
ಹಟ್ಟಿ ಚಿನ್ನದ ಗಣಿ: ಪಟ್ಟಣದ ಹಳೇ ಗ್ರಾಮ ಪಂಚಾಯಿತಿ ಕಟ್ಟಡವಿದ್ದ ಜಾಗದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ರಾಜೀವಗಾಂಧಿ ಸೇವಾ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡು 12 ವರ್ಷಗಳು ಕಳೆದಿವೆ. ಆದರೆ ಈವರೆಗೂ ಸಂಬಂಧಿಸಿದವರು ಕ್ರಮಕೈಗೊಂಡಿಲ್ಲ.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ₹ 78 ಲಕ್ಷ ವೆಚ್ಚದಲ್ಲಿ ಸೇವಾ ಕೇಂದ್ರ ನಿರ್ಮಾಣಕ್ಕೆ 2011ರಲ್ಲಿ ಚಾಲನೆ ನೀಡಲಾಗಿತ್ತು. ಸೇವಾ ಕೇಂದ್ರದ ಕಟ್ಟಡ ಕಾಮಗಾರಿ 6 ತಿಂಗಳವರೆಗೆ ನಡೆದು ಬಾಗಿಲು ಹಂತದವರೆಗೂ ಬಂದು ನಿಂತಿದೆ. ಆದರೆ ಈವರೆಗೂ ಪೂರ್ಣಗೊಂಡಿಲ್ಲ.
ಹಿಂದೆ ₹ 6 ಲಕ್ಷ ವೆಚ್ಚ ಮಾಡಲಾಗಿದೆ. 2012-13ನೇ ಸಾಲಿನ ಖಾತ್ರಿ ಕ್ರಿಯಾಯೋಜನೆಯಲ್ಲಿ ₹ 3 ಲಕ್ಷ ಮೀಸಲಿಡಲಾಗಿತ್ತು. ಆದರೆ, ಈ ಮೊತ್ತ ಸಾಕಾಗುವುದಿಲ್ಲ ಎಂದು ಬಳಸಿಕೊಳ್ಳಲಿಲ್ಲ. ಹೀಗಾಗಿ ಕಾಮಗಾರಿ ನಡೆದಿಲ್ಲ. 2013-14ನೇ ಸಾಲಿನ ಕ್ರಿಯಾಯೋಜನೆಯಲ್ಲಿ ಸೇವಾ ಕೇಂದ್ರದ ಉಳಿದ ಕಾಮಗಾರಿಗೆ ₹ 12 ಲಕ್ಷ ಮೊತ್ತವನ್ನು ಕ್ರಿಯಾಯೋಜನೆಯಲ್ಲಿ ಸೇರಿಸುವ ಪ್ರಯತ್ನವನ್ನು ಗ್ರಾಮ ಪಂಚಾಯಿತಿ ಆಡಳಿತ ಮಾಡಿತ್ತು. ಆದರೆ, ಅದು ಸಾಧ್ಯವಾಗದೆ ಕಾಮಗಾರಿ ಹಾಗೆ ಉಳಿದಿದೆ.
2014-15 ಸಾಲಿನಲ್ಲಿ ₹ 6 ಲಕ್ಷ ಮೊತ್ತವನ್ನು ಸೇವಾ ಕೇಂದ್ರದ ಕಾಮಗಾರಿಗಾಗಿ ಖಾತ್ರಿ ಕ್ರಿಯಾಯೋಜನೆಯಲ್ಲಿ ಸೇರಿಸಲಾಗಿತ್ತು. ಗ್ರಾಮ ಪಂಚಾಯಿತಿ ಆಡಳಿತದ ನಿರಾಸಕ್ತಿಯಿಂದ ಹಣ ದೊರಕದೆ, ಕಾಮಗಾರಿ ಆಗಲಿಲ್ಲ. ಪ್ರತಿ ವರ್ಷ ಉದ್ಯೋಗ ಖಾತ್ರಿ ಯೋಜನೆ ಕ್ರಿಯಾಯೋಜನೆಯಲ್ಲಿ ಸೇರಿಸಿದರೂ ಮಂಜೂರಾತಿ ದೊರೆಯದೆ ಕಾಮಗಾರಿ ನನೆಗುದಿಗೆ ಬೀಳಲು ಕಾರಣವಾಗಿದೆ.
ಹಟ್ಟಿ ಪಟ್ಟಣವು ಗ್ರಾ.ಪಂನಿಂದ ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿದೆ. ಉದ್ಯೋಗ ಖಾತ್ರಿ ಯೋಜನೆ ಪಟ್ಟಣ ಪಂಚಾಯಿತಿಗೆ ಲಭ್ಯವಾಗುವುದಿಲ್ಲ. ಜನರಿಗೆ ಉಪಯೋಗ ಆಗಬೇಕಿದ್ದ ಸೇವಾ ಕೇಂದ್ರ ಕಟ್ಟಡ ಪಾಳು ಬಿದ್ದಿದೆ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಸೇವಾ ಕೇಂದ್ರದ ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನವಾಗಿದೆ. ಪಂಚಾಯಿತಿಗೆ ಪಟ್ಟಣ ಬರುವ ಅನುದಾನದಲ್ಲಿ ಈ ಕಟ್ಟಡವನ್ನು ಪೂರ್ಣಗೊಳಿಸಬೇಕಾಗಿದೆ.
ಮಳೆ, ಗಾಳಿ, ಚಳಿಗೆ ಕಟ್ಟಡಕ್ಕೆ ಬಳಸಿದ ಸಿಮೇಂಟ್ ಉದುರುತ್ತಿದೆ. ಬಾಗಿಲು, ಕಿಟಕಿಗಳನ್ನು ಹುಳು ತಿಂದ್ದು, ಕಬ್ಬಿಣದ ಸರಳುಗಳು ಮಾತ್ರ ಉಳಿದಿವೆ. ಕಟ್ಟಡ ಕುಸಿಯುವ ಮುನ್ನ ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸೇವಾ ಕೇಂದ್ರಕ್ಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಕ್ರಮಕ್ಕೆ ಮುಂದಾಗಲಾಗುವುದುಜಗನಾಥ ಜೋಷಿ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ
ಸಾರ್ವಜನಿಕರಿಗೆ ಉಪಯೋಗ ಆಗಬೇಕಿದ್ದ ಸೇವಾ ಕೇಂದ್ರ ಪಾಳು ಬಿದ್ದಿದೆ. ಸಂಬಂದಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಲಿಲಾಲು ಪೀರ್ ಸಮಾಜ ಸೇವಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.