ADVERTISEMENT

ಅಕ್ರಮ ಸಾಗಣೆ; 120.10 ಕ್ವಿಂಟಲ್ ಪಡಿತರ ಅಕ್ಕಿ ವಶ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 4:29 IST
Last Updated 19 ಫೆಬ್ರುವರಿ 2026, 4:29 IST
ಸಿಂಧನೂರಿನ ಆಹಾರ ಇಲಾಖೆಯ ಅಧಿಕಾರಿಗಳು ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದ ಕಂಟೇನರ್ ಲಾರಿಯ ಮೇಲೆ ಬುಧವಾರ ದಾಳಿ ನಡೆಸಿ ವಶಕ್ಕೆ ಶಹರ ಪೊಲೀಸ್ ಠಾಣೆಗೆ ತಂದಿರುವುದು
ಸಿಂಧನೂರಿನ ಆಹಾರ ಇಲಾಖೆಯ ಅಧಿಕಾರಿಗಳು ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದ ಕಂಟೇನರ್ ಲಾರಿಯ ಮೇಲೆ ಬುಧವಾರ ದಾಳಿ ನಡೆಸಿ ವಶಕ್ಕೆ ಶಹರ ಪೊಲೀಸ್ ಠಾಣೆಗೆ ತಂದಿರುವುದು   

ಸಿಂಧನೂರು: ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಸಂದರ್ಭದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಬುಧವಾರ ದಾಳಿ ನಡೆಸಿ 120.10 ಕ್ವಿಂಟಲ್ ಅಕ್ಕಿ ಹಾಗೂ ಕಂಟೇನರ್ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ನಗರದ ಕುಷ್ಟಗಿ ರಸ್ತೆಯ ಕುರಿ ಸಂತೆ ಆವರಣದಲ್ಲಿ ಅನಧಿಕೃತವಾಗಿ ಪಡಿತರ ಅಕ್ಕಿಯನ್ನು ಲಾರಿಯಿಂದ ಕಂಟೇನರ್ ಲಾರಿಯಲ್ಲಿ ಲೋಡ್ ಮಾಡುತ್ತಿದ್ದ ವಿಷಯ ಕುರಿತು ಖಚಿತ ಮಾಹಿತಿಯ ಮೇರೆಗೆ ಆಹಾರ ಇಲಾಖೆಯ ಶಿರಸ್ತೇದಾರ್ ಆನಂದ ಮೋಹನ್, ನಿರೀಕ್ಷಕ ಹನುಮೇಶ, ತಹಶೀಲ್ದಾರ್ ಕಚೇರಿಯ ಗ್ರಾಮ ಆಡಳಿತ ಅಧಿಕಾರಿ ಮಹ್ಮದ್ ಯೂನೂಸ್, ಸಿಬ್ಬಂದಿ ಬಾಷಾ ಹಾಗೂ ಪೊಲೀಸ್ ಕಾನ್‍ಸ್ಟೆಬಲ್ ಸಣ್ಣಬಸಣ್ಣ ಅವರು ದಾಳಿ ನಡೆಸಿ, ಪರಿಶೀಲಿಸಿದಾಗ ಪ್ಲಾಸ್ಟಿಕ್ ಚೀಲಗಳಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ಕಂಡು ಬಂದಿವೆ.

ಕಂಟೇನರ್ ಲಾರಿಯ ಚಾಲಕ ಮಿರ್ಜಾ ಖಾಸಿಮುಲ್ಲಾ ಹಕ್ ಬೇಗ್‍ನನ್ನು ವಿಚಾರಿಸಿದಾಗ ಅಕ್ಕಿಯ ಬಗ್ಗೆ ಯಾವುದೇ ದಾಖಲೆ, ರಶೀದಿ ಇರಲಿಲ್ಲ. ಸಿಂಧನೂರಿನ ಇಂದಿರಾನಗರದ ಇಮಾಮ್‍ಸಾಬ್ ಎನ್ನುವವರ ಲಾರಿಯಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದ ಅಕ್ಕಿಯನ್ನು ತಂದು ಕಂಟೇನರ್‌ನಲ್ಲಿ ಲೋಡ್ ಮಾಡಿ, ಪೋತ್ನಾಳ ಪಟ್ಟಣದ ಗುರುರಾಜ ಶೆಟ್ಟಿ ಎನ್ನುವವರ ಹತ್ತಿರ ತೆಗೆದುಕೊಂಡು ಹೋಗಿ, ಅವರು ಹೇಳುವ ಕಡೆ ಅನ್‍ಲೋಡ್ ಮಾಡಿ ಬರುವಂತೆ ಹೇಳಿದ್ದಾರೆ ಆಹಾರ ಇಲಾಖೆ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾನೆ.

ADVERTISEMENT

ಇಮಾಮ್‍ಸಾಬ್ ಪಡಿತರ ಅಕ್ಕಿ ಸಂಗ್ರಹಿಸಿ ಅದನ್ನು ಪೋತ್ನಾಳ ಪಟ್ಟಣದ ಗುರುರಾಜ ಶೆಟ್ಟಿ ಮುಖಾಂತರ ಅನಧಿಕೃತವಾಗಿ ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುವುದು ಸ್ಪಷ್ಟವಾಗಿ ಕಂಡು ಬಂದಿದೆ. ಹೀಗಾಗಿ ₹8 ಲಕ್ಷ ಮೌಲ್ಯದ 120.10 ಕ್ವಿಂಟಲ್ ಅಕ್ಕಿ ವಶಕ್ಕೆ ಪಡೆದು ಚಾಲಕ ಸೇರಿ ಮೂವರ ವಿರುದ್ಧ ಆಹಾರ ಇಲಾಖೆಯ ನಿರೀಕ್ಷಕ ಹನುಮೇಶ ಹಾಗೂ ಶಿರಸ್ತೇದಾರ್ ಆನಂದ ಮೋಹನ್ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸಿಂಧನೂರಿನ ಕುರಿ ಸಂತೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ನೂರಾರು ಪ್ಲಾಸ್ಟಿಕ್ ಚೀಲಗಳ ಮೂಲಕ ಕಂಟೇನರ್‍ಯಲ್ಲಿ ತುಂಬಿರುವ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.