ADVERTISEMENT

ಸಿಂಧನೂರು: ಕಟ್ಟಡದ ಅಲ್ಲಲ್ಲಿ ಬಿರುಕು, ಇದ್ದು ಇಲ್ಲದಂತಿರುವ ರೈತ ಭವನ

ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಜುಲೈ 2022, 19:30 IST
Last Updated 19 ಜುಲೈ 2022, 19:30 IST
ಸಿಂಧನೂರಿನಲ್ಲಿರುವ ರೈತ ಭವನ
ಸಿಂಧನೂರಿನಲ್ಲಿರುವ ರೈತ ಭವನ   

ಸಿಂಧನೂರು: ನಗರದ ಕುಷ್ಟಗಿ ರಸ್ತೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಹೊಸ ಪ್ರಾಂಗಣದ ಪಕ್ಕದಲ್ಲಿ ಮೂರು ದಶಕಗಳ ಹಿಂದೆ ನಿರ್ಮಾಣಗೊಂಡಿರುವ ರೈತ ಭವನ ನಿರುಪಯುಕ್ತವಾಗಿದೆ.

ಈ ಹಿಂದೆ ರೈತ ಭವನದಲ್ಲಿ ಕೆಲ ವರ್ಷ ಬಿಸಿಎಂ ವಸತಿ ನಿಲಯದ ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸಲಾಗಿತ್ತು. ತದ ನಂತರ ಸುಮಾರು 10 ವರ್ಷ ಸಂಚಾರ ಪೊಲೀಸ್ ಠಾಣೆಗೆ ಬಳಸಲಾಯಿತು. ಈಗ ಖಾಲಿ ಇದ್ದು, ನೋಡಲು ಭೂತ ಬಂಗಲೆಯಂತೆ ಕಾಣುತ್ತಿದೆ. ರೈತರು ತಾವು ಬೆಳೆದ ಕೃಷಿ ಉತ್ಪನ್ನ ಮಾರುಕಟ್ಟೆಗೆ ತಂದ ಸಮಯದಲ್ಲಿ ವಿಶ್ರಾಂತಿ ಪಡೆಯಲಿ ಎನ್ನುವ ಉದ್ದೇಶದಿಂದ ಕಟ್ಟಲಾಗಿರುವ ರೈತ ಭವನ ನಿರುಪಯುಕ್ತವಾಗಿರುವುದನ್ನು ಗಮನಿಸಿದರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲದಿರುವುದು ತಿಳಿಯುತ್ತದೆ ಎನ್ನುವುದು ರೈತರ ಆರೋಪ.

ರೈತ ಭವನ ಹಳೆಯದಾಗಿದ್ದು, ಅಲ್ಲಲ್ಲಿ ಬಿರುಕು ಬಿಟ್ಟು ನಿಂತಿದೆ. ಯಾವ ಸಮಯದಲ್ಲಿ ನೆಲಕ್ಕೆ ಉರುಳಿ ಬೀಳುತ್ತದೆಯೋ ಗೊತ್ತಿಲ್ಲ. ಕಟ್ಟಡ ಉರುಳಿ ಬಿದ್ದರೆ ಅಕ್ಕಪಕ್ಕದ ಜನರು ಅಪಾಯಕ್ಕೆ ಒಳಗಾಗುವ ಸಂಭವವಿದೆ ಎಂದು ಹೆಸರು ಹೇಳಲು ಬಯಸದ ಹಮಾಲಿ ಕಾರ್ಮಿಕರೊಬ್ಬರು ತಿಳಿಸಿದರು.

ADVERTISEMENT

ರೈತ ಭವನ ಕಟ್ಟಿದಾಗಿನಿಂದಲೂ ಇಲ್ಲಿಯವರೆಗೆ ಅದನ್ನು ರೈತರ ವಸತಿಗೆ ಕೊಟ್ಟಿರುವುದಿಲ್ಲ. ಇನ್ನು ಮುಂದಾದರೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಮತ್ತು ಆಡಳಿತಾಧಿಕಾರಿ, ಲಿಂಗಸುಗೂರು ಉಪವಿಭಾಗಾಧಿಕಾರಿ ರೈತ ಭವನದಲ್ಲಿ ರೈತರ ವಿಶ್ರಾಂತಿಗಾಗಿ ವ್ಯವಸ್ಥೆ ಮಾಡಬೇಕು. ಸಾಧ್ಯವಾದರೆ ಇರುವ ಕಟ್ಟಡವನ್ನು ದುರಸ್ಥಿಗೊಳಿಸಬೇಕು. ಇಲ್ಲದಿದ್ದರೆ ಕಟ್ಟಡವನ್ನು ನೆಲಸಮಗೊಳಿಸಿ ರೈತರಿಗಾಗಿ ಹೊಸ ಕಟ್ಟಡ ನಿರ್ಮಿಸಿಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮರಳಿ ಆಗ್ರಹಿಸಿದ್ದಾರೆ.

‘ಕಟ್ಟಡವನ್ನು ಉದ್ದೇಶಿತ ಕೆಲಸಕ್ಕಾಗಿ ಬಳಕೆ ಮಾಡದೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಾ ರೈತರಿಗೆ ಅನ್ಯಾಯ ಮಾಡುತ್ತ ಬಂದಿದೆ’ ಎಂದು ಕರ್ನಾಟಕ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಪಾಟೀಲ ಬೇರ್ಗಿ ಆರೋಪಿಸಿದ್ದಾರೆ.

ಲಕ್ಷಗಟ್ಟಲೆ ಖರ್ಚು ಮಾಡಿ ನಿರ್ಮಿಸಿರುವ ರೈತ ಭವನವನ್ನು ರೈತರ ವಸತಿಗೆ ಬಿಟ್ಟುಕೊಡಬೇಕು. ಅಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎನ್ನುವುದು ರೈತ ಸಮುದಾಯದ ಒತ್ತಾಯವಾಗಿದೆ.

**
ಈಗಾಗಲೇ ಎಂಜಿನಿಯರಿಂಗ್ ವಿಭಾಗದಿಂದ ರೈತ ಭವನ ಪರಿಶೀಲನೆ ಮಾಡಿಸಲಾಗಿದೆ. ಅಭದ್ರತೆ ಇರುವುದು ಖಚಿತವಾಗಿದೆ. ಕಟ್ಟಡ ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಿಸಲು ನಿರ್ದೇಶಕರ ಅನುಮತಿ ಕೋರಿ ಪತ್ರ ಕಳುಹಿಸಲಾಗಿದೆ
-ಅಲ್ಲಾಭಕ್ಷಿ, ಕಾರ್ಯದರ್ಶಿ ಎಪಿಎಂಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.