ರಾಯಚೂರು: ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಎರಡನೇ ದಿನದ ಕಾರ್ಯಕ್ರಮಗಳಿಗೆ ಜನ ಸಾಗರವೇ ಹರಿದು ಬಂದಿತು. ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಸಂಭ್ರಮಿಸಿದರು.
ಕಿವಿಗಡಚಿಕ್ಕುವ ಸಂಗೀತವು ಪ್ರೇಕ್ಷಕರ ಮೈನವಿರೇಳಿಸುವಂತೆ ಮಾಡಿತು. ಯುವಕರು ಸಂಗೀತಕ್ಕೆ ಹೆಜ್ಜೆ ಹಾಕಿದರೆ, ಮಕ್ಕಳು ಸಹ ಕುಣಿದು ಕುಪ್ಪಳಿಸಿದರು. ವೇದಿಕೆಯಲ್ಲಿನ ಕಲಾವಿದರಲ್ಲೂ ಇನ್ನಷ್ಟು ಉತ್ಸಾಹ ತುಂಬಿದರು.
ಗಾಯಕ ರಾಜೇಶ್ ಕೃಷ್ಣನ್ ಅವರು ಸುಮಾರು ಒಂದೂವರೆ ತಾಸು ಸಂಗೀತ ಕಾರ್ಯಕ್ರಮ ನೀಡಿ ಸಂಗೀತ ಸೋತೃಗಳ ಮನ ತಣಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆಗೆ ಸಂಜೆ 4ಕ್ಕೆ ಜನ ಪ್ರೇಕ್ಷಕರ ಆಸನಗಳಲ್ಲಿ ಬಂದು ಕುಳಿತಿದ್ದರು.
25 ಸಾವಿರ ಆಸನಗಳನ್ನು ಹಾಕಿದ್ದರು. ಎಲ್ಲ ಕುರ್ಚಿಗಳೂ ಭರ್ತಿಯಾದ ಕಾರಣ ಜನ ಜಿಮಖಾನಾ ಕಟ್ಟಡದ ಮೇಲೆ ಏರಿ ಕುಳಿತು ಕಾರ್ಯಕ್ರಮ ವೀಕ್ಷಿಸಿದರು. ಸಂಗೀತ ಪ್ರೇಮಿಗಳು ಕಾರ್ಯಕ್ರಮದ ಆನಂದ ಸವಿಯುವಂತಾಗಲು ಅಲ್ಲಲ್ಲಿ 10 ಕಡೆ ಪ್ಲಾಸ್ಮಾ ಟಿವಿಗಳನ್ನು ಅಳವಡಿಸಲಾಗಿತ್ತು. ಪ್ಲಾಸ್ಮಾ ಟಿವಿಗಳ ಮುಂದೆಯೂ ಜನ ಭಾರಿ ಸಂಖ್ಯೆಯಲ್ಲಿ ನೆರೆದಿದ್ದರು.
ಇದಕ್ಕೂ ಮೊದಲು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿನ ಮುಖ್ಯ ವೇದಿಕೆಯಲ್ಲಿ ಡಿಕೆಡಿ ತಂಡದವರು ಆಕರ್ಷಕ ನೃತ್ಯ ಪ್ರದರ್ಶಿಸಿದರು. ಆಳ್ವಾಸ್ ತಂಡದ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಪ್ರೇಕ್ಷಕರ ಮನಸೆಳೆದರು.
ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಜನ ಸಮೂಹವನ್ನು ನಿಯಂತ್ರಿಸಲು ಪೊಲೀಸರು ಪ್ರಯಾಸ ಪಡಬೇಕಾಯಿತು. ಲಿಂಗಸುಗೂರು ರಸ್ತೆಯಲ್ಲಿ ಒಟ್ಟು ಮೂರು ಕಡೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ವಾಹನ ದಟ್ಟಣೆ ಹೆಚ್ಚಾದ ಕಾರಣ ಎಸ್‌ಬಿಐ ಬ್ಯಾಂಕಿನ ಹಿಂಭಾಗದ ಖಾಲಿ ಜಾಗದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.