ADVERTISEMENT

ಪ್ರಾದೇಶಿಕ ಅಸಮತೋಲನದ ವಿರುದ್ಧ ಜಾಗೃತಿ ಸಮಾವೇಶ: ರಾಘವೇಂದ್ರ ಕುಷ್ಟಗಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 15:26 IST
Last Updated 9 ಆಗಸ್ಟ್ 2021, 15:26 IST
ರಾಘವೇಂದ್ರ ಕುಷ್ಟಗಿ
ರಾಘವೇಂದ್ರ ಕುಷ್ಟಗಿ   

ರಾಯಚೂರು: ಕಲ್ಯಾಣ ಕರ್ನಾಟಕದ ಅಭಿವೃದ್ದಿ ಹಾಗೂ ಸಚಿವ ಸ್ಥಾನ ನೀಡುವಲ್ಲಿ ರಾಜ್ಯ ಸರ್ಕಾರವು ತಾರತಮ್ಯ ಮಾಡಿದೆ. ಪ್ರಾದೇಶಿಕ ಅಸಮಾಧಾನ ಖಂಡಿಸಿ ಪ್ರಗತಿಪರ ಮುಖಂಡರೊಂದಿಗೆ ಈ ಭಾಗದ ಜಿಲ್ಲಾಪ್ರವಾಸ ಮಾಡಿ ಶೀಘ್ರವೇ ಬೃಹತ್ ಜಾಗೃತಿ ಸಮಾವೇಶ ಮಾಡಲಾಗುವುದು ಎಂದು ಹೈದರಾಬಾದ್‌ ಕರ್ನಾಟಕ ಜನಾಂದೋಲನ ವೇದಿಕೆಯ ಸಂಸ್ಥಾಪಕ ರಾಘವೇಂದ್ರ ಕುಷ್ಟಗಿ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್, ಬಿಜೆಪಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಮಾನತೆಯಿಂದ ಕಾಣದೆ ಸಾಕಷ್ಟು ವಿಚಾರದಲ್ಲಿ ಅಸಮಾನತೆ ಅನುಸರಿಸಿದ್ದಾರೆ. ನೂತನ ಸರ್ಕಾರ 371(ಜೆ) ಪ್ರಕಾರ ಈ ಭಾಗಕ್ಕೆ 10 ಸಚಿವ ಸ್ಥಾನ ನೀಡಬೇಕು. ಕೇವಲ ಇಬ್ಬರಿಗೆ ಸಚಿವಸ್ಥಾನ ನೀಡಿದ್ದಾರೆ ಎಂದರು.

ಸರ್ಕಾರ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಆಸ್ಪದ ನೀಡದೇ ಅಸಮಾನತೆ ನಿವಾರಣೆ ಮಾಡಬೇಕು. ಜಿಲ್ಲೆಯಲ್ಲಿ ಇಬ್ಬರು ಬಿಜೆಪಿ ಶಾಸಕರಿದ್ದರೂ ಸಚಿವ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಶಕ್ತಿ ಪ್ರದರ್ಶನ ಮಾಡಿ ಹಕ್ಕು ಪಡೆಯುವ ಸಾಮರ್ಥ್ಯ ಶಾಸಕರಿಗೆ ಇಲ್ಲ ಎಂದು ಹೇಳಿದರು.

ADVERTISEMENT

ಜಿಲ್ಲೆಗೆ ಸಚಿವ ಸ್ಥಾನ ವಂಚನೆ, 371ಜೆ ಅಸಮರ್ಪಕ ಜಾರಿ, ಅಭಿವೃದ್ದಿಯಲ್ಲಿ ಹಿನ್ನಡೆ, ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಅನ್ಯಾಯ, ಪ್ರಾದೇಶಿಕ ಅಸಮಾನತೆ ಸೇರಿದಂತೆ ಸಮಗ್ರ ನಿರ್ಲಕ್ಷ್ಯ ಧೋರಣೆಯ ಖಂಡಿಸಿ ಈ ಭಾಗದ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತೇವೆ. ಐಐಟಿ ಸ್ಥಾಪನೆಗೆ ಒತ್ತಾಯಿಸಿ ಹೋರಾಟದಲ್ಲಿ ತೊಡಗಿಸಿಕೊಂಡ ವಿವಿಧ ಸಂಘಟನೆಗಳ ಪದಾಧಿಕಾರಿಗಳ ನೇತೃತ್ವದಲ್ಲಿ ಬೃಹತ್ ಸಮಾವೇಶ ಮಾಡಲಾಗುವುದು ಎಂದು ಹೇಳಿದರು.

ಮುಖಂಡ ಜನಾಂದೋಲನ ವೇದಿಕೆಯ ಜಿಲ್ಲಾಧ್ಯಕ್ಷ ಖಾಜಾ ಸ್ಲಂ ಅಹ್ಮದ್, ವೀರಣ್ಣ ಶೆಟ್ಟಿ ಭಂಡಾರಿ, ಜಾನ್ ವೆಸ್ಲಿ, ಡಾ.ಯು.ಮೋಹನ ರಾವ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.