ADVERTISEMENT

ರಾಯಚೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ನೇಮಕ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 16:35 IST
Last Updated 6 ಫೆಬ್ರುವರಿ 2024, 16:35 IST
   

ರಾಯಚೂರು: ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ವೈದ್ಯರ ಕೊರತೆ ನೀಗಿಸಲು ಹತ್ತು ದಿನಗಳ ಹಿಂದೆಯೇ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು ತಿಳಿಸಿದ್ದಾರೆ.

‘ಸರ್ಕಾರಿ ಆಸ್ಪತ್ರೆಗೆ ಬೇಕಿದೆ ಇನ್ನಷ್ಟು ಸೌಲಭ್ಯ’ ಶೀರ್ಷಿಕೆ ಅಡಿಯಲ್ಲಿ ಫೆ.5ರಂದು ‘ಪ್ರಜಾವಾಣಿ’ಯಲ್ಲಿ ನಮ್ಮ ಜನ ನಮ್ಮ ಧ್ವನಿ ಅಂಕಣದಲ್ಲಿ ಪಕ್ರಟವಾದ ವರದಿಗೆ ಸ್ಪಂದಿಸಿ ಡಾ.ಸುರೇಂದ್ರಬಾಬು ಪ್ರತಿಕ್ರಿಯೆ ನೀಡಿದ್ದಾರೆ.

2024ರಲ್ಲಿ ಎಂಬಿಬಿಎಸ್‌ ಒಂದು ವರ್ಷದ ಅವಧಿಗೆ ಗ್ರಾಮೀಣ ಸೇವೆ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಲಿಂಗಸುಗೂರು, ದೇವದುರ್ಗ, ಸಿಂಧನೂರು, ಮಾನ್ವಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಕವಿತಾಳ, ಅರಕೇರಾ, ಮುದಗಲ್‌ನ ಸಮುದಾಯ ಆರೋಗ್ಯ ಕೇಂದ್ರ, ಬಾದರ್ಲಿ, ತೋರಣದಿನ್ನಿ, ಮೆದಿಕಿನಾಳ, ಕುರ್ಡಿ, ಈಚನಾಳ, ಬಳಗಾನೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ಒಟ್ಟು 22 ಜನರಿಗೆ ನೇಮಕಾತಿ ಆದೇಶ ನೀಡಲಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಮಕ್ಕಳ ಆರೋಗ್ಯ, ನಮ್ಮ ಕ್ಲಿನಿಕ್ ಹಾಗೂ ಆರ್‌ಎನ್‌ಇಟಿಸಿಪಿ ಯೋಜನೆ ಅಡಿಯಲ್ಲಿ ಒಟ್ಟು 24 ವೈದ್ಯರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 8 ವೈದ್ಯರು ಹಾಜರಾಗಿದ್ದಾರೆ. ಇನ್ನುಳಿದವರು ಶೀಘ್ರ ಹಾಜರಾಗಲಿದ್ದಾರೆ ಎಂದು ತಿಳಿಸಿದ್ದಾರೆ.

ರಾಯಚೂರು ತಾಲ್ಲೂಕಿನ ಇಡಪನೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಚಂದ್ರಬಂಡಾ ಪ್ರಾಥಮಿಕ ಆರೋಗ್ಯ ಕೇಂದ್ರ, ದೇವದುರ್ಗ ತಾಲ್ಲೂಕಿನ ಗಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಗಾಣದಾಳದ ಪ್ರಾಥಮಿಕ ಆರೋಗ್ಯ ಕೇಂದ್ರ, ಮಾನ್ವಿಯ ಪೋತ್ನಾಳದ ಪ್ರಾಥಮಿಕ ಆರೋಗ್ಯ ಕೇಂದ್ರ, ಲಿಂಗಸುಗೂರು ತಾಲ್ಲೂಕಿನ ಬಯ್ಯಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ, ಅನ್ವರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರ ನೇಮಕಾತಿಗೂ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರದ ಆದೇಶ ಬಂದ ತಕ್ಷಣ ಈ ಹುದ್ದೆಗಳಿಗೂ ನೇಮಕ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.