ಪ್ರಾತಿನಿಧಿಕ ಚಿತ್ರ
ರಾಯಚೂರು: ಜಿಲ್ಲೆಯಲ್ಲಿ ಮಳೆ ಅಬ್ಬರಕ್ಕೆ ಮೂರು ಹಳ್ಳಗಳು ಉಕ್ಕಿ ಹರಿದು ಗ್ರಾಮಗಳ ಸಂಪರ್ಕ ಕಡಿದು ಹೋಗಿದೆ.
ಲಿಂಗಸುಗೂರು ಪಟ್ಟಣದಲ್ಲಿ ಮನೆಗೆ ಸಿಡಿಲು ಬಡಿದು ಮನೆಯ ಗೋಡೆ ಕುಸಿದು ಬಿದ್ದಿದೆ. ಗುರುಗುಂಟಾ ಹೋಬಳಿ ವ್ಯಾಪ್ತಿಯ ಗ್ರಾಮದಲ್ಲಿ 16 ಮನೆಗಳು ಕುಸಿದು ಬಿದ್ದಿವೆ.
ಬೀದರ್– ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ (150 ಎ) ಮಸ್ಕಿ–ಸಿಂಧನೂರು ರಸ್ತೆಯ ಬೂತಲದಿನ್ನಿ ಬಳಿ ಬೈಪಾಸ್‌ನ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದೆ. ಕಲಬುರಗಿ–ಬೀದರ್ ಮಾರ್ಗದ ಬಸ್ ಸಂಚಾರಕ್ಕೆ ಸಮಸ್ಯೆ ಯಾಗಿದೆ. ಲಿಂಗಸುಗೂರು ತಾಲ್ಲೂಕಿನ ಆನೆಹೊಸೂರು–ಜಾಗಿರ ನಂದಿಹಾಳ, ಹಟ್ಟಿ ಚಿನ್ನದ ಗಣಿ ಸಮೀಪ ಗುಡದನಾಳ ಹಳ್ಳದ ಸೇತುವೆ ಮೇಲೆ ನೀರು ಹರಿಯುತ್ತಿದೆ. ಲಿಂಗಸುಗೂರು ತಾಲ್ಲೂಕಿನ ಮೇದಿನಾಪೂರ ಹಳ್ಳದ ಪ್ರವಾಹದಲ್ಲಿ 3 ಎಮ್ಮೆಗಳು ಕೊಚ್ಚಿ ಕೊಂಡು ಹೋಗಿವೆ. ಈಚನಾಳ ಬಳಿ ಹಳ್ಳ ಭರ್ತಿಯಾಗಿದ್ದು, ಉಕ್ಕಿ ಹರಿಯುತ್ತಿ ರುವ ನೀರಿನಲ್ಲೇ ತಂದೆ ಮಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ಶಾಲೆಗೆ ಬಿಟ್ಟು ಬಂದಿದ್ದು, ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಯಾದಗಿರಿ ಜಿಲ್ಲೆಯ ಹಲವೆಡೆ ಭಾನುವಾರ ತಡರಾತ್ರಿ ಸುರಿದ ಮಳೆ ಯಿಂದಾಗಿ ಹಳ್ಳಕೊಳ್ಳ ಉಕ್ಕಿ ಹರಿದಿವೆ. ಹುಣಸಗಿ ತಾಲ್ಲೂಕಿನಲ್ಲಿ 23 ಮನೆಗಳಿಗೆ ಹಾನಿಯಾಗಿವೆ. ಹನುಮಸಾಗರ ಗ್ರಾಮ ದಲ್ಲಿ ಕುರಿ, ಕೋಳಿಗಳು ಕೊಚ್ಚಿಕೊಂಡು ಹೋಗಿವೆ. ಕಲಬುರಗಿ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ವಾಡಿ ಯಲ್ಲಿ 10.8 ಸೆಂ.ಮೀ ಮಳೆಯಾಗಿದೆ.
ಪ್ರವಾಹ ಆತಂಕ: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾನದಿಗೆ ನೀರು ಬಿಟ್ಟಿದ್ದು, ಪ್ರವಾಹದ ಆತಂಕವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.