಿತಿ ಉಂಟಾಗಿದೆ.

ಜನರಿಲ್ಲದೆ ವಹಿವಾಟು ನಡೆಯದೆ ಆಹಾರ ಪಾರ್ಸಲ್ ನೀಡುವ ಮಳಿಗೆ, ಹೋಟೆಲ್ ಮಾಲೀಕರು ಕೂಡಾ ಅಸಂತುಷ್ಟರಾಗಿದ್ದಾರೆ. ಕೆಲವು ಹೊಟೇಲ್ ಮಾಲೀಕರು ವಹಿವಾಟಿಲ್ಲದೆ ನಿಗದಿತ ಅವಧಿಗಿಂತಲೂ ಮೊದಲೇ ಅಂಗಡಿಗಳನ್ನು ಬಂದ್ ಮಾಡಿಕೊಂಡು ಮನೆಗಳಿಗೆ ತೆರಳಿದ್ದಾರೆ.

ADVERTISEMENT

ಜುಲೈ 14 ರಿಂದ 15 ರ ಬೆಳಿಗ್ಗೆ 8 ರವರೆಗೂ ಜಿಲ್ಲೆಯಲ್ಲಿ 9 ಮಿಲಿಮೀಟರ್ ಮಳೆಯಾಗಿದೆ. ಲಿಂಗಸುಗೂರು ತಾಲ್ಲೂಕು ಹೊರತುಪಡಿಸಿ ಉಳಿದೆಲ್ಲ ಕಡೆಗಳಲ್ಲೂ ವಾಡಿಕೆ ಮಳೆಗಿಂತ ಅಧಿಕ ಮಳೆಯಾಗಿದೆ. ಬುಧವಾರ ಬೆಳಿಗ್ಗೆ ಮಾತ್ರ ಎಲ್ಲ‌ಕಡೆಗಳಲ್ಲೂ ಮಳೆ ಬೀಳುತ್ತಿದೆ.

ಜೂನ್ ಆರಂಭದಿಂದ ಸಿಂಧನೂರು ತಾಲ್ಲೂಕಿನಲ್ಲಿ ಮಳೆ ಅಸಮರ್ಪಕವಾಗಿದ್ದು, ಬಿತ್ತನೆ ಪ್ರಮಾಣ ಶೇ 10 ರಷ್ಟು ಇದೆ. ಜೂನ್ ಎರಡನೇ ವಾರದಿಂದ ಬಿತ್ತನೆ ಮಾಡಿದ್ದ ಇನ್ನುಳಿದ ತಾಲ್ಲೂಕುಗಳಲ್ಲಿ ಈಗಾಗಲೇ ಬೀಜಗಳು ಮೊಳಕೆ ಬಂದಿವೆ. ಹಸಿರು ಹರಡುವುದಕ್ಕೆ ಅಗತ್ಯ ತೇವಾಂಶ ಇದ್ದರೂ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜಮೀನುಗಳಲ್ಲಿ ನೀರು ಸಂಗ್ರಹವಾಗುತ್ತಿದೆ.

ದೇವದುರ್ಗ,ಮಸ್ಕಿ, ಸಿರವಾರ, ರಾಯಚೂರು ಹಾಗೂ ಮಾನ್ವಿ ತಾಲ್ಲೂಕುಗಳಲ್ಲಿ ಬಿತ್ತನೆ ಮಾಡಿರುವ ಜಮೀನುಗಳಲ್ಲಿ ನೀರು ಸಂಗ್ರಹವಾಗಿರುವ ದೃಶ್ಯಗಳು ಕಾಣುತ್ತಿವೆ. ಇದೇ ರೀತಿ ಮಳೆ ಮುಂದುವರಿದರೆ ಬೆಳೆಗಳು ಕುಂಠಿತವಾಗಬಹುದು ಎನ್ನುವ ಭಯ ರೈತರಲ್ಲಿ ಆವರಿಸಿಕೊಳ್ಳುತ್ತಿದೆ.

ಈ ವರ್ಷ ಅಧಿಕ ಪ್ರಮಾಣದಲ್ಲಿ ಹತ್ತಿ ಹಾಗೂ ತೊಗರಿ ಬಿತ್ತನೆ ಆಗಿದೆ. ನಾರಾಯಣಪುರ ಬಲದಂಡೆ ಕಾಲುವೆ (ಎನ್ ಆರ್ ಬಿಸಿ) ಹಾಗೂ ತುಂಗಭದ್ರಾ ಎಡದಂಡೆ ಕಾಲುವೆ (ಟಿಎಲ್ ಬಿಸಿ) ಗಳಿಗೆ ಶೀಘ್ರದಲ್ಲೇ ನೀರು ಹರಿಸಲಿದ್ದು, ಕಾಲುವೆ ಜಲಾನಯನ ಪ್ರದೇಶಗಳಲ್ಲಿ ಭತ್ತ ಬಿತ್ತನೆ ಭರಾಟೆ‌ ಆರಂಭವಾಗಲಿದೆ. ಕೆಲವು ರೈತರು ಈಗಾಗಲೇ ಮಳೆ‌ ನೀರಿನ ಹದ ಆದರಿಸಿ ಭತ್ತ ಬಿತ್ತನೆಗೆ ತಯಾರಿ ಮಾಡಿಕೊಂಡಿದ್ದಾರೆ. ಮಳೆ ಬಿಡುವಿಗಾಗಿ ಕಾಯುತ್ತಿದ್ದಾರೆ.

ಸಿಂಧನೂರು ತಾಲ್ಲೂಕಿನಲ್ಲಿ ಕಾಲುವೆ ಕೊನೆಭಾಗಕ್ಕೆ ನೀರು ತಲುಪದಿದ್ದರೆ ಬಿತ್ತನೆ ಮಾಡುವುದಕ್ಕೆ ಆಗುವುದಿಲ್ಲ. ಅಲ್ಲಿ ಸಾಕಷ್ಟು ಮಳೆ ಕೂಡಾ ಬಿದ್ದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.