ADVERTISEMENT

ಮಸ್ಕಿ: 132.18 ಕಿ.ಮೀ  ಉದ್ದದ ರೈಲ್ವೆ ಕಾಮಗಾರಿ ಸರ್ವೆ ಪೂರ್ಣ

ಕೇಂದ್ರ ಸರ್ಕಾರದ ಅಂಗಳದಲ್ಲಿ ಲಿಂಗಸುಗೂರು---, ಮಸ್ಕಿ-, ಬಳ್ಳಾರಿ ರೈಲ್ವೆ ಯೋಜನೆ

ಪ್ರಕಾಶ್‌ ಮಸ್ಕಿ
Published 19 ಜುಲೈ 2024, 14:02 IST
Last Updated 19 ಜುಲೈ 2024, 14:02 IST
ಮಸ್ಕಿ ಮಾರ್ಗದ ಲಿಂಗಸುಗೂರು ಬಳ್ಳಾರಿ ನೂತನ ರೈಲು ಮಾರ್ಗದ ನೀಲನಕ್ಷೆ
ಮಸ್ಕಿ ಮಾರ್ಗದ ಲಿಂಗಸುಗೂರು ಬಳ್ಳಾರಿ ನೂತನ ರೈಲು ಮಾರ್ಗದ ನೀಲನಕ್ಷೆ   

ಮಸ್ಕಿ: ಮಸ್ಕಿ ಮಾರ್ಗವಾಗಿ ಹಾದು ಹೋಗಲಿರುವ ಲಿಂಗಸುಗೂರು–ಬಳ್ಳಾರಿ ನೂತನ ರೈಲ್ವೆ ಯೋಜನೆಯ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಇದೀಗ ಯೋಜನೆ ಅನುಷ್ಠಾನ ಕಡತ ಕೇಂದ್ರ ಸರ್ಕಾರದ ಅಂಗಳದಲ್ಲಿದೆ.

ಈ ಭಾಗದ ಬಹುಜನರ ಕನಸಾಗಿರುವ 132.18 ಕಿ.ಮೀ ಉದ್ದದ ರೈಲ್ವೆ ಯೋಜನೆ ಕೈಗೆತ್ತಿಕೊಳ್ಳಲ್ಲು 2014-15 ಸಾಲಿನಲ್ಲಿ ಅಂದು ಸಂಸದರಾಗಿದ್ದ ಕರಡಿ ಸಂಗಣ್ಣ ಅವರು ಕೇಂದ್ರ ಸರ್ಕಾರದ ಮೇಲೆ ಹಾಕಿದ ಸತತ ಒತ್ತಡದಿಂದ ರೈಲ್ವೆ ಬೋರ್ಡ್ ಸರ್ವೆ ನಡೆಸಲು ಆದೇಶಿಸಿತ್ತು.

ರೈಲು ಹಾದು ಹೋಗುವ ಮಾರ್ಗದಲ್ಲಿ ಸತತ ಮೂರು ವರ್ಷ ಸರ್ವೆ ನಡೆಸಿ 2019ರಲ್ಲಿ ಕೇಂದ್ರ ಸರ್ಕಾರಕ್ಕೆ ವಿಸೃತ ವರದಿಯನ್ನು ರೈಲ್ವೆ ಬೋರ್ಡ್ ಸಲ್ಲಿಸಿದ್ದು, ಇದೀಗ ಯೋಜನೆ ಅನುಷ್ಠಾನ ನೂತನವಾಗಿ ಸಂಸದರಾಗಿರುವ ರಾಜಶೇಖರ ಹಿಟ್ನಾಳ್‌ ಅವರ ಹೆಗಲ ಮೇಲಿದೆ.

ADVERTISEMENT

ನೂತನ ರೈಲ್ವೆ ಮಾರ್ಗವು ಲಿಂಗಸುಗೂರು, ಮುದಗಲ್, ಮಸ್ಕಿ, ದೀನಸಮುದ್ರ, ಸಿಂಧನೂರು, ಅಮರಾಪೂರ, ಸಿರಗುಪ್ಪ, ತೆಕ್ಕಲಕೋಟೆ ಮಾರ್ಗವಾಗಿ ಬಳ್ಳಾರಿ ಕಂಟೋನಮೆಂಟ್‌ಗೆ ಜೋಡಣೆಯಾಗಲಿದೆ.

ಈ ರೈಲು ಮಾರ್ಗದಿಂದ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ, ಮದ್ಯ ಕರ್ನಾಟಕ ಸೇರಿ ಬೆಂಗಳೂರಿಗೆ ಸಂಪರ್ಕ ದೊರೆಯಲಿದ್ದು, ಈ ಭಾಗದ ಜನರ ಓಡಾಟಕ್ಕೆ ತುಂಬಾ ಅನುಕೂಲವಾಗಲಿದೆ ಎಂದು ಮಾಜಿ ಸಂಸದ ಕರಡಿ ಸಂಗಣ್ಣ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಯೋಜನೆ ಜಾರಿಗೆ ಸಂಸದರು ಪ್ರಯತ್ನಿಸುವರೇ?: ಬಿಜೆಪಿಯಲ್ಲಿದ್ದ ಮಾಜಿ ಸಂಸದ ಕರಡಿ ಸಂಗಣ್ಣನವರ ಪ್ರಯತ್ನದ ಫಲವಾಗಿ ನೂತನ ರೈಲು ಮಾರ್ಗದ ಸರ್ವೆ ಪೂರ್ಣಗೊಂಡಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಯು ಕರಡಿ ಸಂಗಣ್ಣವರಿಗೆ ಟಿಕೆಟ್ ನೀಡದ ಕಾರಣ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಸಂಗಣ್ಣನವರು ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರ ಗೆಲುವಿಗೆ ಕಾರಣರಾದರು. ಆದರೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದು, ರಾಜ್ಯದವರೇ ಆದ ವಿ.ಸೋಮಣ್ಣ ಅವರು ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದಾರೆ.

ಬರುವ ಕೇಂದ್ರದ ಬಜೆಟ್‌ನಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬೇಕಾದ ಅನುದಾನ ಮೀಸಲಿಡಲು ನೂತನ ಸಂಸದ ರಾಜಶೇಖರ ಹಿಟ್ನಾಳ ಯಾವ ರೀತಿ ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಕರೆ ಸ್ವೀಕರಿಸದ ಸಂಸದರು: ರೈಲ್ವೆ ಯೋಜನೆ ಬಗ್ಗೆ ಮಾಹಿತಿ ಕೇಳಲು ಕಳೆದ 15 ದಿನಗಳಿಂದ ಸಂಸದ ರಾಜಶೇಖರ ಹಿಟ್ನಾಳ ಮತ್ತು ಅವರ ಆಪ್ತ ಸಹಾಯಕ ವೆಂಕೋಬ ಎಂಬುವರ ಮೊಬೈಲ್‌ಗೆ ಹಲವಾರು ಬಾರಿ ‘ಪ್ರಜಾವಾಣಿ’ ಕರೆ ಮಾಡಿದರೂ ಸಹ ಯಾವುದೇ ಕರೆಗಳನ್ನು ಅವರು ಸ್ವೀಕರಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.