ಸಿಂಧನೂರು: ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಸಿಂಧನೂರು ದಸರಾ ಉತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ದಸರಾ ಉತ್ಸವ ಅಂಗವಾಗಿ ಬುಧವಾರ ಸಂಜೆ ಸ್ಥಳೀಯ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಹಿನ್ನಲೆ ಗಾಯಕ ರಾಜೇಶ್ ಕೃಷ್ಣನ್ ಮತ್ತು ಅವರ ತಂಡದ ಸುಮಧುರ ಗಾಯನಕ್ಕೆ ಪ್ರೇಕ್ಷಕರು ಮನಸೋತರು.
ಮಧ್ಯಾಹ್ನ 4 ಗಂಟೆಯಿಂದಲೇ ನಗರದ ವಿವಿಧ ಬಡಾವಣೆಗಳು ಸೇರಿದಂತೆ ಗ್ರಾಮೀಣ ಪ್ರದೇಶಗಳ ಜನ ತಾಲ್ಲೂಕು ಕ್ರೀಡಾಂಗಣಕ್ಕೆ ಬರತೊಡಗಿದರು. ರಾತ್ರಿ 7.30 ಗಂಟೆ ಆಗುವಷ್ಟರಲ್ಲಿ ಇಡೀ ಕ್ರೀಡಾಂಗಣ ತುಂಬಿತ್ತು.
ಆರಂಭದಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಮತ್ತು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಯುವ ದಸರಾಕ್ಕೆ ಚಾಲನೆ ನೀಡಿದರು.
ಇದೇ ವೇಳೆ ಸಿಂಧನೂರು ದಸರಾ ಉತ್ಸವದ ಯಶಸ್ಸಿಗೆ ಶ್ರಮಿಸಿ ಸಂಪೂರ್ಣ ಸಹಕಾರ ನೀಡಿದ ದಸರಾ ಉತ್ಸವ ಸಮಿತಿಯ ಗೌರವಾಧ್ಯಕ್ಷ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ದೇವೇಂದ್ರಗೌಡ, ತಹಶೀಲ್ದಾರ್ ಅರುಣ್ ಎಚ್.ದೇಸಾಯಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ, ರೈಲ್ವೆ ಭೂ ಸ್ವಾಧೀನ ಅಧಿಕಾರಿ ಶೃತಿ ಕೆ, ಡಿವೈಎಸ್‍ಪಿ ಬಿ.ಎಸ್.ತಳವಾರ ಅವರನ್ನು ಸನ್ಮಾನಿಸಲಾಯಿತು.
ಮದುವೆ ನಂತರ ಸಿಂಧನೂರಿಗೆ ಬಂದಿದ್ದ ನಿರೂಪಕಿ ಅನುಶ್ರೀ ಅವರಿಗೆ ನಗರಸಭೆ ಅಧ್ಯಕ್ಷೆ ಮಂಜುಳಾ ಪ್ರಭುರಾಜ್ ಹಾಗೂ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ ಉಡಿ ತುಂಬಿ ಗೌರವಿಸಿದರು.
ಬಳಿಕ ವೇದಿಕೆಗೆ ಆಗಮಿಸಿದ ಗಾಯಕ ರಾಜೇಶ್ ಕೃಷ್ಣನ್, ಸರಿಗಮಪ ಖ್ಯಾತಿಯ ಪೃಥ್ವಿ ಭಟ್, ಚನ್ನಪ್ಪ ಹುದ್ದಾರ್, ವರ್ಣಾ ಚವ್ಹಾಣ್, ಸಂತೋಷ ದೇವ್ ಸಂಗೀತ ಕಾರ್ಯಕ್ರಮ ಆರಂಭಿಸಿದರು. ರಾಜೇಶ್ ಕೃಷ್ಣನ್ ಅವರು ನಿರಂತರವಾಗಿ ವಿವಿಧ ಗೀತೆಗಳನ್ನು ಹಾಡುವ ಜೊತೆಗೆ ನೃತ್ಯ ಮಾಡಿ ಜನರನ್ನು ರಂಜಿಸಿದರು.
ಮಕ್ಕಳು, ಯುವಕ, ಯುವತಿಯರು, ಮಹಿಳೆಯರು ನೃತ್ಯ ಮಾಡುತ್ತಾ, ಚಪ್ಪಾಳೆ ತಟ್ಟಿ ಕೇಕೆ, ಸೀಳ್ಳೆ ಹೊಡೆದು ಸಂಭ್ರಮಿಸಿದರು. ನಿರೂಪಕಿ ಅನುಶ್ರೀ ವೇದಿಕೆ ಬಂದಾಕ್ಷಣ ನೆರೆದಿದ್ದ ಜನಸಮೂಹ ಕಿರುಚಾಡತೊಡಗಿದರು. ಕಾಮಿಡಿ, ನೃತ್ಯ ಮಾಡುತ್ತಾ ಅನುಶ್ರೀ ಅವರು ನಿರೂಪಣೆ ಮಾಡಿದ್ದು ಮಾತ್ರ ಜನರ ಕಣ್ಮನ ಸೆಳೆಯಿತು. ರಾತ್ರಿ 11 ಗಂಟೆ ಕಾಲ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟದ್ದು ವಿಶೇಷ ಆಕರ್ಷಣೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.